ಲಕ್ಷ್ಮೇಶ್ವರ: ಜನರು ಬರಗಾಲದಲ್ಲಿ ಉದ್ಯೋಗವಿಲ್ಲದೇ ಕೆಲಸ ಅರಸಿ ನಗರ ಮತ್ತು ಪಟ್ಟಣದ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಪ್ಪಿಸಲು ಹಾಗೂ ಅಂತರ್ಜಲ ವೃದ್ಧಿ, ಭೂ ಸವಕಳಿ ತಪ್ಪಿಸಿ ಫಲವತ್ತತೆ ಕಾಪಾಡುವ ನಿಟ್ಟಿನಲ್ಲಿ ನರೇಗಾ ಯೋಜನೆಯಡಿ ಕೃಷಿ ಇಲಾಖೆ ಇಳಿಜಾರು ಬದುವು ನಿರ್ಮಾಣ ಕಾರ್ಯ ಆರಂಭಿಸಿದೆ.
ಈ ಕಾರ್ಯಕ್ಕೆ ಉಪಗ್ರಹ ಆಧಾರಿತ ಸಮೀಕ್ಷೆ ಮಾಡಿ ಹುಲ್ಲೂರ ಗ್ರಾಮದಲ್ಲಿ ಜಲಾನಯನ ಪ್ರದೇಶ ಗುರುತಿಸಿ 1050 ಎಕರೆ ಜಮೀನುಗಳಲ್ಲಿ ಬದುವು ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಒಟ್ಟು 1.90 ಕೋಟಿ ರೂ. ವೆಚ್ಚದ ಕಾಮಗಾರಿಯಲ್ಲಿ 64,886 ಸಾವಿರ ಮಾನವ ದಿನಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಮಳೆಗಾಲದಲ್ಲಿ ಮೇಲ್ಭಾಗದಿಂದ ಹರಿದು ಹೋಗುವ ನೀರು ಭೂಮಿಯ ಮೇಲ್ಪದರ ಕೊಚ್ಚಿಕೊಂಡು ಹೋಗಿ ಮಣ್ಣಿನ ಸವಕಳಿ ಜೊತೆಗೆ ಫಲವತ್ತತೆ ಕುಂಠಿತಗೊಳಿಸುತ್ತದೆ. ಇದನ್ನು ತಡೆಯುವ ಉದ್ದೇಶದಿಂದ ಇಳಿಜಾರುಗಳ ಅಲ್ಲಲ್ಲಿ ಅಡ್ಡಲಾಗಿ ಬದುವು ಮತ್ತು ಗುಂಡಿಗಳ ನಿರ್ಮಾಣ ಮಾಡಿ ನೀರು ಇಂಗಿಸುವಿಕೆಗೆ ಆದ್ಯತೆ ನೀಡಲಾಗುತ್ತಿದೆ.
ಇದು ಒಂದು ಕಡೆ ರೈತರಿಗೆ ಮತ್ತೂಂದು ಕಡೆ ಕೃಷಿ ಕೂಲಿಕಾರ್ಮಿಕರಿಗೆ ವರದಾನವಾಗಿ ಪರಿಣಮಿಸಿದೆ. ರೈತರು ಕಳೆದ ಮೂರ್‍ನಾಲ್ಕು ವರ್ಷಗಳ ಬರಗಾಲದಿಂದ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದಾರೆ. ರೈತರೇ ತಮ್ಮ ಜಮೀನುಗಳಲ್ಲಿ ಇಳಿಜಾರು ಬದುವು ನಿರ್ಮಿಸಿಕೊಳ್ಳಲು ಅಸಹಾಯಕರಾಗಿದ್ದಾರೆ. ರೈತರ ಮತ್ತು ಕೂಲಿಕಾರರ ನೆರವಿಗಾಗಿ ಈ ಯೋಜನೆ ಅತ್ಯಂತ ಉಪಯುಕ್ತವಾಗಿದೆ. ಈ ಮೊದಲು ಜಲಾನಯನ ಇಲಾಖೆ ಮುಖಾಂತರ ಈ ಕೆಲಸಗಳನ್ನು ಮಾಡಲಾಗುತ್ತಿತ್ತು. ಕೃಷಿ ಇಲಾಖೆಯೊಂದಿಗೆ ಅರಣ್ಯ, ತೋಟಗಾರಿಕೆ, ರೇಷ್ಮೆ ಇಲಾಖೆಗಳು ತಮ್ಮ ಪಾಲಿನ ಕೆಲಸಗಳನ್ನು ಕ್ರಿಯಾಯೋಜನೆಯಂತೆ ಕೈಗೆತ್ತಿಕೊಳ್ಳುತ್ತಿವೆ. ರೈತರ ಪಾಲಿನ ಆಶಾದಾಯಕವಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್ಲ ಹೇಳುತ್ತಿದ್ದಾರೆ.
ಲಕ್ಷ್ಮೇಶ್ವರದ ಕೃಷಿ ಇಲಾಖೆ ಅಧಿಕಾರಿ ಚಂದ್ರಶೇಖರ ನರಸಮ್ಮನವರ ಈ ಕುರಿತು ಪ್ರತಿಕ್ರಿಯೆ ನೀಡಿ, ಹುಲ್ಲೂರ ಗ್ರಾಮದಲ್ಲಿನ 1050 ಎಕರೆ ಪ್ರದೇಶಗಳಲ್ಲಿ ಇಳಿಜಾರು ಬದುವು ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಕಳೆದ ಒಂದು ವಾರದಿಂದ ನಿತ್ಯ 150ಕ್ಕೂ ಹೆಚ್ಚು ಕೃಷಿ ಕೂಲಿಕಾರ್ಮಿಕರು ಈ ಬದುವು ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ರೈತರ ಜಮೀನುಗಳಲ್ಲಿ ತೇವಾಂಶ ಹೆಚ್ಚಿಸುವ ಮತ್ತು ಉದ್ಯೋಗ ನೀಡುವ ಉದ್ದೇಶ ಸಾಫಲ್ಯತೆಯತ್ತ ಸಾಗಿದೆ ಎಂದು ಹೇಳಿದರು.
ಈ ಕುರಿತು ರೈತರಾದ ಸುರೇಶ ಗೌಳಿ, ಗುರುನಾಥಯ್ಯ ಅಮೋಘಿಮಠ, ಚನ್ನಬಸಗೌಡ ಪಾಟೀಲ ಪ್ರತಿಕ್ರಿಸಿ, ಬರಗಾಲದ ಸಂದರ್ಭದಲ್ಲಿ ನಮ್ಮದೇ ಕೃಷಿ ಭೂಮಿಯಲ್ಲಿ ಬದುವು ನಿರ್ಮಾಣದ ಜೊತೆಗೆ ಉದ್ಯೋಗ ನೀಡುತ್ತಿರುವ ಕಾರ್ಯದಿಂದ ನೂರಾರು ರೈತರಿಗೆ ಅನುಕೂಲವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.