Advertisement

ಫ್ಲೆಕ್ಸ್‌ ತೆರವಿಗೆ ಕಟು ಸೂಚನೆ

12:24 PM Aug 09, 2018 | Team Udayavani |

ಬೆಂಗಳೂರು: ನಗರದಲ್ಲಿ ಫ್ಲೆಕ್ಸ್‌ಗಳ ತೆರವು ಕಾರ್ಯಚರಣೆಗೆ ಸಂಬಂಧಿಸಿದಂತೆ ಬಿಬಿಎಂಪಿಗೆ ಮತ್ತೂಮ್ಮೆ ಚಾಟಿ ಬೀಸಿರುವ ಹೈಕೋರ್ಟ್‌, ಈ ವಿಷಯದಲ್ಲಿ ಅಧಿಕಾರಿಗಳಿಗೆ ದಯೆ, ದಾಕ್ಷಿಣ್ಯ ತೋರುವ ಪ್ರಶ್ನೆಯೇ ಇಲ್ಲ ಎಂದು ಕಟುವಾಗಿ ಹೇಳಿದೆ.

Advertisement

ಪ್ರಕರಣಕ್ಕೆ ಸಂಬಂಧಿಸಿದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾ. ದಿನೇಶ್‌ ಮಹೇಶ್ವರಿ ಹಾಗೂ ನ್ಯಾ. ಆರ್‌. ದೇವದಾಸ್‌ ಅವರಿದ್ದ ವಿಭಾಗೀಯ ಪೀಠ, ಬುಧವಾರ ಸರ್ಕಾರ, ಬಿಬಿಎಂಪಿ ಹಾಗೂ ತೆರವು ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಫ್ಲೆಕ್ಸ್‌ ತೆರವು ಕಾರ್ಯಚರಣೆ ಮುಗಿಯುವವರೆಗೆ ಯಾವ ಅಧಿಕಾರಿಗಳನ್ನೂ ಸುಮ್ಮನೆ ಕುಳಿತುಕೊಳ್ಳಲು ಬಿಡುವುದಿಲ್ಲ. ನಗರದಲ್ಲಿ ಎಲ್ಲೂ ಒಂದೇ ಒಂದು ಫ್ಲೆಕ್ಸ್‌ ಕಾಣಬಾರದು ಎಂದು ಎಚ್ಚರಿಸಿತು.

ಜಾಹಿರಾತು ನೀತಿ ವಿಳಂಬಕ್ಕೆ ಗರಂ: ವಿಚಾರಣೆ ವೇಳೆ ಜಾಹಿರಾತು ನೀತಿಗೆ ಸಂಬಂಧಿಸಿದಂತೆ ಸರ್ಕಾರದ ಮೇಲೆ ಗರಂ ಆದ ನ್ಯಾಯಪೀಠ, 2016ರಲ್ಲಿ ನೀತಿ ಜಾರಿಗೆ ತರಲಾಗಿದೆ ಎಂದು ಹೇಳುತ್ತಿದ್ದೀರಿ. ಆದರೆ, ಇಲ್ಲಿವರೆಗೆ ಅದನ್ನು ಯಾಕೆ ಅಂತಿಮಗೊಳಿಸಿ. ಇದು ನಿರ್ಲಕ್ಷ್ಯದ ಪರಮಾವಧಿ. ಇದು ವ್ಯವಸ್ಥೆಗೆ ಅಧಿಕಾರಿಗಳು ಮಾಡುತ್ತಿರುವ ಘೋರ ಅಪಮಾನ. ಈ ರೀತಿಯ ನಿರ್ಲಕ್ಷ್ಯಕ್ಕೆ ಕೆಳಹಂತದ ಅಧಿಕಾರಿಗಳ ಬದಲು ಮುಖ್ಯ ಕಾರ್ಯದರ್ಶಿಯವರನ್ನು
ಹೊಣೆಗಾರರನ್ನಾಗಿ ಮಾಡಿ, ಅವರಿಗೆ ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಜತೆಗೆ ಜಾಹೀರಾತು ನೀತಿ ಬಗ್ಗೆ ಮಾಹಿತಿ ನೀಡಲು ಅಡ್ವೋಕೇಟ್‌ಗೆ ಸೂಚಿಸಿದರು.

 ಏಳು ಆರೋಪಿಗಳ ಬಂಧನ: ಫ್ಲೆಕ್ಸ್‌ ತೆರವು ಕಾರ್ಯಾಚರಣೆ ವೇಳೆ ಬಿಬಿಎಂಪಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳಿಗೆ ಸಂಬಂಧ ಪೊಲೀಸ್‌ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ನ್ಯಾಯಪೀಠ ಕೇಳಿದಾಗ, ಈಗಾಗಲೇ ಏಳು
ಮಂದಿಯನ್ನು ಬಂಧಿಸಲಾಗಿದೆ. ತನಿಖೆ ಪೂರ್ಣಗೊಂಡಿದ್ದು, ಸದ್ಯ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. ಹೊಸದಾಗಿ ಫ್ಲೆಕ್ಸ್‌ ಹಾಕಿದವರ ವಿರುದ್ಧ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಎಫ್ ಐಆರ್‌ ಸಹ ದಾಖಲಿಸಿಕೊಳ್ಳಲಾಗಿದೆ ಎಂದು ಅಡ್ವೋಕೇಟ್‌ ಜನರಲ್‌ ಅವರು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ಪ್ರಕರಣದ ವಿಚಾರಣೆಯನ್ನು ನ್ಯಾಯಪೀಠ ಆ.10ಕ್ಕೆ ಮುಂದೂಡಿತು.

ಫ್ಲೆಕ್ಸ್‌ಗಳಲ್ಲಿ ಸೌಂದರ್ಯ ತೋರಿಸಬೇಡಿ ಫ್ಲೆಕ್ಸ್‌ ತೆರವು ಕುರಿತು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ನಿರ್ದಾಕ್ಷಿಣ್ಯ ಹೆಜ್ಜೆಗಳನ್ನಿಡಲಾಗಿದ್ದು, ಬೆಂಗಳೂರಿನ ಸೌಂದರ್ಯ ಕಾಪಾಡಲು ಬಿಬಿಎಂಪಿ ಬದ್ಧವಾಗಿದೆ ಎಂದು ನ್ಯಾಯಪೀಠಕ್ಕೆ ಅಡ್ವೋಕೇಟ್‌ ಜನರಲ್‌ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ವಿಚಾರದಲ್ಲಿ ನೀವು ಏನು ಮಾಡುತ್ತೀರಿ ಅನ್ನುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು. ಒಟ್ಟಿನಲ್ಲಿ ಸಮಸ್ಯೆ ಬಗೆಹರಿಯಬೇಕು. ಒಂದಂತೂ ನೆನಪಿಟ್ಟುಕೊಳ್ಳಿ ಬೆಂಗಳೂರಿನ ಸೌಂದರ್ಯವನ್ನು ಫ್ಲೆಕ್ಸ್‌ಗಳಲ್ಲಿ ತೋರಿಸಬೇಡಿ ಎಂದು ತೀಕ್ಷ್ಣವಾಗಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next