Advertisement

ಕುಂಟುತ್ತಾ ಸಾಗಿರುವ ಚಾಮುಂಡಿ ಬೆಟ್ಟದ ಕಾಮಗಾರಿ

03:19 PM May 31, 2018 | Team Udayavani |

ಮೈಸೂರು: ನಾಡಿನ ಅಧಿದೇವತೆ ಮೈಸೂರಿನ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬರುವ ಯಾತ್ರಿಗಳು, ಪ್ರವಾಸಿಗರ ಅನುಕೂಲಕ್ಕಾಗಿ ಬಹು ಮಹಡಿ ವಾಹನ ನಿಲುಗಡೆ ತಾಣ, ಅತಿಥಿ ಗೃಹದ ನವೀಕರಣ ಸೇರಿದಂತೆ ಅಂದಾಜು 79.94 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಕುಂಟುತ್ತಾ ಸಾಗಿವೆ.

Advertisement

ರಾಜ್ಯದ ಅತೀ ಹೆಚ್ಚು ಆದಾಯ ಹೊಂದಿರುವ ದೇವಾಲಯಗಳ ಎ ಶ್ರೇಣಿಯಲ್ಲಿ ಬರುವ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬರುವ ಯಾತ್ರಿಕರು, ಪ್ರವಾಸಿಗರ ಅನುಕೂಲಕ್ಕಾಗಿ ಚಾಮುಂಡಿಬೆಟ್ಟದಲ್ಲಿ ಮೂಲ ಸೌಕರ್ಯ ಕಲ್ಪಿಸುವ ಧಾರ್ಮಿಕ ದತ್ತಿ ಇಲಾಖೆಯ ಪ್ರಸ್ತಾವನೆಗೆ ರಾಜ್ಯಸರ್ಕಾರ 2015ರ ಆಗಸ್ಟ್‌ ತಿಂಗಳಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿತ್ತು. 

8.04 ಎಕರೆ ಭೂಸ್ವಾಧೀನ: ಈ ಎಲ್ಲ ಕಾಮಗಾರಿಗಳಿಗಾಗಿ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಚಾಮುಂಡಿಬೆಟ್ಟದಲ್ಲಿ 8.04 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿದ್ದು, ಈ ಜಾಗದಲ್ಲಿ 61.30 ಕೋಟಿ ರೂ. ವೆಚ್ಚದಲ್ಲಿ ವಾಹನ ನಿಲುಗಡೆಗೆ ಬಹು ಅಂತಸ್ತಿನ ಕಟ್ಟಡ ಹಾಗೂ ರಸ್ತೆ ನಿರ್ಮಾಣ, 10.44 ಕೋಟಿ ರೂ. ವೆಚ್ಚದಲ್ಲಿ ಭಕ್ತರ
ಸರತಿ ಸಾಲಿನ ವ್ಯವಸ್ಥೆ ಹಾಗೂ ಶೌಚಾಲಯ ಬ್ಲಾಕ್‌ ನಿರ್ಮಾಣ, 16.5 ಲಕ್ಷ ರೂ. ವೆಚ್ಚದಲ್ಲಿ ಡಾರ್ಮಿಟರಿ ಬ್ಲಾಕ್‌ ನಿರ್ಮಾಣ ಹಾಗೂ 65.5 ಲಕ್ಷ ರೂ. ವೆಚ್ಚದಲ್ಲಿ ವಾಣಿಜ್ಯ ಸಮುತ್ಛಯ ನಿರ್ಮಾಣ ಸೇರಿದಂತೆ 79.94 ಕೋಟಿ ರೂ.ಗಳ ಕಾಮಗಾರಿಗೆ ದೇವಾಲಯದ ನಿಶ್ಚಿತ ಠೇವಣಿಯಲ್ಲಿರುವ 69 ಕೋಟಿ ರೂ. ಅನುದಾನ ಬಳಸಿಕೊಂಡು, ಕೊರತೆಯಾಗುವ 10.94 ಕೋಟಿ ರೂ.ಗಳನ್ನು ಪ್ರವಾಸೋದ್ಯಮ ಇಲಾಖೆಯಿಂದ ಪಡೆಯಲು ತಿಳಿಸಿ ಕಾಮಗಾರಿಗಳ ಅಂದಾಜು ಪಟ್ಟಿ ಮತ್ತು ನಕ್ಷೆಗೆ ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿದೆ.

ಕಾಮಗಾರಿ ವಿಳಂಬ: ಲೋಕೋಪಯೋಗಿ ಇಲಾಖೆ ಕಾಮಗಾರಿ ಕೈಗೆತ್ತಿಕೊಂಡು ಟೆಂಡರ್‌ ನೀಡಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2017ರ ಡಿಸೆಂಬರ್‌ನಲ್ಲೇ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಮುಖ್ಯವಾಗಿ ವಾಹನ ನಿಲುಗಡೆಗೆ ಬಹುಮಹಡಿ ಕಟ್ಟಡ ನಿರ್ಮಾಣದ ಜಾಗದಲ್ಲಿ ಹೆಬ್ಬಂಡೆಗಳು ಸಿಕ್ಕಿದ್ದರಿಂದ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಏನೇನು ಕಾಮಗಾರಿ: ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಬಹುಮಹಡಿ ವಾಹನ ನಿಲುಗಡೆ ಕಟ್ಟಡದ ಆರ್‌ಸಿಸಿ ಮುಗಿದಿದೆ. ವಾಣಿಜ್ಯ ಸಮುತ್ಛಯದ ಕಾಮಗಾರಿ ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸಗಳಷ್ಟೇ ಬಾಕಿ ಉಳಿದಿದೆ. ಭಕ್ತರ ಸರತಿ ಸಾಲಿನ ನಿರ್ವಹಣೆ, ದೇವಸ್ಥಾನದ ದಾಸೋಹ ಭವನಕ್ಕೆ ಬಣ್ಣ ಬಳಿಯುವುದು ಮತ್ತಿತರೆ ಕಾಮಗಾರಿ, ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸೇರಿದ ರಾಜರಾಜೇಶ್ವರಿ ಅತಿಥಿ ಗೃಹದ ದುರಸ್ತಿ ಹಾಗೂ ನವೀಕರಣ ಕಾಮಗಾರಿ, ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸೇರಿದ ರಾಜರಾಜೇಶ್ವರಿ ಅತಿಥಿ ಗೃಹದ ಸುತ್ತಲಿನ ಕಾಂಪೌಂಡಿಗೆ ಗ್ರಿಲ್‌ ಅಳವಡಿಸುವಿಕೆ, ಚಾಮುಂಡಿಬೆಟ್ಟದ ಮುಖ್ಯರಸ್ತೆಯಲ್ಲಿರುವ ಪ್ರವಾಸಿ ಗೋಪುರ (ಜಂಗಮ ಮಂಟಪ) ದುರಸ್ತಿ ಕಾಮಗಾರಿ, ಚಾಮುಂಡಿಬೆಟ್ಟದ ನಂದಿ ವಿಗ್ರಹದ ಬಳಿ ಕಾಂಕ್ರೀಟ್‌ ರಸ್ತೆ ಮತ್ತು ಕಲ್ಲಿನ ಮಂಟಪದ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದೆ.

Advertisement

ದುರಸ್ತಿ ಕಾಮಗಾರಿ: ದೇವಾಲಯದ ಗೋಶಾಲೆ ದುರಸ್ತಿ ಮತ್ತು ನವೀಕರಣ ಕಾಮಗಾರಿ ಪೂರ್ಣಗೊಂಡಿದೆ. ದೇವಸ್ಥಾನಕ್ಕೆ ವಿಶೇಷ ಸರತಿ ಸಾಲಿಗೆ ಸ್ಟೇನ್‌ಲೆಸ ಸ್ಟೀಲ್‌ ರೈಲಿಂಗ್ಸ್‌ ಅಳವಡಿಸುವ ಕಾಮಗಾರಿ, ದಾಸೋಹ ಭವನ ಮತ್ತು ಉದ್ಯಾನ ವನದ ಗ್ರಿಲ್‌ಗ‌ಳಿಗೆ ಬಣ್ಣ ಬಳಿಯುವ ಕಾಮಗಾರಿ, ದೇವಿಕೆರೆಯ ಪಶ್ಚಿಮ ಭಾಗದ ಕುಸಿದು ಬಿದ್ದಿದ್ದ
ಗೋಡೆ ದುರಸ್ತಿ ಕಾಮಗಾರಿ ಪೂರ್ಣಗೊಂಡಿದೆ. 

ಆಮೆಗತಿ ಕಾಮಗಾರಿ: ದಾಸೋಹ ಭವನ ಹಿಂಭಾಗದ ಸರ್ವೀಸ್‌ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ, ಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಕಚೇರಿ ಸಂಕೀರ್ಣ ನಿರ್ಮಾಣ ಕಾಮಗಾರಿ, ಚಾಮುಂಡಿಬೆಟ್ಟದ ಮುಖ್ಯರಸ್ತೆಗೆ ಸೇರುವ ಹಳೇ ನಂದಿ ರಸ್ತೆ, ಲಲಿತಮಹಲ್‌ ನಿಂದ ಚಾಮುಂಡಿಬೆಟ್ಟದ ಮುಖ್ಯರಸ್ತೆಗೆ ಸೇರುವ ರಸ್ತೆ, ಉತ್ತನಹಳ್ಳಿ ರಸ್ತೆಗಳಿಗೆ ಗೇಟುಗಳನ್ನು ಅಳವಡಿಸಿ, ಭದ್ರತಾ ಸಿಬ್ಬಂದಿಗೆ ಕೊಠಡಿ ನಿರ್ಮಿಸುವ ಕಾಮಗಾರಿ ಆಗಬೇಕಿದೆ. ಕಳೆದ ದಸರಾ ವೇಳೆಗೇ ಒಂದು ಹಂತದ ಕಾಮಗಾರಿ ಪೂರ್ಣಗೊಳಿಸಿ ಬೆಟ್ಟಕ್ಕೆ ಬರುವ ಭಕ್ತರು, ಪ್ರವಾಸಿಗರಿಗೆ ಸಾಧ್ಯವಾದಷ್ಟು ಅನುಕೂಲ ಕಲ್ಪಿಸುವ ಗುರಿ ಹೊಂದಿತ್ತು. ಆದರೆ, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದನ್ನು ನೋಡಿದರೆ ಈ ದಸರೆ ವೇಳೆಗಾದರೂ ಜನರಿಗೆ ಇದರ ಅನುಕೂಲ ದೊರೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಗುತ್ತಿಗೆದಾರರಿಗೆ ನೀಡಲಾಗಿದ್ದ ವಾಯಿದೆ ಮುಗಿದಿದೆ. ಆದರೆ, ಬಹು ಮಹಡಿ ವಾಹನ ನಿಲುಗಡೆ ತಾಣ ನಿರ್ಮಾಣದ ಜಾಗದಲ್ಲಿ ಹೆಬ್ಬಂಡೆಗಳು ಸಿಕ್ಕಿದ್ದರಿಂದ ಕಾಮಗಾರಿ ನಿಧಾನವಾಗಿದ್ದು, ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರು ಇನ್ನೂ ನಾಲ್ಕು ತಿಂಗಳು ಕಾಲಾವಕಾಶ ಕೇಳಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
 ಪ್ರಸಾದ್‌, ಕಾರ್ಯನಿರ್ವಾಹಕ ಅಧಿಕಾರಿ, ಶ್ರೀಚಾಮುಂಡೇಶ್ವರಿ ದೇವಸ್ಥಾನ

 ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next