ಹಾವೇರಿ: ಇಲ್ಲಿಯ ಜಿಲ್ಲಾಡಳಿತ ಭವನದ ಬಳಿ ಪಿಲಿಕುಳ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ವಿಜ್ಞಾನ ಪ್ರೇಮಿಗಳ ಆಕ್ರೋಶಕ್ಕೆ ಗುರಿಯಾಗಿದೆ. ಶೈಕ್ಷಣಿಕ ಪ್ರವಾಸೋದ್ಯಮದ ಮೂಲಕ ಗಮನ ಸೆಳೆದಿರುವ ಪಿಲಿಕುಳದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರದ ಮಾದರಿಯಲ್ಲಿ ಇಲ್ಲಿಯೂ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಜಿಲ್ಲಾಡಳಿತ ಭವನದ ಎದುರಿಗೆ 9.5 ಎಕರೆ ಜಾಗದಲ್ಲಿ 4 ಕೋಟಿ ರೂ. ವೆತ್ಛದಲ್ಲಿ ವಿಜ್ಞಾನ ಕೇಂದ್ರದ ಕಟ್ಟಡ ಕಾಮಗಾರಿ ನಡೆದಿದೆ. ಆದರೆ, ಮೂರು ವರ್ಷ ಕಳೆದರೂ ಕಟ್ಟಡ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಯಾವಾಗ ಆರಂಭವಾಗುತ್ತದೆಯೋ ಎಂಬ ಸಂಶಯದ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.
ಅಂದುಕೊಂಡಂತೆ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿದ್ದರೆ 2019ರಲ್ಲಿ ಉದ್ಘಾಟನೆಯಾಗಬೇಕಿತ್ತು. ಆದರೆ, ಕಾಮಗಾರಿಗೆ ವೇಗ ದೊರೆಯದಿರುವುದು ಖೇದಕರ ಸಂಗತಿ. ಈ ವಿಜ್ಞಾನ ಕೇಂದ್ರದಲ್ಲಿ ವಿಷಯಾಧಾರಿತ ವಿಜ್ಞಾನ, ಮನರಂಜನಾ ವಿಜ್ಞಾನಕ್ಕೆ ಸಂಬಂಧಿ ಸಿದ ಗ್ಯಾಲರಿಗಳು ಇರಲಿದ್ದು, ಅದರಲ್ಲಿ ಜೀವವೈವಿಧ್ಯ ಮತ್ತು ಆಧುನಿಕ ಸಂಶೋಧನೆ, ತಂತ್ರಜ್ಞಾನಕ್ಕೆ ಸಂಬಂಧಿ ಸಿದ ವಿಭಾಗಗಳು ಇರುತ್ತವೆ. ಈ ಗ್ಯಾಲರಿಗಳಲ್ಲಿ ವಿದ್ಯಾರ್ಥಿಗಳು ಸ್ವತಃ ಬಳಸಬಹುದಾದ ವಿಜ್ಞಾನ ಮಾದರಿಗಳಿರುತ್ತವೆ. ಇದಲ್ಲದೇ ಮಾನವ ವಿಕಾಸ, ವಿನಾಶದ ಅಂಚಿನಲ್ಲಿರುವ ಪ್ರಬೇಧಗಳು, ಅವುಗಳನ್ನು ಉಳಿಸುವುದರ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮನದಟ್ಟಾಗುವ ರೀತಿಯಲ್ಲಿ ವಿವರಣೆ ನೀಡುವ ಪ್ರಯತ್ನಗಳು ಇಲ್ಲಿ ಮಾಡಲು ಉದ್ದೇಶಿಸಲಾಗಿದೆ. ನ್ಯಾನೋ ತಂತ್ರಜ್ಞಾನ, ರಾಕೆಟ್ ತಂತ್ರಜ್ಞಾನ, ಸಂವಹನ ತಂತ್ರಜ್ಞಾನ, ವೈದ್ಯಕೀಯ ತಂತ್ರಜ್ಞಾನದ ಕುರಿತ ಮಾದರಿಗಳು ಹಾಗೂ ಪ್ರಾತ್ಯಕ್ಷಿಕೆಗಳು ಈ ಕೇಂದ್ರದಲ್ಲಿ ಇರಲಿದ್ದು ಪರಿಸರ ಜಾಗೃತಿ ಜತೆಗೆ ವಿಜ್ಞಾನದ ವಿಸ್ಮಯಗಳು ಇಲ್ಲಿ ಅನಾವರಣಗೊಳಿಸುವ ಯೋಜನೆ ಇದೆ. ಆದರೆ, ಅದು ಇನ್ನೂ ಸಾಕಾರಗೊಳ್ಳದಿರುವುದೇ ಅಸಮಾಧಾನಕ್ಕೆ ಕಾರಣವಾಗಿದೆ.
ಗೊಂದಲಮಯ ದಾರಿ : ವಿಜ್ಞಾನ ಕೇಂದ್ರ ಮೊದಲಿನಿಂದಲೂ ಗೊಂದಲದ ಹಾದಿಯಲ್ಲಿಯೇ ಸಾಗುತ್ತಬಂದಿದೆ. ಹಲವು ವರ್ಷಗಳಿಂದ ಕ್ರಿಯಾಯೋಜನೆ, ಸ್ಥಳ ಗೊಂದಲದಲ್ಲೇ ಕಳೆಯಿತು. 2006ರಲ್ಲಿ ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದ ಬಸವರಾಜ ಹೊರಟ್ಟಿ ಹಾವೇರಿಗೆ ವಿಜ್ಞಾನ ಕೇಂದ್ರ ಮಂಜೂರು ಮಾಡಿ 1.5 ಕೋಟಿ ಅನುದಾನವನ್ನೂ ನೀಡಿದ್ದರು. ಬಳಿಕ ದೇವಗಿರಿಯಲ್ಲಿ ಮೂರು ಎಕರೆ ಜಾಗವನ್ನು ಕೇಂದ್ರ ಸ್ಥಾಪನೆಗೆ ಮೀಸಲಾಗಿಡಲಾಗಿತ್ತು. ಬಳಿಕ ಯಾರೂ ಈ ಬಗ್ಗೆ ಆಸಕ್ತಿ ತೋರದೆ ಇರುವುದರಿಂದ ವಿಜ್ಞಾನ ಕೇಂದ್ರ ಸ್ಥಾಪನೆ ವಿಚಾರವೇ ಕೈಬಿಡಲಾಗಿತ್ತು. ಮೂರು ವರ್ಷಗಳ ಹಿಂದೆ ವಿಜ್ಞಾನ ಕೇಂದ್ರ ಸ್ಥಾಪನೆ ವಿಚಾರಕ್ಕೆ ಚಾಲನೆ ದೊರೆತು ಕರ್ಜಗಿಯ ಕೇಂದ್ರೀಯ ವಿದ್ಯಾಲಯದ ಪಕ್ಕದಲ್ಲೇ ವಿಜ್ಞಾನ ಕೇಂದ್ರ ಸ್ಥಾಪನೆಗೆ ಜಿಲ್ಲಾಡಳಿತ ಮುಂದಾಯಿತು. ಆಗಿನ ಜಿಲ್ಲಾ ಧಿಕಾರಿ ಡಾ.ಎಂ.ವಿ. ವೆಂಕಟೇಶ ಅದನ್ನು ಮತ್ತೆ ದೇವಗಿರಿಗೆ ವರ್ಗಾಯಿಸಿದರು. ಕೂಡಲೇ ಹಣ ಬಿಡುಗಡೆ ಮಾಡಿ ಕಟ್ಟಡ ನಿರ್ಮಾಣಕ್ಕೆ ಸೂಚಿಸಿದರು. ತನ್ಮೂಲಕ ಕಳೆದ 12ವರ್ಷಗಳಿಂದ ಕಡತದಲ್ಲೇ ಉಳಿದಿದ್ದ ವಿಜ್ಞಾನ ಕೇಂದ್ರ ಕಾಮಗಾರಿ ಹಂತಕ್ಕೆ ಬಂದಿದೆ. ಆದರೆ, ಕಾಮಗಾರಿಯ ವೇಗಕ್ಕೂ ಗ್ರಹಣ ಹಿಡಿದಿರುವುದು ವಿಷಾದನೀಯ.
ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ ಚುರುಕು ಗೊಳಿಸಲು ಆದೇಶಿಸಲಾಗು ವುದು. ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ವಿಜ್ಞಾನ ಕೇಂದ್ರ ವಿದ್ಯಾರ್ಥಿಗಳಿಗೆ ಲಭಿಸುವ ದಿಸೆಯಲ್ಲಿ ಪ್ರಯತ್ನಿಸಲಾಗುವುದು. –
ಕೃಷ್ಣ ಭಾಜಪೇಯಿ ಜಿಲ್ಲಾಧಿಕಾರಿ
-ಎಚ್.ಕೆ. ನಟರಾಜ