Advertisement

‘ಅಮ್ಮಾ…ನನಗೆ ನೀನು ಬೇಕಮ್ಮಾ!’; ಈ ಕಂದನ ಕಣ್ಣೀರು ಕಂಡಾದರೂ ನಾವೆಲ್ಲಾ ಮನೆಯಲ್ಲೇ ಇರೋಣ

09:10 AM Apr 09, 2020 | Hari Prasad |

ಬೆಳಗಾವಿ: ಈ ಕೋವಿಡ್ 19 ಮಹಾಮಾರಿ ವಿಶ್ವಾದ್ಯಂತ ಮನುಷ್ಯರನ್ನು ಮನುಷ್ಯರಿಂದ ದೂರಗೊಳಿಸುವ ಕೆಲಸ ಮಾಡುತ್ತಿದೆ. ಸೋಂಕಿಗೆ ಒಳಗಾದವರು ಅಥವಾ ಶಂಕಿತ ವೈರಸ್ ಸೋಂಕಿತರು ಹಲವು ದಿನಗಳ ಕಾಲ ತಮ್ಮವರನ್ನೆಲ್ಲಾ ಬಿಟ್ಟು ಪ್ರತ್ಯೇಕವಾಗಿ ಇರಬೇಕಾದ ಸ್ಥಿತಿಯನ್ನು ಈ ಮಾರಕ ವೈರಸ್ ನಿರ್ಮಾಣ ಮಾಡಿದೆ.

Advertisement

ಇದೇ ರೀತಿಯಲ್ಲಿ ಕೋವಿಡ್ ವೈರಸ್ ಸೋಂಕಿತರ ಆರೈಕೆ ಮಾಡುವ ಆರೋಗ್ಯ ಸಿಬ್ಬಂದಿಗಳೂ ಸಹ ತಮ್ಮ ಮನೆಗೆ ಹೋಗಲಾಗದೆ ಹೋದರೂ ಮನೆ ಸದಸ್ಯರ ಜೊತೆ ಬೆರೆಯಲಾಗದ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ. ಇಂತಹ ಅದೆಷ್ಟೋ ವಿಡಿಯೋಗಳನ್ನು ನಾವು ಪ್ರತೀ ನಿತ್ಯ ನೋಡುತ್ತಲೇ ಇರುತ್ತೇವೆ ಮತ್ತು ಅವೆಲ್ಲಾ ವಿಶ್ವದ ನಾನಾ ದೇಶಗಳಲ್ಲಿ ನಡೆದಿರುವ ಘಟನೆಗಳಾಗಿರಬಹುದು. ಆದರೆ ಇದೀಗ ನಮ್ಮ ರಾಜ್ಯದಲ್ಲೇ ಇಂತಹದ್ದೊಂದು ಮನಮಿಡಿಯುವ ಘಟನೆ ನಡೆದಿರುವುದು ವರದಿಯಾಗಿದೆ.

ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ನಿರ್ಮಿಸಲಾಗಿರುವ ಕೋವಿಡ್ ಸ್ಪೆಷಲ್ ವಾರ್ಡ್ ನಲ್ಲಿ ಆರೋಗ್ಯ ಶುಶ್ರೂಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಗಂಧ ಅವರು ಕಳೆದ 15 ದಿನಗಳಿಂದ ಮನೆಗೇ ಹೋಗದೆ ಆಸ್ಪತ್ರೆಯಲ್ಲೇ ಇದ್ದಾರೆ. ಆದರೆ, ಅಮ್ಮನ ನೆನಪು ತಡೆಯಲಾರದೇ ಅವರ ಪುಟ್ಟ ಮಗಳು ಐಶ್ವರ್ಯಾ ನಿನ್ನೆ ಅಮ್ಮನನ್ನು ಹುಡುಕಿಕೊಂಡು ಅವರಿದ್ದಲ್ಲಿಗೇಬಂದಿದ್ದಳು.

ಬಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಸಂಬಂಧಿತ ವಿಶೇಷ ಕರ್ತವ್ಯದಲ್ಲಿರುವ ಆರೋಗ್ಯ ಸಿಬ್ಬಂದಿಗಳಿಗೆ ಹೊಟೇಲ್ ನಲ್ಲಿ ಕ್ವಾರೆಂಟೈನ್ ಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಗೆ ಅಮ್ಮನನ್ನು ನೋಡಲು ಬಂದ ಐಶ್ವರ್ಯಾ, ತಾಯಿಯನ್ನು ಕಂಡೊಡನೆ ಅವರ ಬಳಿ ಹೋಗಲು ಚಡಪಡಿಸುತ್ತಿದ್ದ ದೃಶ್ಯ ಮನಕಲುಕುವಂತಿತ್ತು.

ಹೊಟೇಲ್ ಆವರಣದ ಹೊರಗೆ ಮಗಳು ಬೈಕ್ ನಲ್ಲೇ ಕುಳಿತು ದೂರದಲ್ಲಿ ನಿಂತಿದ್ದ ಅಮ್ಮನ್ನನು ಕಂಡು ‘ಮಮ್ಮೀ ಬಾ..’ ಎಂದು ಅಳುತ್ತಾ ಕೈ ಚಾಚುತ್ತಿದ್ದ ದೃಶ್ಯ ಎಂತಹ ಕಲ್ಲುಹೃದಯದವರ ಮನಸ್ಸನ್ನೂ ಕರಗಿಸುಬಂತಿತ್ತು. ಇಷ್ಟು ಮಾತ್ರವಲ್ಲದೇ ಈ ಕೋವಿಡ್ ಮಹಾಮಾರಿಯ ನಿಷ್ಕಾರುಣ್ಯತೆಯ ಚಿತ್ರಣವವನ್ನು ನಮಗೆ ಕಟ್ಟಿಕೊಡುವಂತಿತ್ತು.

Advertisement

ನರ್ಸ್ ಸುಗಂಧ ಅವರಂತೆ ಲಕ್ಷಾಂತರ ವೈದ್ಯಕೀಯ ಸಿಬ್ಬಂದಿಗಳು ತಮ್ಮ ಮನೆ-ಸಂಸಾರವನ್ನು ತಾತ್ಕಾಲಿಕವಾಗಿ ತ್ಯಜಿಸಿ ನಮ್ಮ ಒಳಿತಿಗಾಗಿ ಕೋವಿಡ್ ಮಹಾಮಾರಿಯ ವಿರುದ್ಧ ಹೋರಾಡುತ್ತಿದ್ದಾರೆ – ಇವರೆಲ್ಲರ ಮೇಲಿನ ಗೌರವ, ಅಭಿಮಾನಕ್ಕಾದರೂ ನಾವೆಲ್ಲರೂ ಪ್ಲೀಸ್ ಮನೆಯಲ್ಲೇ ಇರೋಣ.
– ಈ ಲಾಕ್ ಡೌನ್ ನಮ್ಮದೇ ಒಳಿತಿಗಾಗಿ ಮತ್ತು ಆರೋಗ್ಯದ ಸುರಕ್ಷತೆಗಾಗಿ.

ಅಮ್ಮ ಮಗಳ ಈ ಭಾವನಾತ್ಮಕ ಭೇಟಿಯ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಇದನ್ನು ಕಂಡ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸಹ ಭಾವುಕರಾದರು ಮತ್ತು ನರ್ಸ್ ಸುಂಗಂಧ ಅವರಿಗೆ ಕರೆ ಮಾಡಿ ಮಾತನಾಡಿದ ಮುಖ್ಯಮಂತ್ರಿಯವರು ಅವರ ಸೇವೆಯನ್ನು ಸ್ಮರಿಸಿಕೊಂಡು ಮಾನಸಿಕ ಸ್ಥೈರ್ಯವನ್ನು ತುಂಬಿದ್ದು ವಿಶೇಷವಾಗಿತ್ತು.


Advertisement

Udayavani is now on Telegram. Click here to join our channel and stay updated with the latest news.

Next