ದೆಹಲಿಯ ಅತಿದೊಡ್ಡ ಲೋಕಸಭಾ ಕ್ಷೇತ್ರವಾಗಿರುವ ಈಶಾನ್ಯ ದೆಹಲಿಯಲ್ಲಿ ಈ ಬಾರಿ ಮಾಜಿ ಸಿಎಂ, ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್, ಹಾಲಿ ಸಂಸದ, ದೆಹಲಿ ಬಿಜೆಪಿಯ ಅಧ್ಯಕ್ಷ ಮನೋಜ್ ತಿವಾರಿ, ಆಪ್‌ನ ದಿಲಿಪ್ ಪಾಂಡೆ ನಡುವೆ ಸ್ಪರ್ಧೆ ನಡೆದಿದೆ.
2008ರಲ್ಲಿ ಅಸ್ತಿತ್ವಕ್ಕೆ ಬಂದ ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದಲ್ಲಿ 22ಲಕ್ಷ ಮತದಾರರಿದ್ದು, ಇವರಲ್ಲಿ ಪೂರ್ವಾಂಚ ಲಿಯರು (ಉತ್ತರಪ್ರದೇಶ, ಬಿಹಾರದ ಜನರು) ಅಧಿಕ ಸಂಖ್ಯೆಯಲ್ಲಿ ಇದ್ದಾರೆ. 270ಕ್ಕೂ ಅಧಿಕ ಅನಧಿಕೃತ ಕಾಲೋನಿಗಳು ಮತ್ತು 46ಕ್ಕೂ ಹೆಚ್ಚು ಸ್ಲಂಗಳು ಈಶಾನ್ಯ ದೆಹಲಿ ಕ್ಷೇತ್ರದಲ್ಲಿ ಇವೆ. ಬಿಜೆಪಿ ನಾಯಕ, ಖ್ಯಾತ ಗಾಯಕ ಮನೋಜ್ ತಿವಾರಿ ಬಿಹಾರ ಮೂಲದವರು, 2014ರಲ್ಲಿ ಮೋದಿ ಅಲೆಯ ಜೊತೆಗೆ, ಬಿಹಾರದ ವ್ಯಕ್ತಿ ಎಂಬ ಕಾರಣಕ್ಕೂ ಈಶಾನ್ಯ ದೆಹಲಿ ಮನೋಜ್‌ರನ್ನು ಗದ್ದುಗೆಗೆ ಏರಿಸಿತ್ತು ಎನ್ನಲಾಗುತ್ತದೆ.
ಹೀಗಾಗಿ ಈ ಬಾರಿ ಬಿಜೆಪಿ, ಕಾಂಗ್ರೆಸ್ ಮತ್ತು ಆಪ್‌ನ ಕಣ್ಣು ಪೂರ್ವಾಂಚಲಿಗಳ ಮೇಲೆಯೇ ನೆಟ್ಟಿದೆ. ಇಲ್ಲಿ ಜಾತಿ-ಧರ್ಮ ರಾಜಕಾರಣವೂ ಕೆಲಸ ಮಾಡುತ್ತಿದ್ದು, ಈ ಕ್ಷೇತ್ರದಲ್ಲಿ 23 ಪ್ರತಿಶತದಷ್ಟಿರುವ ಮುಸ್ಲಿಂ ಮತ್ತು ದಲಿತ ಮತಗಳು ತಮ್ಮತ್ತ ಹರಿದುಬರಲಿವೆ ಎನ್ನುವ ಭರವಸೆಯಲ್ಲಿದೆ ಕಾಂಗ್ರೆಸ್. ಆಪ್ ಕೂಡ ಉತ್ತರಪ್ರದೇಶದ ಮೂಲದ ದಿಲೀಪ್ ಪಾಂಡೆಯವರನ್ನು ಕಣಕ್ಕಿಳಿಸಿರುವುದು ಕೂಡ ಪೂರ್ವಾಂಚಲ ದವರನ್ನು ಸೆಳೆಯುವುದಕ್ಕೇ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಸತ್ಯವೇನೆಂದರೆ, ಒಂದು ಕಾಲದಲ್ಲಿ ಪೂರ್ವಾಂಚಲದವರಿಂದಾಗಿಯೇ ದೆಹಲಿ ಅಪರಾಧ ನಗರಿಯಾಗುತ್ತಿದೆ ಎಂದು ದೂರಲಾಗುತ್ತಿತ್ತು, ಈಗ ಅದೇ ಜನರು ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸುವಷ್ಟು ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಅವರ ಮತಶಕ್ತಿಯನ್ನು ಅರಿತ ಆಪ್ 2015ರ ವಿಧಾನಸಭಾ ಚುನಾವಣೆಯಲ್ಲಿ 7 ಮಂದಿ ಪೂರ್ವಾಂಚಲ ಮೂಲದ ನಾಯಕರನ್ನು ಕಣಕ್ಕಿಳಿಸಿತ್ತು, ಎಲ್ಲಾ ಏಳೂ ಜನರೂ ಗೆಲುವು ಸಾಧಿಸಿದ್ದರು.
ಯಾರಿಗೆ ಗೆಲುವು?: ಈ ಕ್ಷೇತ್ರದಲ್ಲಿ ತಾವು ಅನೇಕ ಅಭಿವೃದ್ಧಿ ಯೋಜನೆಗಳನ್ನು ತಂದಿರುವುದರಿಂದ ಜನರು ಮತ್ತೆ ತಮ್ಮನ್ನೇ ಆಯ್ಕೆ ಮಾಡುತ್ತಾರೆ ಎನ್ನುತ್ತಾರೆ ತಿವಾರಿ. ತಮ್ಮ ಟಾಪ್ 1 ಕೆಲಸವೆಂದರೆ, ಈ ಕ್ಷೇತ್ರದ ಹಲವು ಭಾಗಗಳಲ್ಲಿ ಮೆಟ್ರೋ ರೈಲನ್ನು ತಂದಿರುವುದು ಎನ್ನುತ್ತಾರವರು. ಆದರೆ ಈ ಕೆಲಸ ಆಗಿದ್ದು ಆಪ್‌ನ ಶ್ರಮದಿಂದಾಗಿ ಎಂದು ದಿಲೀಪ್ ಪಾಂಡೆ ವಾದಿಸುತ್ತಾರೆ. ಇದಕ್ಕೆ ನೀಲನಕ್ಷೆ ಸಿದ್ಧಪಡಿಸಿದ್ದು ಕಾಂಗ್ರೆಸ್ ಎನ್ನುತ್ತಾರೆ ಶೀಲಾ ದೀಕ್ಷಿತ್!
ಈಶಾನ್ಯ ದೆಹಲಿಯಲ್ಲಿ ಮೇ 12ರಂದು ಮತದಾನ ನಡೆಯಲಿದೆ.