Advertisement

ಜಿಲ್ಲಾ ಕೇಂದ್ರದ ಹೈಟೆಕ್‌ ಗ್ರಂಥಾಲಯ ಕಾಮಗಾರಿಗೆ ಗ್ರಹಣ

12:11 PM Dec 24, 2020 | Suhan S |

ಉಡುಪಿ, ಡಿ. 23:   ನಗರದ ಅಜ್ಜರಕಾಡು ಬಳಿಯ ಹೊಸ ಜಿಲ್ಲಾ ಕೇಂದ್ರ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದಿದ್ದು, ಅನುದಾನದ ಕೊರತೆಯಿಂದ ಕಟ್ಟಡ ಒಳಾಂಗಣ ವಿನ್ಯಾಸ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.

Advertisement

ನೂತನ ಡಿಜಿಟಲ್‌ ಗ್ರಂಥಾಲಯವನ್ನು ಅಜ್ಜರಕಾಡು ಸಮೀಪದ ಸುಮಾರು 20 ಸೆಂಟ್ಸ್‌  ಜಾಗದಲ್ಲಿ ಕಟ್ಟಡ  ನಿರ್ಮಿಸ ಲಾಗಿದೆ.  ಆಸ್ಕರ್‌ ಫೆರ್ನಾಂಡಿಸ್‌ ರಾಜ್ಯಸಭೆ  ಸದಸ್ಯರ ನಿಧಿಯಿಂದ 99.56 ಲ.ರೂ., ನಗರಾಭಿವೃದ್ಧಿ ಪ್ರಾಧಿಕಾರದಿಂದ 87.54 ಲ.ರೂ., ಗ್ರಂಥಾಲಯ ಇಲಾಖೆಯಿಂದ 1 ಕೋ.ರೂ., ಸಂಸದೆ ನಿಧಿಯಿಂದ 5 ಲ.ರೂ. ಸೇರಿದಂತೆ ಇತರ ಒಟ್ಟು 3.35 ಕೋ.ರೂ. ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಲಾಗಿದೆ.

ಅನುದಾನದ ಕೊರತೆ :

ಪ್ರಸ್ತುತ ಬಾಕಿ ಇರುವ ಒಳಾಂಗಣ ವಿನ್ಯಾಸಕ್ಕೆ ಸುಮಾರು 2 ಕೋ. ರೂ. ಅಗತ್ಯವಿದೆ. ಆರ್ಥಿಕ ಇಲಾಖೆಯಿಂದ ಅನುದಾನ  ಮಂಜೂರಾಗಿದೆ. ಆದರೆ ಇಲಾಖೆಯಲ್ಲಿ ಆರ್ಥಿಕ ಸಮಸ್ಯೆಯಿಂದ ಅನುದಾನ ನಿರ್ಮಿತಿ ಕೇಂದ್ರದ ಕೈಸೇರದ  ಹಿನ್ನೆಲೆಯಲ್ಲಿ ಕಾಮಗಾರಿಗೆ ಹಿನ್ನಡೆ ಯಾಗಿದೆ ಎಂದು ಇಲಾಖೆ ಮೂಲಗಳು  ತಿಳಿಸಿವೆ. ಹಿಂದೊಮ್ಮೆ ಜಿಲ್ಲಾಡಳಿತ ಸ್ಥಳೀಯ  ಕಂಪೆನಿಯೊಂದರ ಸಿಎಸ್‌ಆರ್‌ ಅನುದಾನ ಬಳಸಿಕೊಂಡು ಕಾಮಗಾರಿ ಪೂರ್ಣ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಇಲ್ಲಿಯವರೆಗೂ ಈಡೇರಿಲ್ಲ.

ಹೈಟೆಕ್‌ ಮಾದರಿ ವಿನ್ಯಾಸ :

Advertisement

ಹೊಸದಾಗಿ ನಿರ್ಮಾಣವಾಗಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯ ಕಟ್ಟಡ ಹೈಟೆಕ್‌ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಅತ್ಯಾಧುನಿಕ ಮಾದರಿಯ ತಂತ್ರಜ್ಞಾನ ಸೌಲಭ್ಯ  ಆಳವಡಿಸಲಾಗಿದೆ.  ಇಲ್ಲಿ  ತಳ ಮಹಡಿ ಸೇರಿದಂತೆ ಒಟ್ಟು ನಾಲ್ಕು ಮಹಡಿ ಗಳಿವೆ. ತಳಮಹಡಿಯಲ್ಲಿ ವಾಹನ ನಿಲುಗಡೆ, ಲಿಫ್ಟ್, ಮೆಟ್ಟಿಲು, ಜನರೇಟರ್‌,  ಪುಸ್ತಕ ಸಂಗ್ರಹ ಕೊಠಡಿ ನಿರ್ಮಿಸಲಾಗಿದೆ. ನೆಲ ಮಹಡಿಯಲ್ಲಿ ಹಿರಿಯ ನಾಗರಿಕರ ಕೊಠಡಿ, ಮಕ್ಕಳ ಒಳಾಂಗಣ ಕ್ರೀಡೆ ಹಾಗೂ ಮಕ್ಕಳ ಪುಸಕ್ತ ಕೊಠಡಿ, ದಿನಪತ್ರಿಕೆಗಳ ವಿಭಾಗ, ವಾರ, ತಿಂಗಳ ಪತ್ರಿಕೆಗೆ ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಮಹಡಿಯಲ್ಲಿ ಕಂಪ್ಯೂಟರ್‌ ಕೊಠಡಿ, ಡಿಜಿಟಲ್‌ ಗ್ರಂಥಾಲಯ, ಕಿರು ಸಭಾಂಗಣ ನಿರ್ಮಿಸಲಾಗಿದೆ. ಎರಡನೇ ಮಹಡಿಯಲ್ಲಿ 100 ಮಂದಿ ಕುಳಿತುಕೊಳ್ಳುವ ಸಭಾಂಗಣ, ಕಚೇರಿ, ಓದುವ ಕೊಠಡಿ ಒಳಗೊಂಡಿದೆ.

ಅಭ್ಯರ್ಥಿಗಳಿಗೆ ಅನುಕೂಲ :

ಗ್ರಂಥಾಲಯದಲ್ಲಿ  ಐಎಎಸ್‌, ಕೆಎಎಸ್‌,  ಮುಂತಾದ ಸಿವಿಲ್‌ ಸರ್ವಿಸ್‌ ಪರೀಕ್ಷಾರ್ಥಿ ಗಳಿಗೆ ಅನುಕೂಲವಾಗುವಂತೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಕಂಪ್ಯೂಟರ್‌ ಕೊಠಡಿ, ತರಬೇತಿ ನೀಡಲು ಕಿರು ಸಭಾಂಗಣ, ಅಧ್ಯಯನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ನಿರಂತರ ವಿದ್ಯುತ್‌ ಸಂಪರ್ಕ ವಿದ್ಯಾರ್ಥಿ, ಸಾರ್ವಜನಿಕರಿಗೆ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಅನುಕೂಲವಾಗುವಂತೆ ಗ್ರಂಥಾಲಯಕ್ಕೆ 24×7 ವಿದ್ಯುತ್‌ ಸಂಪರ್ಕ ಒದಗಿಸಲಾಗುತ್ತದೆ. ಅದಕ್ಕೆ ಪೂರಕ ಜನರೇಟರ್‌ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನೆಲ ಮಹಡಿ ಯಲ್ಲಿ ಏಕಕಾಲಕ್ಕೆ 50ಕ್ಕೂ  ಹೆಚ್ಚಿನ ದ್ವಿಚಕ್ರ ವಾಹನ ನಿಲುಗಡೆ ಮಾಡಬಹುದಾಗಿದೆ. ಕಟ್ಟಡದ ಮುಂಭಾಗ ಇಂಟರ್‌ಲಾಕ್‌ ಹಾಕಲಾಗಿದೆ.

 

ಕಟ್ಟಡ ಕಾಮಗಾರಿ ಸುಮಾರು 3.35 ಕೋಟಿ ರೂ.  ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಒಳಾಂಗಣ ವಿನ್ಯಾಸಕ್ಕೆ ಸುಮಾರು ಇನ್ನೂ 2 ಕೋ.ರೂ. ಅಗತ್ಯವಿದೆ. ಅನುದಾನ ಬಿಡುಗಡೆಯಾದ ತತ್‌ಕ್ಷಣ ಬಾಕಿಯಿರುವ ಕೆಲಸ ಪೂರ್ಣಗೊಳಿಸಲಾಗುತ್ತದೆ.  -ಅರುಣ್‌,  ನಿರ್ಮಿತಿ ಕೇಂದ್ರ ಯೋಜನಾಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next