Advertisement

ಕಾಮಗಾರಿ ಗೋಳು; ರಸ್ತೆ ತುಂಬಾ ಧೂಳು!

11:15 AM Feb 07, 2020 | Suhan S |

ಬೆಂಗಳೂರು: ಮೂಲ ಸೌಕರ್ಯ ಅಭಿವೃದ್ಧಿ ಉದ್ದೇಶದಿಂದ ಜಲ ಮಂಡಳಿ ಕೈಗೆತ್ತಿಕೊಂಡಿರುವ ಕಾಮಗಾರಿಗಳಿಂದ ದಾಸರಹಳ್ಳಿಯ ಬಾಗಲಗುಂಟೆ ಹಾಗೂ ಶೆಟ್ಟಿಹಳ್ಳಿ ವಾರ್ಡ್‌ಗಳ ವ್ಯಾಪ್ತಿಯ ಸಿಡೇದಹಳ್ಳಿ, ಅಬ್ಬಿಗೆರೆ, ಶೆಟ್ಟಿಹಳ್ಳಿ, ಮೇದರಹಳ್ಳಿ, ಚಿಕ್ಕಸಂದ್ರ ಹಳ್ಳಿಗಳ ಜನ ನಿತ್ಯ ನರಕ ಅನುಭವಿಸುತ್ತಿದ್ದಾರೆ.

Advertisement

ದಾಸರಹಳ್ಳಿ, ಯಶವಂತಪುರ ಹಾಗೂ ಉತ್ತರಹಳ್ಳಿ ವ್ಯಾಪ್ತಿಯಲ್ಲಿ 394 ಕೋಟಿ ರೂ. ಪ್ಯಾಕೇಜ್‌ನಲ್ಲಿ ಒಳಚರಂಡಿ ಸೇರಿ ವಿವಿಧ ಕಾಮಗಾರಿಗಳನ್ನು ಜಲಮಂಡಳಿ ಕೈಗೆತ್ತಿಕೊಂಡಿದೆ. ಆದರೆ, ಕಾಮಗಾರಿ ಆಮೆಯನ್ನು ನಾಚಿಸುವ ವೇಗದಲ್ಲಿ ನಡೆಯುತ್ತಿದ್ದು, ಜನ ಧೂಳನ್ನೇ ಉಸಿರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶೆಟ್ಟಿಹಳ್ಳಿ ವಾರ್ಡ್‌ನ ಅಬ್ಬಿಗೆರೆ, ಮೇದರಹಳ್ಳಿ, ಚಿಕ್ಕಸಂದ್ರ, ಶೆಟ್ಟಿಹಳ್ಳಿ ಹಾಗೂ ಬಾಗಲಗುಂಟೆ ವಾರ್ಡ್‌ನ ಸಿಡೇದಹಳ್ಳಿ ವ್ಯಾಪ್ತಿಯಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗಾಗಿ, ಇಲ್ಲಿನ ರಸ್ತೆಗಳಲ್ಲಿ ಡಾಂಬಾರು ಮಾಯವಾಗಿದ್ದು, ಸವಾರರು ಅಪಘಾತಕ್ಕೆ ಒಳಗಾಗುವುದು ಸಾಮಾನ್ಯವಾಗಿದೆ. ಕಾಮಗಾರಿ ಮುಗಿದು ಬೇಸಿಗೆ ಸಮಯದಲ್ಲಿ ಈ ಭಾಗದಲ್ಲಿ ನೀರಿನ ಸಮಸ್ಯೆ ನೀಗಲಿದೆ ಎನ್ನುವ ಆಶಯವೂ ಕಮರಿದೆ.  2011ರಲ್ಲಿ 110 ಹಳ್ಳಿಗಳಲ್ಲಿ 5ನೇ ಹಂತದ ಕಾವೇರಿ ನೀರು ಸರಬರಾಜು ಮಾಡುವುದಕ್ಕೆ ಯೋಜನೆ ರೂಪಿಸಿಕೊಳ್ಳಲಾಯಿತು. 2018ರಲ್ಲಿ ಈ ಭಾಗದಲ್ಲಿ ಕೆಲವರಿಗೆ ಕಾವೇರಿ ನೀರು ಸರಬರಾಜು ಮಾಡಲಾಯಿತಾದರೂ, ಇಂದಿಗೂ ಇಲ್ಲಿನ ಬಹುತೇಕ ಮನೆಗಳಿಗೆ ನೀರು ಸಿಗುತ್ತಿಲ್ಲ.

ಶೇ.40 ಕಾಮಗಾರಿಯೂ ಆಗಿಲ್ಲ!: ಜಲ ಮಂಡಳಿ ಈ ಭಾಗದಲ್ಲಿ ಒಟ್ಟು 90 ಕಿ.ಮೀ ಕಾಮಗಾರಿ ಕೈಗೆತ್ತಿಕೊಂಡಿತ್ತು. ಇದರಲ್ಲಿ ಇಲ್ಲಿಯವರೆಗೆ 27.7 ಕಿ.ಮೀ ಕಾಮಗಾರಿ ಮುಗಿದ್ದಿದ್ದು, ಪಾಲಿಕೆಗೆ ಹಸ್ತಾಂತರ ಮಾಡಲಾಗಿದೆ. ಈಗ 8 ಕಿ.ಮೀ ರಸ್ತೆ ಹಸ್ತಾಂತರಕ್ಕೆ ಸಿದ್ಧತೆ ನಡೆದಿದೆ. ಶೇ.60ರಿಂದ 70ರಷ್ಟು ಸಣ್ಣ ಪುಟ್ಟ ಕೆಲಸವಿರುವುದಾಗಿ ಜಲ ಮಂಡಳಿ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಸ್ಥಳೀಯರ ಪ್ರಕಾರ ಜಲ ಮಂಡಳಿ ಅಧಿಕಾರಿಗಳು ಹೇಳುವಂತೆ ಯಾವುದೇ ಕೆಲಸ ಆಗಿಲ್ಲ. ವೇಗವಾಗಿ ಕೆಲಸ ಮಾಡಿದ್ದೇವೆ: “ಅಬ್ಬಿಗೆರೆಯಲ್ಲಿ ಶೇ.80 ಕಾಮಗಾರಿ ಪೂರ್ಣಗೊಂಡಿದೆ. ಮೂರರಿಂದ ನಾಲ್ಕು ತಿಂಗಳಲ್ಲಿ ಉಳಿದ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಜಲ ಮಂಡಳಿ ಸಹಾಯಕ ಎಂಜಿನಿಯರ್‌ ಸತೀಶ್‌ ರೆಡ್ಡಿ ತಿಳಿಸಿದರು. “ಕಾಮಗಾರಿ ಮುಗಿಸಲು 2021ರ ಮಾರ್ಚ್‌ ಗಡುವು ನೀಡಿದ್ದು, ಈ ಅವಧಿಯಲ್ಲೇ ಮುಗಿಸಲು ಪ್ರಯತ್ನಿಸಲಾಗುವುದು.

ನಾವು ವೇಗವಾಗಿಯೇ ಕೆಲಸ ಮಾಡುತ್ತಿದ್ದೇವೆ. ಕಾಮಗಾರಿ ಮುದಿಸಿ ಹಸ್ತಾಂತರಿಸಿರುವ ರಸ್ತೆಗಳನ್ನು ಪಾಲಿಕೆ ಅಭಿವೃದ್ಧಿ ಮಾಡುತ್ತಿಲ್ಲ. ಈಗಾಗಲೇ ಸೌಂದರ್ಯ, ಕಿರ್ಲೋಸ್ಕರ್‌ ಲೇಔಟ್‌ ಸೇರಿ ಹಲವು ರಸ್ತೆಗಳನ್ನು ಪಾಲಿಕೆಗೆ ಹಸ್ತಾಂತರಿಸಲಾಗಿದೆ’ ಎಂದು ಹೇಳಿದರು.

ಒಳಚರಂಡಿ ಪೈಪ್‌ ಅಳವಡಿಸಲು ಲಂಚ ಕೇಳ್ತಾರೆ :  “ಒಳಚರಂಡಿ ಪೈಪ್‌ ಅಳವಡಿಸಲು ಹಣ ನೀಡುವಂತೆ ಗುತ್ತಿಗೆದಾರರು ಸ್ಥಳೀಯನ್ನು ಪೀಡಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು, ಈ ವಿಷಯವನ್ನು ಜಲ ಮಂಡಳಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ’ ಎಂದು ದಾಸರಹಳ್ಳಿ ವಲಯ ಜಂಟಿ ಆಯುಕ್ತ ನರಸಿಂಹಮೂರ್ತಿ “ಉದಯವಾಣಿ’ಗೆ ತಿಳಿಸಿದ್ದಾರೆ. “ಕಾಮಗಾರಿ ವಿಳಂಬ ಹಿನ್ನೆಲೆಯಲ್ಲಿ ಜಲಮಂಡಳಿ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಹಸ್ತಾಂತರವಾದ ರಸ್ತೆಗಳ ಅಭಿವೃದ್ಧಿಗೆ ಪಾಲಿಕೆಯಲ್ಲಿ ಅನುದಾನದ ಕೊರತೆ ಇಲ್ಲ. ಯಾವ ರಸ್ತೆಗಳನ್ನು ಅವರು ಅಭಿವೃದ್ಧಿ ಮಾಡಿ ಹಸ್ತಾಂತರ ಮಾಡಿದ್ದಾರೆ ಎನ್ನುವುದನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುದು’ ಎಂದು ತಿಳಿಸಿದರು.

Advertisement

 

-ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next