Advertisement

ರೈತರ ಮೊಗದಲ್ಲಿ ಮಂದಹಾಸ

06:47 PM Mar 01, 2021 | Nagendra Trasi |

ತಾಳಿಕೋಟೆ: ತಾಲೂಕಿನ ಬಹು ನೀರಿಕ್ಷಿತ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಗೆ 636.89 ಕೋಟಿ ರೂ.ಗಳಲ್ಲಿ ಎರಡನೇ ಹಂತದ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದ್ದು ಈ ಭಾಗದ ರೈತರಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದೆ.

Advertisement

ಎರಡು ದಶಕಗಳ ರೈತರ ಹೋರಾಟದ ಫಲವಾಗಿ ಬಹು ನೀರಿಕ್ಷಿತ ಯೋಜನೆಗೆ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಅವರ ಪ್ರಯತ್ನದ ಫಲವಾಗಿ
ಸರ್ಕಾರ ಕೊನೆಗೂ ಅಸ್ತು ಎಂದಿದೆ. ಈಗಾಗಲೇ 550 ಕೋಟಿ ವೆಚ್ಚದ ಕಾಮಗಾರಿ ಮುಕ್ತಾಯವಾಗಿದ್ದು ಸದ್ಯ ಎರಡನೇ ಹಂತದ ಕಾಮಗಾರಿ ಕೈಗೊಳ್ಳಲು
636.89 ಕೋಟಿ ಅನುದಾನ ನಿಗದಿಪಡಿಸಿ ಟೆಂಡರ್‌ ಕರೆಯಲಾಗಿದೆ. ಇದರಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗುವ ಆತಂಕದಲ್ಲಿದ್ದ ರೈತರಲ್ಲಿ
ಆಶಾಭಾವನೆ ಮೂಡಿದ್ದು ಆದಷ್ಟು ಬೇಗ ನೀರು ಹರಿಯುವ ನಿರೀಕ್ಷೆ ಅನ್ನದಾತರಲ್ಲಿ ಮೂಡಿದೆ.

ನಾರಾಯಣಪುರ ಎಡದಂಡೆ ಕಾಲುವೆ ಪಕ್ಕದಲ್ಲಿಯೇ ಹರಿದರೂ ಸಹಿತ ನೀರು ಬರುವುದಿಲ್ಲ ಎಂದು 1994ರಲ್ಲಿ ಬೂದಿಹಾಳ-ಪೀರಾಪುರ ಏತ ನೀರಾವರಿಗೆ ಆಗ್ರಹಿಸಿ ರೈತರ ಹೋರಾಟ ಆರಂಭವಾಗಿತ್ತು. ನಂತರ 2017ರಲ್ಲಿ ಸರ್ಕಾರ ಯೋಜನೆಗೆ ಅಸ್ತು ಎಂದಿತ್ತು. 3.74 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿ 50 ಸಾವಿರ ಎಕರೆ ನೀರನ್ನು ಉಣಿಸುವ ಯೋಜನೆಗೆ 550 ಕೋಟಿ ಅನುದಾನ ನೀಡಿತ್ತು. ನಾರಾಯಣಪುರ ಡ್ಯಾಂ ಹಿನ್ನೀರಿನಿಂದ ನೀರನ್ನು ಲಿಪ್‌# ಮಾಡಿ ತಾಲೂಕಿನ ಶೆಳ್ಳಗಿವರೆಗಿನ ಕಾಮಗಾರಿ ಮುಕ್ತಾಯವಾಗಿದ್ದು ಸದ್ಯ 46 ಹಳ್ಳಿಗಳ ರೈತರ ಜಮೀನುಗಳಿಗೆ ನೀರುಣಿಸುವ ಕಾಮಗಾರಿಗೆ ಟೆಂಡರ್‌ ಕರೆಲಾಗಿದ್ದು ಕಾಮಗಾರಿಗೆ ಈಗ ಮತ್ತೇ  ವೇಗ ಸಿಗಲಿದೆ.

ಆತಂಕ ದೂರ: ಎರಡು ದಶಕಗಳ ಬೇಡಿಕೆಯಾದ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆ ಆರಂಭವಾಗುತ್ತಲೇ ಯಾದಗಿರಿ ಜಿಲ್ಲೆಯ ನೀರಾವರಿ
ವಂಚಿತ ಹಳ್ಳಿಗಳನ್ನು ಈ ಯೋಜನೆ ವ್ಯಾಪ್ತಿಗೆ ಸೇರಿಸಲು ಹೋರಾಟ ಆರಂಭವಾಗಿತ್ತು. ರೈತರ ಹಾಗೂ ಆ ಭಾಗದ ಶಾಸಕರ ಒತ್ತಡಕ್ಕೆ ಮಣಿದು ಯಾದಗಿರಿ ಜಿಲ್ಲೆಯ 45 ಹಳ್ಳಿಗಳನ್ನು ಸೇರಿಸಿ ಆದೇಶ ಹೊರಡಿಸಲಾಗಿತ್ತು. ಇದರಿಂದ ಈ ಯೋಜನೆ ಮತ್ತೆ ಹಳಿ ತಪ್ಪುವ ಆತಂಕ ಎದುರಾಗಿತ್ತು. ಇದನ್ನ ಮನಗಂಡ ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಅವರು ಯಾದಗಿರಿ ಜಿಲ್ಲೆಯ ಹಳ್ಳಿಗಳನ್ನು ಮೂಲ ಯೋಜನೆ ವ್ಯಾಪ್ತಿಗೆ ಸೇರಿಸದಂತೆ ಪಟ್ಟು ಹಿಡಿದರು. ಆಗ ಯಾದಗಿರಿ ಜಿಲ್ಲೆಯ ಹಳ್ಳಿಗಳಿಗಾಗಿ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆ ಫೇಸ್‌ 2 ಎಂದು ನಾಮಕರಣ ಮಾಡಿ ಬೇರೆ ಯೋಜನೆ ರೂಪಿಸಿದ್ದು ರೈತರಲ್ಲಿ ಉಂಟಾಗಿದ್ದ ಆತಂಕ ದೂರವಾಗಿದೆ.

ಆಧುನಿಕ ತಂತ್ರಜ್ಞಾನ: ತಾಳಿಕೋಟೆ ತಾಲೂಕಿನ ದೇವರಹಿಪ್ಪರಗಿ ಮತಕ್ಷೇತ್ರದ 46 ಹಳ್ಳಿಗಳ 50 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸುವ ಯೋಜನೆಯಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ನೀರುಣಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಎಲ್ಲಿಯೂ ಸಹ ನೀರು ಪೋಲಾಗದಂತೆ ಕ್ರಮ ಕೈಗೊಳ್ಳಲಾಗಿದೆ. 50 ಎಕರೆ ಪ್ರದೇಶಕ್ಕೆ ಒಂದು ಪೈಪ್‌ನ್ನು ಓಪನ್‌ ಬಿಟ್ಟು ಅಲ್ಲಿಂದ 50 ಎಕರೆಗೆ ಮಾತ್ರ ನೀರು ಹರಿಸಲಾಗುತ್ತದೆ. ಇದೇ ರೀತಿ 50 ಸಾವಿರ ಎಕರೆಗೆ ಸಹ ನೀರು ಹರಿಸಲಾಗುವದು. ಆಧುನಿಕ ತಂತ್ರಜ್ಞಾನ ಬಳಕೆಯಿಂದ ಸುಮಾರು 0.5 ಟಿಎಂಸಿ ಅಡಿವರೆಗೂ ಸಹ ನೀರು ಉಳಿಯಬಹು ಎನ್ನುತ್ತಾರೆ ನೀರಾವರಿ ತಜ್ಞರು.

Advertisement

ಯೋಜನೆ ವ್ಯಾಪ್ತಿಯಿಂದ ತಾಲೂಕಿನ ಪೀರಾಪುರ ಗ್ರಾಮದಲ್ಲಿ ಬಿಟ್ಟು ಹೋಗಿದ್ದ 500 ಎಕರೆ ಜಮೀನನ್ನು ಸೇರಿಸಿಕೊಂಡು ಅದಕ್ಕೊಂದು ಸಣ್ಣ ಲಿಪ್ಟ್ ಯೋಜನೆ
ರೂಪಿಸಿ ಅದಕ್ಕೂ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಶಾಸಕ ಸೋಮನಗೌಡ ಪಾಟೀಲ (ಸಾಸನೂರ)ರ ಪ್ರಯತ್ನ ಫಲವಾಗಿ ಸದ್ಯ ಯೋಜನೆ
ಹೆಚ್ಚುವರಿ ಅನುದಾನ ಬಂದಿದ್ದು, ಕಾಮಗಾರಿ ಆದಷ್ಟು ಬೇಗ ಮುಕ್ತಾಯಗೊಳಿಸಿ ರೈತರ ಹೊಲಗಳಿಗೆ ನೀರುಣಿಸಲು ಕ್ರಮ ಕೈಗೊಂಡಿದ್ದು ಈ ಭಾಗದ ರೈತರ
ಹರ್ಷಕ್ಕೆ ಕಾರಣವಾಗಿದೆ.

ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಯ ಮುಂದಿನ ಕಾಮಗಾರಿ ಕೈಗೊಳ್ಳಲು ಸರ್ಕಾರ 636.89 ಕೋಟಿ ಅನುದಾನ ನೀಡಿದ್ದು, ಈಗಾಗಲೇ ಟೆಂಡರ್‌ ಕರೆಯಲಾಗಿದೆ. ರೈತರ ಹೊಲಗಳಿಗೆ ನೀರುಣಿಸುವವರೆಗೆ ನಾನು ವಿರಮಿಸುವುದಿಲ್ಲ. ಆಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಇದರಿಂದ ಟೇಲ್‌ ಎಂಡ್‌ ರೈತರಿಗೂ ಸಹ ಸಮನಾಗಿ ನೀರು ಹಂಚಿಕೆಯಾಗುತ್ತದೆ. ಆದಷ್ಟು ಬೇಗ ಕಾಮಗಾರಿ ಮುಕ್ತಾಯಗೊಳಿಸಿ ನೀರು ಹರಿಸಿ ರೈತರ ಬಾಳು ಹಸನಾಗಿಸಿ ಸಾರ್ಥಕ ಕ್ಷಣಗಳನ್ನು ಕಾಣುತ್ತೇನೆ.
ಸೋಮನಗೌಡ ಪಾಟೀಲ
(ಸಾಸನೂರ), ದೇವರಹಿಪ್ಪರಗಿ ಶಾಸಕ

ಜಿ.ಟಿ. ಘೋರ್ಪಡೆ

Advertisement

Udayavani is now on Telegram. Click here to join our channel and stay updated with the latest news.

Next