ಬೆಳ್ಳಾರೆ: ಗ್ರಾಮ ವಿಕಾಸ ಯೋಜನೆಯಡಿ ನಿರ್ಮಾಣವಾಗುತ್ತಿದ್ದ ಪೆರುವಾಜೆ ಕೊಲ್ಯ ಸಂಪರ್ಕ ರಸ್ತೆಯ ತಡೆಗೋಡೆ ಕಾಮಗಾರಿ ಕಳೆದ ಮಳೆಗಾಲದ ಸಮಯದಲ್ಲಿ ಸ್ಥಗಿತಗೊಂಡಿದ್ದು, ಇನ್ನೂ ಕಾಮಗಾರಿ ಆರಂಭವಾಗದೆ ನನೆಗುಗುದಿಯಲ್ಲಿದೆ. ಪೆರುವಾಜೆಯಿಂದ ಕೊಲ್ಯ ಮಾರ್ಗವಾಗಿ ಮುರ್ಕೆತ್ತಿ ಸಂಪರ್ಕ ಕಲ್ಪಿಸುವ ರಸ್ತೆಯ ನಾಗಂಡ ಎಂಬಲ್ಲಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ 11.25 ಲಕ್ಷ ರೂ. ವೆಚ್ಚದ ತಡೆಗೋಡೆ ನಿರ್ಮಾಣ ಕಾರ್ಯ ಕೆ.ಆರ್.ಐ.ಡಿ.ಎಲ್.ನಿಂದ ಕಳೆದ ವರ್ಷ ಮಳೆಗಾಲದ ಸಮಯದಲ್ಲಿ ಪ್ರಗತಿಯಲ್ಲಿತ್ತು. ಆದರೆ ಮಳೆಗಾಲದ ಬಳಿಕ ಕಾಮಗಾರಿ ನಿಂತಿದೆ. ತಡೆಗೋಡೆ ಕಾಮಗಾರಿ ಅಪೂರ್ಣ ಗೊಂಡ ಕಾರಣ ಪಾದಚಾರಿಗಳು ನಡೆದು ಹೋಗುತ್ತಿರುವ ರಸ್ತೆ ಯೂ ಕುಸಿಯುತ್ತಿದೆ.
ಕಾಲು ಸೇತುವೆ ಪೂರ್ಣ :
ಮುರ್ಕೆತ್ತಿ ಭಾಗದ ಜನರ ಬಹುಕಾಲದ ಬೇಡಿಕೆಯಾದ ಕೊಲ್ಯ ಪೆರುವಾಜೆ ಸಂಪರ್ಕ ರಸ್ತೆಯ ನಾಗಂಡ ಎಂಬಲ್ಲಿ ಲೋಕೋಪಯೋಗಿ ಇಲಾಖೆಯ 12.50 ಲಕ್ಷ ರೂಪಾಯಿ ಅನುದಾನದಲ್ಲಿ ಕಾಲುಸೇತುವೆ ಹಾಗು ಗ್ರಾಮ ವಿಕಾಸ ಯೋಜನೆಯಡಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಇನ್ನೊಂದು ಕಾಲು ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಕಾಲು ಸೇತುವೆ ಮೂಲಕ ಲಘು ವಾಹನ ಸಂಚರಿಸಬಹುದಾಗಿದೆ. ಆದರೆ ಸಂಪರ್ಕ ರಸ್ತೆಯ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿರುವ ಕಾರಣ ವಾಹನ ಸಂಚಾರ ಅಸಾಧ್ಯವಾಗಿದೆ.
ನೂರಾರು ಮನೆಗಳಿವೆ :
ಮುರ್ಕೆತ್ತಿ ಭಾಗದಲ್ಲಿ ನೂರಾರು ಮನೆಗಳಿದ್ದು ಪೆರು ವಾಜೆ ಸಂಪರ್ಕ ರಸ್ತೆ ಪೂರ್ಣಗೊಂಡಲ್ಲಿ ತಮ್ಮದೇ ಗ್ರಾಮದ ಗ್ರಾ.ಪಂ ಕಚೇರಿ, ಸ.ಹಿ.ಪ್ರಾ.ಶಾಲೆ, ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅರಣ್ಯ ಇಲಾಖೆಯ ಕಚೇರಿ, ಅಂಚೆ ಕಚೇರಿ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನ ಸಹಿತ ದಿನನಿತ್ಯದ ವ್ಯವಹಾರಗಳಿಗೆ ಪೆರುವಾಜೆ ಹತ್ತಿರವಾಗಲಿದೆ. ಸಂಪರ್ಕ ರಸ್ತೆ ಪೂರ್ಣಗೊಂಡಲ್ಲಿ ಪೆರುವಾಜೆಯಿಂದ ಪುತ್ತೂರು ಮುಖ್ಯ ರಸ್ತೆ ಹಾಗೂ ಬೆಳ್ಳಾರೆ ಸಂಪರ್ಕವೂ ಸುಲಭವಾಗಲಿದೆ. ಕಾಲು ಸೇತುವೆ ಪೂರ್ಣಗೊಂಡ ಬಳಿಕ ಸ್ಥಳೀಯರು ಬೇಡಿಕೆ ಈಡೇರಿದ ಸಂತಸದಲ್ಲಿದ್ದರು. ಆದರೆ ತಡೆಗೋಡೆ ನಿರ್ಮಾಣ ಕಾಮಾಗಾರಿ ಪೂರ್ಣಗೊಳ್ಳದಿರುವುದು ನಿರಾಸೆ ಮೂಡಿಸಿದೆ.
ತಡೆಗೋಡೆ ನಿರ್ಮಾಣ ಕಾಮಗಾರಿಯಲ್ಲಿ ಅನುದಾನಕ್ಕಿಂತ ಹೆಚ್ಚಿನ ಕೆಲಸವಾಗಬೇಕಿದೆ. ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು ಉಳಿದ ಕಾಮಗಾರಿಯನ್ನು ಶೀಘ್ರ ಆರಂಭಿಸಿಸಲಾಗುವುದು.
–ರಮೇಶ್, ಎ.ಇ.ಇ., ಕೆ.ಆರ್.ಐ.ಡಿ.ಎಲ್.