ಹ್ಯಾಮಿಲ್ಟನ್: ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಗೆದ್ದಿದ್ದ ವಿರಾಟ್ ಪಡೆಗೆ ಮೊದಲ ಏಕದಿನ ಪಂದ್ಯದಲ್ಲೇ ಮುಖಭಂಗವಾಗಿದೆ. ಭಾರತ 347 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿದ್ದರೂ ಅದನ್ನು ಉಳಿಸಿಕೊಳ್ಳಲಾಗದೆ ಭಾರತದ ಬೌಲರ್ ಗಳು ಪರದಾಡಿದರು.
ಪಂದ್ಯದ ಸೋಲಿಗೆ ಕಳಪೆ ಫೀಲ್ಡಿಂಗ್ ಕಾರಣ ಎಂದು ನಾಯಕ ವಿರಾಟ್ ಕೊಹ್ಲಿ ಪಂದ್ಯದ ನಂತರ ಹೇಳಿದರು.
“ಬ್ಯಾಟಿಂಗ್‌ನಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದೆವು. ಶ್ರೇಯಸ್ ಐಯ್ಯರ್, ಕೆ.ಎಲ್.ರಾಹುಲ್ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದರು. ಅವರ ದಿಟ್ಟ ಬ್ಯಾಟಿಂಗ್ ನಿಂದಾಗಿ ನಾವು ಮುನ್ನೂರರ ಗಡಿ ದಾಟಲು ಸಾಧ್ಯವಾಯಿತು. ಮಾಯಾಂಕ್ ಅಗರ್ವಾಲ್, ಪೃಥ್ವಿ ಶಾ ಇದೇ ಮೊದಲ ಸಲ ಆರಂಭಿಕರಾಗಿಳಿದು ತಕ್ಕ ಮಟ್ಟಿಗೆ ಯಶಸ್ಸು ಸಾಧಿಸಿದರು. ಆದರೆ ನಾವು ಫೀಲ್ಡಿಂಗ್ ಹಾಗೂಬೌಲಿಂಗ್‌ನಲ್ಲಿ ಕಳಪೆ ಆಟ ನಿಭಾಯಿಸಿದೆವು. ಇದು ನಮ್ಮ ಸೋಲಿಗೆ ಕಾರಣವಾಯಿತು. ಮುಂದಿನ ಪಂದ್ಯಗಳಲ್ಲಿ ತಪ್ಪುಗಳನ್ನು ತಿದ್ದಿಕೊಂಡು ಆಡುವತ್ತ ಹೆಚ್ಚಿನ ಗಮನ ಹರಿಸಲಾಗುತ್ತದೆ’ ಎಂದು ತಿಳಿಸಿದರು.
ಬೌಲಿಂಗ್ ಮತ್ತು ಕಳಪೆ ಫೀಲ್ಡಿಂಗ್‌ನಿಂದಾಗಿ ಭಾರತ ಸೋಲು ಕಾಣುವಂತಾಯಿತು. ಬೌಲರ್‌ಗಳು ಎಕ್ಸ್‌ಟ್ರಾ ರೂಪದಲ್ಲಿ 29 ರನ್ ಬಿಟ್ಟುಕೊಟ್ಟರು. ಅದರಲ್ಲಿ ವೈಡ್ ಪಾಲು 24 ರನ್. ಮೊದಲ ಓವರ್ ನಲ್ಲೇ ಬುಮ್ರಾ ಮೂರು ವೈಡ್ ಹಾಕಿದ್ದರು.
23ನೇ ಓವರ್‌ನಲ್ಲಿ ರವೀಂದ್ರ ಜಡೇಜ ಅವರ ಬೌಲಿಂಗ್‌ನಲ್ಲಿ ಟೇಲರ್ 10 ರನ್ ಗಳಿಸಿದ್ದ ವೇಳೆ ಯಾದವ್ ಚೆಂಡನ್ನು ಕೈಚೆಲ್ಲಿರುವುದು ಪಂದ್ಯ ತಿರುವು ಪಡೆಯಲು ಕಾರಣವಾಯಿತು. ಒಂದು ವೇಳೆ ಯಾದವ್ ಈ ಕ್ಯಾಚ್ ಪಡೆಯುತ್ತಿದ್ದರೆ ಭಾರತಕ್ಕೆ ಗೆಲ್ಲುವ ಅವಕಾಶ ಹೆಚ್ಚಿತ್ತು. ಈ ಜೀವದಾನದ ಲಾಭ ಪಡೆದ ಟೇಲರ್ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿ ಕೊನೆಯವರೆಗೂ ಅಜೇಯರಾಗಿ ಉಳಿದು ತಂಡಕ್ಕೆ ಮಹತ್ವದ ಗೆಲುವು ತಂದುಕೊಟ್ಟರು.
ನಿಧಾನಗತಿ ಬೌಲಿಂಗ್: ಭಾರತೀಯರಿಗೆ ಮತ್ತೆ ದಂಡ
ಕಳೆದ ಟಿ20 ಸರಣಿಯ 4ನೇ ಮತ್ತು ಅಂತಿಮ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ನಡೆಸಿದಕ್ಕೆ ಐಸಿಸಿ ಶೇ 20ರಷ್ಟು ದಂಡ ವಿಧಿಸಿತ್ತು. ಆದರೆ ಇದರಿಂದ ಎಚ್ಚೆತ್ತುಕೊಳ್ಳದ ಭಾರತ ಏಕದಿನ ಸರಣಿಯಲ್ಲೂ ಇದೇ ತಪ್ಪನ್ನು ಪುನರಾವರ್ತಿಸಿದೆ. ಮೊದಲ ಏಕದಿನ ಪಂದ್ಯದಲ್ಲಿ ನಿಗದಿತ ಸಮಯದ ವೇಳೆ ಭಾರತ 4 ಓವರ್ ಹಿಂದಿತ್ತು ಹೀಗಾಗಿ ರೆಫ್ರಿ ಶೇ.80 ರಷ್ಟು ದಂಡ ವಿಧಿಸಿದ್ದಾರೆ.