Advertisement

ಸ್ಲೋನ್‌ -ಮ್ಯಾಡಿಸನ್‌ ಗೆಳತಿಯರ ಗ್ರ್ಯಾನ್‌ಸ್ಲಾಮ್‌ ಫೈನಲ್‌

06:50 AM Sep 09, 2017 | |

ನ್ಯೂಯಾರ್ಕ್‌: ಕೆಲವೇ ತಿಂಗಳ ಹಿಂದೆ ಗಂಭೀರ ಗಾಯದ ಸಮಸ್ಯೆಯಿಂದ ನರಳುತ್ತಿದ್ದ ಅಮೆರಿಕದ ಸ್ಲೋನ್‌ ಸ್ಟೀಫ‌ನ್ಸ್‌ ಮತ್ತು ಮ್ಯಾಡಿಸನ್‌ ಕೇಯ್ಸ ಯುಎಸ್‌ ಓಪನ್‌ ವನಿತಾ ಸಿಂಗಲ್ಸ್‌ ಪ್ರಶಸ್ತಿ ಸಮರದಲ್ಲಿ ಪರಸ್ಪರ ಎದುರಾಗುವುದರೊಂದಿಗೆ ಟೆನಿಸ್‌ ಲೋಕದಲ್ಲಿ ರೋಮಾಂಚನ ಸೃಷ್ಟಿಸಿದ್ದಾರೆ. ಇವರಿಬ್ಬರಿಗೂ ಇದು ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಎಂಬುದು ವಿಶೇಷ.

Advertisement

ಇವರ ಹೊಡೆತಕ್ಕೆ ಸಿಲುಕಿ ಸೋಲಿನ ಆಘಾತಕ್ಕೆ ಸಿಲುಕಿದವರೆಂದರೆ ಅನುಭವಿ ವೀನಸ್‌ ವಿಲಿಯಮ್ಸ್‌ ಮತ್ತು ಭರವಸೆಯ ಆಟಗಾರ್ತಿ ಕೊಕೊ ವಾಂಡೆವೇಗ್‌.

ಎಡಗಾಲಿನ ಶಸ್ತ್ರಚಿಕಿತ್ಸೆಯಿಂದ 11 ತಿಂಗಳ ಕಾಲ ಸ್ಪರ್ಧಾತ್ಮಕ ಟೆನಿಸ್‌ನಿಂದ ದೂರ ಉಳಿದು, ಕಳೆದ ಜುಲೈ ತಿಂಗಳಲ್ಲಷ್ಟೇ ರ್ಯಾಕೆಟ್‌ ಹಿಡಿದ ಬಂದ ಶ್ರೇಯಾಂಕ ರಹಿತ ಆಟಗಾರ್ತಿ ಸ್ಲೋನ್‌ ಸ್ಟೀಫ‌ನ್ಸ್‌ 6-1, 0-6, 7-5 ಅಂತರದಿಂದ ವೀನಸ್‌ ವಿಲಿಯಮ್ಸ್‌ಗೆ ಸೋಲುಣಿಸಿದರು. 15ನೇ ಶ್ರೇಯಾಂಕದ ಮ್ಯಾಡಿಸನ್‌ ಕೇಯ್ಸ 6-1, 6-2 ಅಂತರದಿಂದ 20ನೇ ಶ್ರೇಯಾಂಕದ ಕೊಕೊ ವಾಂಡೆವೇಗ್‌ ಆಟವನ್ನು ಸುಲಭದಲ್ಲಿ ಮುಗಿಸಿದರು.

ಕೇಯ್ಸ 10 ತಿಂಗಳಲ್ಲಿ 2ನೇ ಬಾರಿ ಎಡಗೈ ಮಣಿಗಂಟಿನ ಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿದ್ದರು. ಕಳೆದ ಫ್ರೆಂಚ್‌ ಓಪನ್‌ನಲ್ಲಷ್ಟೇ ಕಣಕ್ಕಿಳಿದಿದ್ದರು. ಅಲ್ಲಿ ಕೇಯ್ಸಗೆ ಮೊದಲ ಸುತ್ತಿನಲ್ಲೇ ಆಘಾತ ಎದುರಾಗಿತ್ತು. ಆದರಿಲ್ಲಿ ಕೇವಲ 66 ನಿಮಿಷದಲ್ಲಿ ಸೆಮಿಫೈನಲ್‌ ಹೋರಾಟವನ್ನು ಮುಗಿಸಿದರು. ಕೇಯ್ಸ ಕೈಯಲ್ಲಿ ಸೋಲಿನೇಟು ತಿಂದ ವಾಂಡೆವೇಗ್‌ ಯುಎಸ್‌ ಓಪನ್‌ನಲ್ಲಿ ಎಂದೂ 2ನೇ ಸುತ್ತಿನಿಂದಾಚೆ ಬಂದವರಲ್ಲ.2002ರ ಬಳಿಕ ಯುಎಸ್‌ ಓಪನ್‌ ಟೂರ್ನಿ ಆಲ್‌ ಅಮೆರಿಕನ್‌ ಫೈನಲ್‌ ಕಾಣುತ್ತಿದೆ. ಅಂದು ಎದುರಾದವರು ವಿಲಿಯಮ್ಸ್‌ ಸೋದರಿಯರು. ಇಲ್ಲಿ ಅಕ್ಕ ವೀನಸ್‌ಗೆ 6-4, 6-3 ಅಂತರದ ಸೋಲುಣಿಸಿದ ಸೆರೆನಾ ಚಾಂಪಿಯನ್‌ ಆಗಿ ಮೂಡಿಬಂದಿದ್ದರು.

ಸ್ಲೋನ್‌ ಸ್ಟೀಫ‌ನ್ಸ್‌ ಪರಾಕ್ರಮ
ವೀನಸ್‌ ವಿಲಿಯಮ್ಸ್‌ 3ನೇ ಯುಎಸ್‌ ಓಪನ್‌ ಪ್ರಶಸ್ತಿಯ ಭಾರೀ ನಿರೀಕ್ಷೆಯಲ್ಲಿದ್ದರು. 2000 ಹಾಗೂ 2001ರಲ್ಲಿ ಸತತ 2 ಪ್ರಶಸ್ತಿಗಳನ್ನೆತ್ತಿದ ಬಳಿಕ ವೀನಸ್‌ಗೆ ನ್ಯೂಯಾರ್ಕ್‌ ಕಿರೀಟ ಮರೀಚಿಕೆಯಾಗುತ್ತಲೇ ಇತ್ತು. ಅನಂತರ 2002ರಲ್ಲಿ ಫೈನಲ್‌ ತನಕ ಬಂದು ಪರಾಭವಗೊಂಡರು. 2007ರ ಬಳಿಕ ಅವರಿಲ್ಲಿ ಸೆಮಿಫೈನಲ್‌ ಕಂಡದ್ದು ಇದೇ ಮೊದಲು. ಆದರೆ ಈ ಗಡಿ ದಾಟಲು ಸ್ಟೀಫ‌ನ್ಸ್‌ ಅವಕಾಶ ನೀಡಲಿಲ್ಲ. ಹೀಗಾಗಿ ಯುಎಸ್‌ ಓಪನ್‌ ಫೈನಲ್‌ ಆಡಿದ ವಿಶ್ವದ ಅತೀ ಹಿರಿಯ ಆಟಗಾರ್ತಿ (37 ವರ್ಷ) ಎಂಬ ದಾಖಲೆಯಿಂದ ವೀನಸ್‌ ವಂಚಿತರಾದರು. ಆದರೆ ವಿಶ್ವ ರ್‍ಯಾಂಕಿಂಗ್‌ನಲ್ಲಿ 2011ರ ಬಳಿಕ ಮರಳಿ ಟಾಪ್‌-5 ಸ್ಥಾನ ಅಲಂಕರಿಸುವಲ್ಲಿ ವೀನಸ್‌ ಯಶಸ್ವಿಯಾಗಿದ್ದಾರೆ.

Advertisement

24ರ ಹರೆಯದ ಸ್ಲೋನ್‌ ಸ್ಟೀಫ‌ನ್ಸ್‌ ಈವರೆಗೆ ತವರಿನ ಪಂದ್ಯಾವಳಿಯಲ್ಲಿ 4ನೇ ಸುತ್ತು ದಾಟಿದವರಲ್ಲ. ಕಳೆದ ವರ್ಷ ಗಾಯದಿಂದ ಯುಎಸ್‌ ಓಪನ್‌ನಿಂದ ದೂರ ಉಳಿದಿದ್ದರು. “ಇದು ನನ್ನ ಹೋಮ್‌ ಸ್ಲಾéಮ್‌. ಹೀಗಾಗಿ ಫೈನಲ್‌ ಪಯಣ ಹೆಚ್ಚಿನ ಖುಷಿ ತಂದಿದೆ. ಕೇಯ್ಸ ನನ್ನ ಗೆಳತಿ. ಆದರೆ ಇಂಥ ಬಿಗ್‌ ಗೇಮ್‌ನಲ್ಲಿ ಗೆಳತಿಯೊಬ್ಬಳನ್ನು ಎದುರಿಸುವುದು ಅಷ್ಟು ಸುಲಭವಲ್ಲ’ ಎಂಬುದು ಸ್ಟೀಫ‌ನ್ಸ್‌ ಪ್ರತಿಕ್ರಿಯೆ.

ಸ್ಲೋನ್‌ ಸ್ಟೀಫ‌ನ್ಸ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ 83ನೇ ಸ್ಥಾನದಲ್ಲಿದ್ದಾರೆ. ಇದರೊಂದಿಗೆ 2009ರ ಬಳಿಕ ಅತ್ಯಂತ ಕೆಳ ಕ್ರಮಾಂಕದ ರ್‍ಯಾಂಕಿಂಗ್‌ ಹೊಂದಿರುವ ಆಟಗಾರ್ತಿ ಯುಎಸ್‌ ಓಪನ್‌ ಪ್ರಶಸ್ತಿ ಸುತ್ತಿಗೆ ಬಂದಂತಾಗಿದೆ. ಅಂದು ಯಾವುದೇ ರ್‍ಯಾಂಕಿಂಗ್‌ ಹೊಂದಿಲ್ಲದ ಕಿಮ್‌ ಕ್ಲಿಸ್ಟರ್ ಚಾಂಪಿಯನ್‌ ಆಗಿದ್ದರು.

ಮೊದಲ ಗ್ರ್ಯಾನ್‌ಸ್ಲಾಮ್‌ ಮುಖಾಮುಖೀ
ಸ್ಲೋನ್‌ ಸ್ಟೀಫ‌ನ್ಸ್‌ ಅವರ ಫೆಡ್‌ ಕಪ್‌ ಜತೆಗಾರ್ತಿಯಾಗಿರುವ ಮ್ಯಾಡಿಸನ್‌ ಕೇಯ್ಸ ತವರಿನ ಗ್ರ್ಯಾನ್‌ಸ್ಲಾಮ್‌ನಲ್ಲಿ ಈವರೆಗೆ 4ನೇ ಸುತ್ತು ದಾಟಿದವರಲ್ಲ. 2015ರ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಸೆಮಿಫೈನಲ್‌ ತನಕ ಸಾಗಿದ್ದೇ ಈಕೆಯ ಅತ್ಯುತ್ತಮ ಗ್ರ್ಯಾನ್‌ಸ್ಲಾಮ್‌ ಸಾಧನೆ. ಕೇಯ್ಸ ಮತ್ತು ಸ್ಟೀಫ‌ನ್ಸ್‌ ಈವರೆಗೆ ಯಾವುದೇ ಗ್ರ್ಯಾನ್‌ಸ್ಲಾಮ್‌ ಕೂಟದಲ್ಲಿ ಎದುರಾದವರಲ್ಲ. ಇವರಿಬ್ಬರು ಕೇವಲ ಒಮ್ಮೆಯಷ್ಟೇ ಮುಖಾಮುಖೀಯಾಗಿದ್ದಾರೆ. ಅದು 2015ರ ಮಿಯಾಮಿ ಕೂಟದ ದ್ವಿತೀಯ ಸುತ್ತಿನ ಪಂದ್ಯ. ಇದರಲ್ಲಿ ಸ್ಟೀಫ‌ನ್ಸ್‌ ಜಯ ಸಾಧಿಸಿದ್ದರು.

“ಸ್ಲೋನ್‌ ಈಗ ಹೊಸ ವ್ಯಕ್ತಿಯಾಗಿ ಗೋಚರಿಸುತ್ತಿದ್ದಾರೆ. ನಾವಿಬ್ಬರು ತವರಿನ ಗ್ರ್ಯಾನ್‌ಸ್ಲಾಮ್‌ ಫೈನಲ್‌ನಲ್ಲಿ ಎದುರಾಗುತ್ತಿರುವುದೇ ಒಂದು ಥ್ರಿಲ್ಲಿಂಗ್‌ ಅನುಭವ’ ಎಂಬುದು ಕೇಯ್ಸ ಪ್ರತಿಕ್ರಿಯೆ.

ಗೆಳತಿಯರಿಬ್ಬರು ತಮ್ಮ ಟೆನಿಸ್‌ ಬಾಳ್ವೆಯಲ್ಲೇ ಅತ್ಯಂತ ದೊಡ್ಡ ಪಂದ್ಯವೊಂದನ್ನು ಆಡಲಿಳಿಯಲಿದ್ದಾರೆ. “ಆರ್ಥರ್‌ ಆ್ಯಶ್‌ ಸ್ಟೆಡಿಯಂ’ನಲ್ಲಿ ನಡೆಯುವ ಈ ಫೈನಲ್‌ ಭಾರತೀಯ ಕಾಲಮಾನ ಪ್ರಕಾರ ಶನಿವಾರ ನಡುರಾತ್ರಿಯ ಬಳಿಕ 1.30ಕ್ಕೆ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next