ಮುಂಬಯಿ: ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಮುಂಬಯಿ ಬಂಟರ ಸಂಘ ಇದರ ಪೊವಾಯಿ ಎಸ್. ಎಂ. ಶೆಟ್ಟಿ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ 20ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹೆಚ್ಚಿನ ಅಭ್ಯಾಸಕ್ಕಾಗಿ ಮೊಬೈಲ್ ಸ್ಟಡಿ ಆ್ಯಪ್-ರೊಬೋಮೇಟ್ ಪ್ಲಸ್ ಎಂಬ ಅತ್ಯಾಧುನಿಕ ತಂತ್ರಜ್ಞಾನವನ್ನು ಪವಾಯಿ ಶಿಕ್ಷಣ ಸಂಸ್ಥೆಯು ಪರಿಚಯಿಸುವಲ್ಲಿ ಯಶಸ್ವಿಯಾಗಿದೆ.
ಸಂಸ್ಥೆಯ 20ನೇ ವಾರ್ಷಿ ಕೋತ್ಸವದ ಸವಿನೆನಪಿಗಗಾಗಿ ವಿದ್ಯಾರ್ಥಿಗಳಿಗೆ ಮೊಬೈಲ್ ಸ್ಟಡಿ ಆ್ಯಪ್- ರೊಬೋಮೇಟ್ ಪ್ಲಸ್ ಕೊಡುಗೆ ಸಂದಿದೆ. ಹೆಸರಾಂತ ಶಿಕ್ಷಣ ಸಂಸ್ಥೆ ಎಂ. ಟಿ. ಎಜ್ಯುಕೇಶನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮಹೇಶ್ ಶೆಟ್ಟಿ ಅವರ ಸೌಜನ್ಯದೊಂದಿಗೆ ಎಂ. ಟಿ. ಎಜುಕೇರ್ ವಿನ್ಯಾಸದಲ್ಲಿ ಸಿದ್ಧಗೊಂಡು, ಈಗಾಗಲೇ ದೇಶದ ಸುಮಾರು ಎರಡು ಮಿಲಿ ಯನ್ ವಿದ್ಯಾರ್ಥಿಗಳು ಉಪ ಯೋಗಿಸುತ್ತಿರುವ ರೊಬೋಮೇಟ್ ಪ್ಲಸ್ ಆ್ಯಪ್‌ಗೆ ಮಹೇಶ್ ಶೆಟ್ಟಿ ಅವರು ಚಾಲನೆ ನೀಡಿ ಮಾತನಾಡಿದರು,
ಬಂಟರ ಸಂಘ ಎಸ್. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಆ್ಯಪ್‌ನ ಪ್ರಯೋಜನ ಪಡೆದು ಬೋರ್ಡ್ ಸಿಲೆಬಸ್‌ಗಳ ಬಗ್ಗೆ ನಿಗಾ ಇಡಲು ಹಾಗೂ ಯಶಸ್ವಿಯಾಗಲು ಇದು ಸಹಕಾರಿಯಾಗಲಿದೆ ಎಂದು ನುಡಿದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಬಂಟರ ಸಂಘ ಪೊವಾಯಿ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸಿಎ ಶಂಕರ್ ಬಿ. ಶೆಟ್ಟಿ ಇವರು ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಅಭ್ಯಾಸವನ್ನು ಸಂಶೋಧನಾತ್ಮಕವಾಗಿ ಅಧ್ಯಯನ ಮಾಡಲು ಸಂಸ್ಥೆಯು ಎಲ್ಲಾ ನೆರವು ನೀಡುತ್ತಿದೆ. ಮುಂದೆ ರೊಬೋಮೇಟ್ ಪ್ಲಸ್ ವಿದ್ಯಾರ್ಥಿಗಳಲ್ಲಿ ಅಭ್ಯಾಸದ ಆಸಕ್ತಿಯನ್ನು ಹೆಚ್ಚಿಸಲು ಪರಿಣಾಮ ಕಾರಿಯಾಗಲಿ. ಈ ಬಾರಿಯೂ ಎಸ್‌ಎಸ್‌ಸಿ ಬೋರ್ಡ್ ಪರೀಕ್ಷೆಯಲ್ಲಿ ಶಾಲೆಗೆ ಶೇ. 100 ಫಲಿತಾಂಶ ದೊರೆತಿರುವುದಕ್ಕೆ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಅಭಿನಂದಿಸಿದರು.
Related Articles
ಪೊವಾಯಿ ಶಿಕ್ಷಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಬಿ. ಆರ್. ಶೆಟ್ಟಿ ಮಾತನಾಡಿ, ಸಮಿತಿಯು ವಿದ್ಯಾರ್ಥಿಗಳ ಅಭ್ಯಾಸ ಕ್ರಮ, ಶಿಕ್ಷಕರ ಬೋಧನ ಕ್ರಮದ ಬಗ್ಗೆ ಪ್ರೋತ್ಸಾಹ, ಸಹಕಾರ ನೀಡುತ್ತಿದೆ ಎಂದರು. ಸಮಿತಿಯ ಕಾರ್ಯದರ್ಶಿ ಹರೀಶ್ ವಾಸು ಶೆಟ್ಟಿ ಮಾತನಾಡಿ, ವಿವಿಧ ಸೌಲಭ್ಯಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಪ್ರತಿಭೆ ಶಿಕ್ಷಕರಲ್ಲಿ ಆಸಕ್ತಿ ಮೂಡಲೆಂಬುವುದೇ ಸಮಿತಿಯ ಉದ್ದೇಶವಾಗಿದೆ ಎಂದರು.
ಸಂಘದ ಎಸ್. ಎಂ. ಶೆಟ್ಟಿ ಹೈಸ್ಕೂಲ್‌ನ ಪ್ರಾಂಶುಪಾಲೆ ಸೀಮಾ ಸಬ್ಲೋಕ್ ಮಾತನಾಡಿ, 20 ವರ್ಷಗಳ ಹೆಜ್ಜೆ ನಡಿಗೆಯಲ್ಲಿ ಸಂಸ್ಥೆಯು ವಿವಿಧ ರೀತಿಯ ಅತ್ಯಾಧುನಿಕ ಶೈಕ್ಷಣಿಕ ತಂತ್ರಜ್ಞಾನದೊಂದಿಗೆ ಮುಂದುವರಿಯುತ್ತಿದೆ. ನೂತನವಾಗಿ ಆರಂಭಗೊಂಡ ರೊಬೋಮೇಟ್ ಪ್ಲಸ್ ಬಗ್ಗೆ ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಯಪಡಿಸುವುದರ ಮೂಲಕ ಜ್ಞಾನದ ಅಭಿವೃದ್ಧಿ ಹೆಚ್ಚಿಸಲಿದ್ದಾರೆ ಎಂದರು.
ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಪೊವಾಯಿ ಶಿಕ್ಷಣ ಸಮಿತಿಯ ಕೋಶಾಧಿಕಾರಿ ಸಿಎ ಹರೀಶ್ ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷರುಗಳಾದ ಐಕಳ ಹರೀಶ್ ಶೆಟ್ಟಿ, ಬಿ. ವಿವೇಕ್ ಶೆಟ್ಟಿ, ಸಂಘದ ಜೊತೆ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ, ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ, ನ್ಯಾಯವಾದಿ ದಯಾನಂದ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವಾರ್ಪಣೆ
ಇದೇ ಸಂದರ್ಭದಲ್ಲಿ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಶೇ. 97.04 ಅಂಕಗಳನ್ನು ಪಡೆದ ಅದಿತಿ ಪ್ರಕಾಶ್, ಶೇ. 97 ಅಂಕಗಳನ್ನು ಗಳಿಸಿದ ಆದಿತ್ಯ ವರ್ಮಾ ಹಾಗೂ ಶೇ. 96.06 ಅಂಕಗಳನ್ನು ಗಳಿಸಿದ ಸಿದ್ಧಿ ಗೋತಿರ್ವೇಕರ್ ಅವರನ್ನು ಪೊವಾಯಿ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಹರೀಶ್ ವಾಸು ಶೆಟ್ಟಿ ಅವರು ಅಭಿನಂದಿಸಿ ಗೌರವಿಸಿದರು.
ಚಿತ್ರ-ವರದಿ: ಪ್ರೇಮನಾಥ್ ಶೆಟ್ಟಿ ಮುಂಡ್ಕೂರು.