Advertisement

ಮುಂಬೈ ಕಣ್ಣಿಗೆ ಬೆಣ್ಣೆ, ಬೆಂಗ್ಳೂರಿಗೆ ಸುಣ್ಣ!

01:01 PM May 28, 2019 | Suhan S |

ಬೆಂಗಳೂರು: ಎರಡು ಮಹಾನಗರಗಳಲ್ಲಿ ಕೈಗೆತ್ತಿಕೊಂಡಿರುವ ಯೋಜನೆ ಒಂದೇ. ಎರಡೂ ಕಡೆಗಳಲ್ಲಿ ಕಾಮಗಾರಿ ಕೈಗೆತ್ತಿಕೊಂಡಿರುವ ಕಂಪನಿಯೂ ಒಂದೇ. ಆದರೆ, ಅದು ನಿರ್ವಹಿಸುತ್ತಿರುವ ಕಾರ್ಯವೈಖರಿ ಭಿನ್ನ. ಈ ‘ಭಿನ್ನ ಧೋರಣೆ’ಯನ್ನು ಪ್ರಶ್ನಿಸುವವರೂ ಇಲ್ಲ. ಪರಿಣಾಮ ನಗರದ ಜನ ತೊಂದರೆ ಅನುಭವಿಸುವಂತಾಗಿದೆ.

Advertisement

ಆ ಎರಡು ಮಹಾನಗರಗಳು ಬೆಂಗಳೂರು ಮತ್ತು ಮುಂಬೈ. ಎರಡೂ ಕಡೆ ನಡೆಯುತ್ತಿರುವ ಕಾರ್ಯ ಮೆಟ್ರೋ. ವಾಣಿಜ್ಯ ನಗರಿ ಮುಂಬೈನಲ್ಲಿ ಉದ್ದೇಶಿತ ಕಾಮಗಾರಿ ನಡೆಯುತ್ತಿರುವ ಮಾರ್ಗದುದ್ದಕ್ಕೂ ವೈಜ್ಞಾನಿಕವಾಗಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ, ತಾತ್ಕಾಲಿಕ ಬೀದಿ ದೀಪಗಳನ್ನು ಅಳವಡಿಸಿ, ಪಾದಚಾರಿಗಳು ಮತ್ತು ವಾಹನ ಸವಾರರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಉದ್ಯಾನ ನಗರಿಯಲ್ಲಿ ವ್ಯವಸ್ಥೆಯು ಇದಕ್ಕೆ ತದ್ವಿರುದ್ಧವಾಗಿದೆ.

ಮೆಟ್ರೋ ಕಾಮಗಾರಿ ನಡೆಯುವ ಮಾರ್ಗದಲ್ಲೆಲ್ಲಾ ವಿಭಜಕಗಳಲ್ಲಿದ್ದ ಬೀದಿ ದೀಪಗಳನ್ನು ತೆರವುಗೊಳಿಸಲಾಗಿದೆ. ಇದು ರಸ್ತೆ ಅಪಘಾತಗಳಿಗೆ ಎಡೆಮಾಡಿಕೊಡುತ್ತಿದೆ. ಇನ್ನು ಕಾಮಗಾರಿಯಿಂದ ರಸ್ತೆಗಳ ಗಾತ್ರ ಕಿರಿದಾಗುತ್ತಿದ್ದಂತೆ ವಾಹನಗಳು ಫ‌ುಟ್ಪಾತ್‌ಗಳನ್ನು ಆಕ್ರಮಿಸಿಕೊಂಡಿವೆ. ಆ ಮಾರ್ಗಗಳಲ್ಲಿ ಓಡಾಡುವ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವಂತಾಗಿದೆ. ಟ್ರಾಫಿಕ್‌ ವಾರ್ಡನ್‌ಗಳು ಕೂಡ ಇಲ್ಲದ್ದರಿಂದ ವಾಹನ ಸವಾರರೂ ಪರದಾಡುವಂತಾಗಿದೆ. ಅಷ್ಟೇ ಅಲ್ಲ, ಕಾಮಗಾರಿ ವೇಗ ಕೂಡ ಇಲ್ಲಿಗಿಂತ ಮುಂಬೈನಲ್ಲಿ ವೇಗವಾಗಿ ಸಾಗುತ್ತಿದೆ. ಈ ತಾರತಮ್ಯ ಧೋರಣೆ ಯಾಕೆ? ಎದ್ದುಕಾಣುವಂತಿದ್ದರೂ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ಮೌನ ವಹಿಸಿದ್ದು ಯಾಕೆ ಎಂಬ ಪ್ರಶ್ನೆ ಪ್ರಜಾರಾಗ್‌ ಸಂಸ್ಥೆಯ ಸಂಜೀವ್‌ ದ್ಯಾಮಣ್ಣವರ ಕೇಳುತ್ತಾರೆ.

ಸಮಸ್ಯೆ ಇರೋದು ಎಲ್ಲಿ?: ನಗರದ ಅತಿ ಹೆಚ್ಚು ವಾಹನದಟ್ಟಣೆ ಇರುವ ಆರ್‌.ವಿ. ರಸ್ತೆ-ಎಲೆಕ್ಟ್ರಾನಿಕ್‌ ಸಿಟಿ-ಬೊಮ್ಮಸಂದ್ರ ಮಾರ್ಗ, ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಎಲ್ಲ ಬೀದಿ ದೀಪಗಳನ್ನು ತೆರವುಗೊಳಿಸಲಾಗಿದೆ. ಮುಖ್ಯವಾಗಿ ಜಯನಗರ ಈಸ್ಟ್‌ ಎಂಡ್‌ ಬಳಿ ಇಂಟರ್‌ಸೆಕ್ಷನ್‌ (ಮಾರ್ಗಗಳು ಕೂಡುವ ಜಾಗ) ಇದೆ. ಅಲ್ಲಿ ಸಿಗ್ನಲ್ಗಳೂ ಇಲ್ಲ; ಟ್ರಾಫಿಕ್‌ ವಾರ್ಡನ್‌ಗಳೂ ಇಲ್ಲ. ಇನ್ನು ಸಿಲ್ಕ್ಬೋಡ್ನ್ ಎಕ್ಸಾ ಜಂಕ್ಷನ್‌ ಬಳಿ ಅವೈಜ್ಞಾನಿಕವಾಗಿ ಇಂಟರ್‌ಸೆಕ್ಷನ್‌ ಮಧ್ಯದಲ್ಲೇ ದೊಡ್ಡ ಕಂಬವನ್ನು ಹಾಕಲಾಗಿದೆ. ಅಲ್ಲಿಯೂ ಸಿಗ್ನಲ್ಗಳಿಲ್ಲ ಹಾಗೂ ವಾರ್ಡನ್‌ಗಳಿಲ್ಲ. ಈ ಮೊದಲೇ ಪೀಕ್‌ ಅವರ್‌ನಲ್ಲಿ ವಾಹನಗಳಿಂದ ತುಂಬಿತುಳುಕುತ್ತಿದ್ದ ಈ ರಸ್ತೆಗಳು ಈಗ ವಾಹನ ಸವಾರರ ಪಾಲಿಗೆ ನರಕಸದೃಶವಾಗಿ ಪರಿಣಮಿಸಿವೆ ಎಂದು ಕ್ಲೀನ್‌ ಏರ್‌ ಪ್ಲಾಟ್ಫಾರಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಶ್‌ ರಂಗನಾಥ್‌ ತಿಳಿಸುತ್ತಾರೆ.

ಮುಂಬೈನಲ್ಲೂ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಆದರೆ, ಆ ಕಾಮಗಾರಿಯಿಂದ ಸ್ವಲ್ಪವೂ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಯಾಕೆ ಈ ಅವ್ಯವಸ್ಥೆ? ಈ ಕಾಮಗಾರಿಯಿಂದ ಸ್ಥಳೀಯರಿಗಂತೂ ತುಂಬಾ ತೊಂದರೆ ಆಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Advertisement

ವಾಹನಗಳ ಹೊಗೆ ಜತೆ ಮಣ್ಣಿನ ಧೂಳು: ಇನ್ನು ಪೈಲಿಂಗ್‌ ಮಾಡುವಾಗ ಸಾಕಷ್ಟು ಮಣ್ಣು ಹೊರತೆಗೆಯಲಾಗುತ್ತದೆ. ಅದನ್ನು ನಿಯಮಿತವಾಗಿ ವಿಲೇವಾರಿ ಮಾಡಬೇಕು. ಇದು ಕೂಡ ಸರಿಯಾಗಿ ಆಗುತ್ತಿಲ್ಲ. ವಾಹನಗಳ ಹೊಗೆ ಜತೆಗೆ ಈ ಮಣ್ಣಿನ ಧೂಳು ಸೇರಿಕೊಂಡು ಮತ್ತಷ್ಟು ಸಮಸ್ಯೆ ಸೃಷ್ಟಿಸುತ್ತಿದೆ. ಇದಕ್ಕಿಂತ ಮುಖ್ಯವಾಗಿ ಪೈಲಿಂಗ್‌ ಆರಂಭಿಸುವ ಮುನ್ನ ತಾತ್ಕಾಲಿಕ ಪಾದಚಾರಿ ಮಾರ್ಗ ನಿರ್ಮಿಸಬೇಕು. ಮುಂಬೈನಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗಿದೆ ಎಂದೂ ಅವರು ಹೇಳಿದರು.

ಕೇವಲ ಮೆಟ್ರೋ ಕಾಮಗಾರಿ ನಡೆಯುವ ಮಾರ್ಗಗಳಿಗೆ ಇದು ಸೀಮಿತವಾಗಿಲ್ಲ. ಫ್ಲೈಓವರ್‌, ವೈಟ್ಟಾಪಿಂಗ್‌ ಮತ್ತಿತರ ಕಾಮಗಾರಿ ನಡೆಯುವ ಸ್ಥಳಗಳಲ್ಲೂ ಇದನ್ನು ಕಾಣಬಹುದು. ಸಿಗ್ನಲ್ಗಳೇ ಇರುವುದಿಲ್ಲ. ಇದ್ದರೂ ಬಹುತೇಕ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಟ್ರಾಫಿಕ್‌ ವಾರ್ಡನ್‌ಗಳಿರುವುದಿಲ್ಲ. ಈ ಮಧ್ಯೆ ಕಿರಿದಾದ ರಸ್ತೆಗಳಲ್ಲಿ ವಾಹನ ಸವಾರರು ಪರದಾಡುವುದು ನಿತ್ಯದ ಗೋಳು ಎಂದು ಸಂಜೀವ್‌ ದ್ಯಾಮಣ್ಣವರ ತಿಳಿಸುತ್ತಾರೆ.

● ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next