ಮಾಜಿ ಮುಖ್ಯಮಂತ್ರಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ (SMK) ಅವರು ಮಂಗಳವಾರ (ಡಿ.09) ಬೆಳಗ್ಗೆ ನಸುಕಿನ ವೇಳೆ ಇಹಲೋಕ ತ್ಯಜಿಸಿದ್ದಾರೆ. ಆರಂಭದಲ್ಲಿ ಕಾನೂನು ಪ್ರೊಫೆಸರ್ ಆಗಿ ವೃತ್ತಿ ಜೀವನ ಆರಂಭಿಸಿದ್ದ ಎಸ್ ಎಂಕೆ ಅವರು ಮುಖ್ಯಮಂತ್ರಿಯಾಗಿ, ರಾಜ್ಯಪಾಲರಾಗಿ, ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದು, ಅಭಿವೃದ್ಧಿಯ ಹರಿಕಾರರಾಗಿ, ಬ್ರ್ಯಾಂಡ್ ಬೆಂಗಳೂರು ರೂವಾರಿಯಾದ ಅವರ ರಾಜಕೀಯ ಜೀವನದ ಚಿತ್ರಣ ಇಲ್ಲಿದೆ…
ಪ್ರೊಫೆಸರ್, ರಾಜಕಾರಣಿ, ಮುಖ್ಯಮಂತ್ರಿ, ಗವರ್ನರ್!
ಬೆಂಗಳೂರಿನ ರೇಣುಕಾಚಾರ್ಯ ಅಂತಾರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಎಸ್ ಎಂ ಕೃಷ್ಣ ಅವರು ಪ್ರೊಫೆಸರ್ ಆಗುವ ಮೂಲಕ ವೃತ್ತಿ ಜೀವನ ಆರಂಭಿಸಿದ್ದರು. 1962ರಲ್ಲಿ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿ, ರಾಜಕೀಯ ಪ್ರವೇಶಿಸಿದ್ದರು.
1968ರಲ್ಲಿ ಎಸ್ ಎಂಕೆ ರಾಷ್ಟ್ರರಾಜಕಾರಣ ಪ್ರವೇಶಿಸಿದ್ದರು. ಹೌದು ನಾಲ್ಕನೇ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದು, ನಂತರ ಐದನೇ ಲೋಕಸಭಾ ಚುನಾವಣೆಯಲ್ಲೂ ಪುನರಾಯ್ಕೆಗೊಂಡಿದ್ದರು. 1972ರಲ್ಲಿ ಮರಳಿ ರಾಜ್ಯ ರಾಜಕಾರಣಕ್ಕೆ ಆಗಮಿಸಿ ವಾಣಿಜ್ಯ, ಕೈಗಾರಿಕೆ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ 1977ರವರೆಗೆ ಕಾರ್ಯನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಎಸ್ ಎಂ ಕೆ ಅವರ ನಾಯಕತ್ವ ಗುಣ ಗುರುತಿಸಿದ ಕಾಂಗ್ರೆಸ್ ಹೈಕಮಾಂಡ್ 1980ರಲ್ಲಿ ಮತ್ತೆ ಲೋಕಸಭಾ ಅಖಾಡಕ್ಕೆ ಇಳಿಸಿತ್ತು. ಹೀಗೆ 1983ರಿಂದ 1984ರವರೆಗೆ ಕೇಂದ್ರದ ರಾಜ್ಯ ಖಾತೆ ಕೈಗಾರಿಕಾ ಸಚಿವರಾಗಿ ಹಾಗೂ 1984ರಿಂದ 1985ರವರೆಗೆ ಕೇಂದ್ರದ ರಾಜ್ಯ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು.
ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಶಾಲಿಯಾಗಿ ಬೆಳೆಯತೊಡಗಿದ್ದ ಎಸ್.ಎಂ ಕೃಷ್ಣ ಅವರನ್ನು 1989ರಿಂದ 1992ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿತ್ತು. ಅದೇ ವರ್ಷ ಎಸ್ ಎಂ ಕೆ ಅವರನ್ನು ಹೈಕಮಾಂಡ್ ಉಪಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿತ್ತು. ನಂತರ 1996ರಿಂದ 1999ರವರೆಗೆ ರಾಜ್ಯಸಭೆ ಸದಸ್ಯರನ್ನಾಗಿ ನೇಮಕ ಮಾಡಿತ್ತು.
ರಾಜಕೀಯ ಹಾಗೂ ನಾಯಕತ್ವದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಎಸ್ ಎಂ ಕೃಷ್ಣ ಅವರು 1999ರಲ್ಲಿ ಪಾಂಚಜನ್ಯ ಯಾತ್ರೆಯ ಮೂಲಕ ಕಾಂಗ್ರೆಸ್ ಪಕ್ಷವನ್ನು ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಜತೆಗೆ 1999ರಿಂದ 2004ರವರೆಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ, ಬ್ರ್ಯಾಂಡ್ ಬೆಂಗಳೂರು ಖ್ಯಾತಿಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವಲ್ಲಿ ಮಹತ್ವದ ರೂವಾರಿಯಾಗಿ ಹೊರಹೊಮ್ಮಿದ್ದರು. ಬಳಿಕ 2004ರ ಡಿಸೆಂಬರ್ 6ರಂದು ಮಹಾರಾಷ್ಟ್ರದ ಗವರ್ನರ್ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಜಾಗತಿಕ ಮಟ್ಟದಲ್ಲೂ ಅನುಭವ ಹೊಂದಿದ್ದ ಎಸ್ ಎಂ ಕೆ 1982ರಲ್ಲಿ ವಿಶ್ವಸಂಸ್ಥೆಯ ಭಾರತೀಯ ನಿಯೋಗದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಅಷ್ಟೇ ಅಲ್ಲದೇ ವೆಸ್ಟ್ ಮಿನಿಸ್ಟರ್ ಮತ್ತು ಬ್ರಿಟನ್ ನಲ್ಲಿ ನಡೆದ ಕಾಮನ್ ವೆಲ್ತ್ ಪಾರ್ಲಿಮೆಂಟರಿ ಸೆಮಿನಾರ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
2017ರಲ್ಲಿ ಬಿಜೆಪಿ ಸೇರಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದ ಎಸ್ ಎಂ ಕೃಷ್ಣ ಅವರು 2023ರ ಜನವರಿ 7ರಂದು ರಾಜಕೀಯ ನಿವೃತ್ತಿ ಘೋಷಿಸಿದ್ದರು. ಎಸ್ ಎಂಕೆ ಪತ್ನಿ ಪ್ರೇಮಾ ಕೃಷ್ಣ ಮತ್ತು ಪುತ್ರಿಯರಾದ ಮಾಳವಿಕಾ ಕೃಷ್ಣ, ಶಾಂಭವಿ ಕೃಷ್ಣ ಅವರನ್ನು ಅಗಲಿದ್ದಾರೆ.