Advertisement

ಆಮೆಗತಿಯಲ್ಲಿ ಕ್ಯಾಂಟೀನ್‌ ಕಾರ್ಯ

11:36 AM Jul 28, 2019 | Suhan S |

ಕೊಪ್ಪಳ: ಈ ಹಿಂದಿನ ಕಾಂಗ್ರೆಸ್‌ ಸರ್ಕಾರ ಜನತೆಗೆ ಕಡಿಮೆ ದರದಲ್ಲಿ ಉಪಹಾರ ಹಾಗೂ ಊಟ ಪೂರೈಸುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್‌ ಎಂಬ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸಿದೆ. ಆದರೆ ಜಿಲ್ಲೆಗೆ ಮಂಜೂರಾದ 5 ಕ್ಯಾಂಟೀನ್‌ಗಳ ಪೈಕಿ, ಒಂದೇ ಕ್ಯಾಂಟೀನ್‌ ಆರಂಭಿಸಿದ್ದು, ಇನ್ನೂ ನಾಲ್ಕು ಕ್ಯಾಂಟೀನ್‌ ಆಮೆಗತಿಯ ಪ್ರಗತಿ ಕಾಣುತ್ತಿವೆ.

Advertisement

ಹೌದು. ನಗರ ಪ್ರದೇಶಗಳ ಜನರು ಹೋಟೆಲ್ಗಳಲ್ಲಿ ಊಟ ಹಾಗೂ ಉಪಹಾರಕ್ಕೆ ಹೆಚ್ಚಿನ ಬೆಲೆ ತೆರುತ್ತಿದ್ದಾರೆ. ಇದೆಲ್ಲವನ್ನೂ ಗಮನಿಸಿ ಕಾರ್ಮಿಕ ವರ್ಗ, ಕೂಲಿಕಾರರು ಸೇರಿದಂತೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಿಂದಿನ ಕಾಂಗ್ರೆಸ್‌ ಸರ್ಕಾರ ಇಂದಿರಾ ಕ್ಯಾಂಟೀನ್‌ ಯೋಜನೆ ಜಾರಿ ಮಾಡಿದೆ. ಈ ಪೈಕಿ ಜಿಲ್ಲೆಗೆ 5 ಕ್ಯಾಂಟೀನ್‌ ಮಂಜೂರಾಗಿವೆ. ಆದರೆ ಕೊಪ್ಪಳ ನಗರದಲ್ಲಿ ಮಾತ್ರ ಒಂದು ಆರಂಭವಾಗಿದ್ದು, ಇನ್ನೂಳಿದ ನಾಲ್ಕು ಕಡೆ ಕ್ಯಾಂಟೀನ್‌ ಪ್ರಗತಿಯ ಹಾದಿಯಲ್ಲಿವೆ ಎನ್ನುತ್ತಾರೆ ಅಧಿಕಾರಿಗಳು.

ಏಲ್ಲೆಲ್ಲಿ ಏನೇನು ಸ್ಥಿತಿಯಿದೆ?:ಗಂಗಾವತಿ, ಯಲಬುರ್ಗಾದಲ್ಲಿ ಕ್ಯಾಂಟೀನ್‌ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದರೆ, ಅಡುಗೆ ಕೊಠಡಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ಬಾಕಿಯಿದೆ. ಇನ್ನೂ ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ ಕ್ಯಾಂಟೀನ್‌ ಆರಂಭಕ್ಕೆ ಕೆಎಸ್‌ಆರ್‌ಟಿಸಿ ನಿಲ್ದಾಣದ ಸ್ಥಳದಲ್ಲೇ ನಿವೇಶನ ಪಡೆಯಲಾಗಿದ್ದು, ಕಟ್ಟಡ ಕಾಮಗಾರಿ ಆರಂಭಿಸಬೇಕಿದೆ. ಗಂಗಾವತಿಯಲ್ಲಿ ಮತ್ತೂಂದು ಕ್ಯಾಂಟೀನ್‌ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ.

ಬಡವರಿಗೆ ಅನುಕೂಲ: ಇಂದಿರಾ ಕ್ಯಾಂಟೀನ್‌ನಲ್ಲಿ ಗ್ರಾಮೀಣ ಪ್ರದೇಶದ ಜನರೇ ಹೆಚ್ಚು ಸೌಲಭ್ಯ ಪಡೆಯುತ್ತಿರುವುದು ಇತ್ತೀಚೆಗೆ ಕಂಡು ಬರುತ್ತಿದೆ. ನಗರ ಪ್ರದೇಶಕ್ಕೆ ಕೆಲಸಕ್ಕೆಂದು ಬರುವ ಕೆಳ ಹಾಗೂ ಮಧ್ಯಮ ವರ್ಗದ ಜನರು ಕ್ಯಾಂಟೀನ್‌ಗೆ ಆಗಮಿಸಿ ಉಪಹಾರ ಸೇರಿದಂತೆ ಮಧ್ಯಾಹ್ನದ ಊಟವನ್ನೂ ಮಾಡುತ್ತಿದ್ದಾರೆ. ಉಪಹಾರಕ್ಕೆ 5 ರೂ. ದರವಿದ್ದರೆ, ಊಟಕ್ಕೆ 10 ರೂ. ದರವಿದೆ. ಇನ್ನೂ ನಿತ್ಯ ಕೂಲಿ ಕೆಲಸ ಮಾಡುವ ಬಡ ಜನರೂ ಕ್ಯಾಂಟೀನ್‌ನಲ್ಲಿ ಭೋಜನ ಸೇವಿಸುತ್ತಿದ್ದಾರೆ. ವಿದ್ಯಾರ್ಥಿಗಳು ಸಹ ಇಂದಿರಾ ಕ್ಯಾಂಟೀನ್‌ನಲ್ಲಿ ಉಪಹಾರ, ಊಟ ಮಾಡುತ್ತಿದ್ದಾರೆ.

ಪ್ರಸ್ತುತ ನಗರ ಪ್ರದೇಶದ ಹೋಟೆಲ್ಗಳಲ್ಲಿ ಉಪಹಾರ ಒಂದಕ್ಕೆ 30 ರೂ. ದರವಿದೆ. ಇನ್ನೂ ಊಟಕ್ಕೆ 50ರಿಂದ 60 ರೂ. ಇದೆ. ಕೆಲಸಕ್ಕೆಂದು ನಗರಕ್ಕೆ ಆಗಮಿಸುವ ಗ್ರಾಮೀಣ ಭಾಗದ ಕಾರ್ಮಿಕರು ನಿತ್ಯ 50ರಿಂದ 60 ರೂ. ವ್ಯಯಿಸಿ ಹೋಟೆಲ್ನಲ್ಲಿ ಊಟ ಮಾಡಲು ಹೊರೆಯಾಗುತ್ತದೆ. ನಿತ್ಯ ಊಟಕ್ಕೆ ಇಷ್ಟೊಂದು ಹಣ ವ್ಯಯಿಸಿದರೆ ನಮ್ಮ ಜೀವನ ನಡೆಯುವುದು ಕಷ್ಟ ಎಂಬುದನ್ನು ಅರಿತು ಕಾರ್ಮಿಕರು ಇಂದಿರಾ ಕ್ಯಾಂಟೀನ್‌ಗೆ ಆಗಮಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಸಂಬಂಧಿಕರು ಕೂಡ ಇಂದಿರಾ ಕ್ಯಾಂಟೀನ್‌ಗೆ ಆಗಮಿಸುತ್ತಿದ್ದಾರೆ.

Advertisement

ಒಟ್ಟಿನಲ್ಲಿ ಕೆಳ ಹಾಗೂ ಮಧ್ಯಮ ವರ್ಗದವರಿಗೆ ಇಂದಿರಾ ಕ್ಯಾಂಟೀನ್‌ ಅನುಕೂಲವಾಗುತ್ತಿದೆ. ಜಿಲ್ಲೆಯಲ್ಲಿನ ಉಳಿದ ಕ್ಯಾಂಟೀನ್‌ಗಳನ್ನು ಶೀಘ್ರ ಆರಂಭಿಸಿದರೆ ಅಲ್ಲಿಯೂ ಜನರು ಇದರ ಸದ್ಭಳಕೆ ಮಾಡಿಕೊಳ್ಳಲಿದ್ದಾರೆ ಎನ್ನುವ ಅಭಿಪ್ರಾಯ ಕೇಳಿ ಬಂದಿವೆ.

 

•ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next