Advertisement
ಕಳ್ಳರನ್ನು ಹೆಡೆಮುರಿ ಕಟ್ಟಿ, ಮಂಡಿಯೂರಿ ಕೂರುವಂತೆ ಮಾಡುವುದು ಪೊಲೀಸರ ಕೆಲಸ. ಆದರೆ, ಕಳೆದ ವಾರ ಮಲ್ಲೇಶ್ವರ ಸಂಚಾರ ಪೊಲೀಸ್ ಠಾಣೆಯಲ್ಲಿ ಬೇರೆಯದೇ ಚಿತ್ರಣವಿತ್ತು. ಅಲ್ಲಿ, ಟ್ರಾಫಿಕ್ ಪೊಲೀಸರೇ ಒಬ್ಬೊಬ್ಬರಾಗಿ ಮಂಡಿ ಚಾಚಿ, ಕುರ್ಚಿಯ ಮೇಲೆ ಕುಳಿತಿದ್ದರು. ಅವರ ಎದುರಿಗಿದ್ದ ದಿನೇಶ್ ಬಾಬು, ಪೊಲೀಸರ ಕೈ-ಕಾಲಿಗೆ ಎಣ್ಣೆ ಹಚ್ಚಿ, ಮಸಾಜ್ ಮಾಡುತ್ತಿದ್ದರು. ಮಸಾಜ್ ಮಾಡಿಸಿಕೊಂಡು ನಿರಾಳರಾದ ನಂತರ ಪೊಲೀಸರು ಮತ್ತೆ ತಮ್ಮ ಡ್ನೂಟಿಗೆ ಧಾವಿಸುತ್ತಿದ್ದರು.
Related Articles
Advertisement
ನೀವೂ ಮಸಾಜ್ ಮಾಡ್ಕೊಳ್ಳಿ…: ಟ್ರಾಫಿಕ್ ಪೊಲೀಸರಷ್ಟೇ ಅಲ್ಲ, ಕಂಡಕ್ಟರ್‌ಗಳು, ಮೆಟ್ರೋ ಸೆಕ್ಯೂರಿಟಿ ಮುಂತಾದ ಕೆಲಸ ಮಾಡುವವರು ದಿನವಿಡೀ ನಿಂತೇ ಇರಬೇಕಾಗುತ್ತೆ. ಅವರೆಲ್ಲರೂ ದಿನಾ ಸಂಜೆ ಕೈ-ಕಾಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಆಯುರ್ವೇದ ಅಂಗಡಿಗಳಲ್ಲಿ ಸಿಗುವ ಮಸಾಜ್ ಎಣ್ಣೆ (ಎಣ್ಣೆಯಲ್ಲಿ ಮೆಂತಾಲ್ ಇರಬಾರದು/ ಉರಿ ಬರಬಾರದು) ಅಥವಾ ಸಾಸಿವೆ ಎಣ್ಣೆಯನ್ನು ಕೈ-ಕಾಲಿಗೆ ಹಚ್ಚಿ, ನಯವಾಗಿ ತಿಕ್ಕಿ ಮಸಾಜ್ ಮಾಡಿ, ಬಿಸಿನೀರಿನಲ್ಲಿ ಉಪ್ಪು ಹಾಕಿ, ಕಾಲನ್ನು ಇಟ್ಟುಕೊಂಡು ಇಪ್ಪತ್ತು ನಿಮಿಷ ಕಣ್ಮುಚ್ಚಿ ಕುಳಿತರೆ, ದಿನದ ದಣಿವು ಕಡಿಮೆಯಾಗುತ್ತದೆ ಅಂತಾರೆ ದಿನೇಶ್.
ಅಂಗಡಿ ನಡೆಸುತ್ತಾರೆ…: ಜೀವನಾಧಾರಕ್ಕೆ ಅಂಗಡಿ ನಡೆಸುತ್ತಿರುವ ದಿನೇಶ್ ಬಾಬು, ಮಸಾಜ್ ಸೇವೆಯನ್ನು ಪ್ರವೃತ್ತಿಯಾಗಿ ನಡೆಸುತ್ತಿದ್ದಾರೆ. ಜೊತೆಗೆ, ಬಾಲ್ಯದಿಂದಲೂ ಸಿನಿಮಾ ಡ್ಯಾನ್ಸರ್ ಆಗುವ ಕನಸು ಕಾಣುತ್ತಿದ್ದ ಇವರು, ಬೇಸಿಗೆ ಶಿಬಿರಗಳಲ್ಲಿ ಮಕ್ಕಳಿಗೆ ಡ್ಯಾನ್ಸ್ ಕೂಡಾ ಹೇಳಿ ಕೊಡುತ್ತಾರೆ.
ಅಪ್ಪನ ಕಷ್ಟ ನೋಡಿದ್ದೆ…: ನನ್ನ ತಂದೆಯವರು ರೇಲ್ವೆ ಪ್ರೊಟೆಕ್ಷನ್ ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಗನ್ ಹಿಡಿದು, ದಿನವಿಡೀ ರೇಲ್ವೆ ಸ್ಟೇಷನ್ ಎದುರು ನಿಲ್ಲಬೇಕಿತ್ತು. ಸಣ್ಣವನಿದ್ದಾಗ ಅಪ್ಪನ ಕೆಲಸ ಎಷ್ಟು ಕಷ್ಟದ್ದು ಅಂತ ನನಗೆ ಗೊತ್ತಿರಲಿಲ್ಲ. ಆದರೆ, ನಾನು ಏಳನೇ ಕ್ಲಾಸ್‌ನ ಪಬ್ಲಿಕ್ ಪರೀಕ್ಷೆ ಸಮಯದಲ್ಲಿ ಅಪ್ಪ ನನ್ನನ್ನು ಸ್ಟೇಷನ್‌ಗೆ ಕರೆದುಕೊಂಡು ಹೋಗಿದ್ದರು. ಮನೆಯಲ್ಲಿ ಇದ್ದರೆ ನಾನು ಓದುವುದಿಲ್ಲ ಅಂತ!
ಸೆಕ್ಯುರಿಟಿಗಳಿಗಾಗಿ ಮೀಸಲಿದ್ದ ಕೋಣೆಯಲ್ಲಿ ಕುಳಿತು ನಾನು ಓದಿಕೊಳ್ಳುತ್ತಿದ್ದೆ. ಅಪ್ಪ ಅವತ್ತು ಬೆಳಗ್ಗೆ 8ಕ್ಕೆ ಗನ್ ಹಿಡಿದು ನಿಂತವರು. ರಾತ್ರಿ 10 ಗಂಟೆವರೆಗೂ ನಿಂತೇ ಇದ್ದರು. ಆಗ ನನಗೆ ಅವರ ಕಷ್ಟ ಅರ್ಥವಾಯ್ತು. ಅದಾದ ನಂತರ, ಪ್ರತಿದಿನ ಅಪ್ಪ ಕೆಲಸ ಮುಗಿಸಿ ಬಂದಾಗ ಅವರಿಗೆ ಮಸಾಜ್ ಮಾಡುವುದು, ಕೈ- ಕಾಲು ತುಳಿಯುವುದು ಮಾಡುತ್ತಾ ಅವರ ಆಯಾಸವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೆ. ಈಗ ನನಗೆ ಟ್ರಾಫಿಕ್ ಪೊಲೀಸ್‌ರಿಗೆ ಮಸಾಜ್ ಮಾಡಲು ಅವಕಾಶ ಸಿಕ್ಕಿರುವುದು ಖುಷಿ ಕೊಟ್ಟಿದೆ.
ಇದು ನಮ್ಮ ಕಮಿಷನರ್ ಸಾಹೇಬರಿಂದ ಬಂದಿರುವ ಸೂಚನೆ. ದಿನಾ 8-10 ಗಂಟೆ ನಿಂತೇ ಕೆಲಸ ಮಾಡುವ ಟ್ರಾಫಿಕ್ ಪೊಲೀಸರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಅಂತ ಅವರು ಹೇಳುತ್ತಿರುತ್ತಾರೆ. ಕೈ- ಕಾಲಿಗೆ ಮಸಾಜ್ ನೀಡಿದರೆ ಉಪಯೋಗ ಆಗಬಹುದು ಅಂತ ದಿನೇಶ್ ಬಾಬು ಅವರನ್ನು ಕರೆಸಿದೆವು. ಮಸಾಜ್ ಸಂದರ್ಭದಲ್ಲಿ ಸಿಬ್ಬಂದಿಯ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ತಿಳಿಯಿತು. ಒಬ್ಬರಿಗೆ ಕುತ್ತಿಗೆಯೇ ಸ್ವಲ್ಪ ವಾರೆಯಾಗಿತ್ತು. ಇನ್ನೊಬ್ಬರಿಗೆ ಕಾಲಿನಲ್ಲಿ ತುಂಬಾ ಸಮಯದಿಂದ ನೋವು ಇದ್ದು, ನಡೆಯಲು ಕಷ್ಟವಾಗುತ್ತಿತ್ತು. ಹೀಗೆ ಮಸಾಜ್ ಮಾಡುವುದರಿಂದ ಅಂಥ ತೊಂದರೆಗಳಿಗೆ ಸ್ವಲ್ಪ ಪರಿಹಾರ ಸಿಗಬಹುದು.-ಅನಿಲ್, ಮಲ್ಲೇಶ್ವರ ಸರ್ಕಲ್ ಇನ್‌ಸ್ಪೆಕ್ಟರ್ * ಪ್ರಿಯಾಂಕ ಎನ್.