Advertisement

ಭರ್ಜರಿ ಭೋಜನ, ಎಣ್ಣೆ ಮಜ್ಜನ

11:07 AM Apr 20, 2019 | pallavi |

ಧಾರವಾಡ: 15 ದಿನಗಳು.. ಸಾವಿರಕ್ಕೂ ಅಧಿಕ ಹಳ್ಳಿಗಳು, ಒಂದು ಮಹಾನಗರ, ಅಂದಾಜು 20 ಪಟ್ಟಣಗಳು.. ಒಬ್ಬ ಅಭ್ಯರ್ಥಿಗೆ 70 ಲಕ್ಷ ರೂ. ಮಾತ್ರ.. ಇದರಲ್ಲೇ ಪೋಸ್ಟರ್‌, ಬ್ಯಾನರ್‌, ಬಂಟಿಂಗ್ಸ್‌, ಪ್ರಚಾರ, ಪಕ್ಷದ ಸಮಾವೇಶಗಳು, ತಮ್ಮ ಪಕ್ಷಗಳ ಪರವಾಗಿ ಪ್ರಚಾರ ಇತ್ಯಾದಿ ಇತ್ಯಾದಿ ಇಷ್ಟೇ ಹಣದಲ್ಲಿ ಆಗಬೇಕು.

Advertisement

ಚುನಾವಣಾ ಆಯೋಗ ಲೋಕಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಚುನಾವಣಾ ವೆಚ್ಚಕ್ಕೆ 70 ಲಕ್ಷ ರೂ. ಮಾತ್ರ ಖರ್ಚು ಮಾಡಬೇಕು ಎಂದು ಫರ್ಮಾನು ಹೊರಡಿಸಿದೆ. ಇದಕ್ಕಿಂತ ಹೆಚ್ಚಿಗೆ ಖರ್ಚು ಮಾಡುವಂತಿಲ್ಲ. ಒಂದು ವೇಳೆ ಮಾಡಿದರೆ ಅದಕ್ಕೆ ದಂಡ, ಶಿಕ್ಷೆ ಎರಡೂ ಇದೆ.

ಹಾಗಾದರೆ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು 70 ಲಕ್ಷ ರೂ.ದಲ್ಲಿಯೇ ತಮ್ಮ ಕ್ಷೇತ್ರಗಳಲ್ಲಿ ಚುನಾವಣೆ ಎದುರಿಸುತ್ತಿದ್ದಾರಾ? ಖಂಡಿತ ಇಲ್ಲ. ಅವರು ಚುನಾವಣಾ ಆಯೋಗಕ್ಕೆ ತೋರಿಸುವುದು ರಾಮನ ಲೆಕ್ಕ, ಒಳಗೊಳಗೆ ಮಾಡುವುದು ಕೃಷ್ಣ ಲೆಕ್ಕ ಎಂಬುದು ಎಲ್ಲಾ ಕ್ಷೇತ್ರಗಳಲ್ಲಿಯೂ ಬಹಿರಂಗವಾಗಿಯೇ ಗೋಚರಿಸುತ್ತಿದೆ.

ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆ ಕಾವು ಏರುತ್ತಿದೆ. ಏ. 23ಕ್ಕೆ ಚುನಾವಣೆ ನಡೆಯುತ್ತಿದ್ದು, ಎಲ್ಲಾ ಪಕ್ಷಗಳ ಅಭ್ಯರ್ಥಿಗಳಿಂದಲೂ ಪ್ರಚಾರ ಭರಾಟೆ ಭರದಿಂದ ಸಾಗಿದ್ದು, ಚುನಾವಣೆ ಪ್ರಚಾರದಲ್ಲಿ ತೊಡಗಿದವರಿಗೆ ಭೂರಿ ಭೋಜನ ಮತ್ತು ಎಣ್ಣೆ (ಸಾರಾಯಿ)ಮಜ್ಜನ ಸದ್ದಿಲ್ಲದೇ ಸಾಗುತ್ತಿದೆ.

ಭರ್ಜರಿ ಭೋಜನ: ಆಯೋಗ 70 ಲಕ್ಷ ರೂ. ಮಿತಿಯನ್ನು ಅಭ್ಯರ್ಥಿಗಳಿಗೆ ಹೇರಿದ್ದರಿಂದ ಯಾವ ಪಕ್ಷದ ಅಭ್ಯರ್ಥಿಗಳು ಚುನಾವಣಾ ಆಯೋಗದ ಕೆಂಗಣ್ಣಿಗೆ ನೇರವಾಗಿ ಗುರಿಯಾಗುವ ಸಾಹಸಕ್ಕೆ ಕೈ ಹಾಕುತ್ತಿಲ್ಲ. ಬದಲಿಗೆ ಚಹಾ ಅಂಗಡಿಗಳು, ಹೋಟೆಲ್ಗಳು, ದಾಬಾಗಳು, ರೆಸ್ಟೋರೇಂಟ್‌ಗಳು, ರೆಸಾರ್ಟ್‌ಗಳಲ್ಲಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಊಟ, ವಸತಿ ಮತ್ತು ಚಹಾ ತಿಂಡಿ ವ್ಯವಸ್ಥೆ ಮಾಡಿಯಾಗಿದೆ. ಅಲ್ಲಿಗೆ ಹೋಗಿ ಭೂರಿ ಬೋಜನ ಮತ್ತು ಎಣ್ಣೆ ಸೇವೆಯನ್ನು ಕಾರ್ಯಕರ್ತರು ಪಡೆಯುತ್ತಿದ್ದಾರೆ. ಚುನಾವಣಾ ಅಧಿಕಾರಿಗಳಿಗೆ ಇದನ್ನು ತಡೆಯುವುದು ಕೂಡ ಕಷ್ಟವಾಗುತ್ತಿದೆ.

Advertisement

ಹೈವೆ ದಾಬಾಗಳಲ್ಲಿ ಎಣ್ಣೆ ಸೇವೆ: ನಗರವಾಸಿ ಮತದಾರರನ್ನು ಸೆಳೆಯಲು ಪಕ್ಷಗಳ ಮುಖಂಡರು ಆಯ್ದ ಹೋಟೆಲ್ಗಳನ್ನು ಸದ್ದಿಲ್ಲದಂತೆ ಬುಕ್‌ ಮಾಡಿದ್ದರೆ, ಗ್ರಾಮೀಣ ಪ್ರದೇಶದ ಮತದಾರರನ್ನು ಸೆಳೆಯಲು ಮತ್ತು ರಾತ್ರಿ ಎಣ್ಣೆ ಸೇವೆಗಾಗಿ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಪಕ್ಕದ ದಾಬಾಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ಧಾರವಾಡ, ಬೆಳಗಾವಿ, ಚಿಕ್ಕೋಡಿ, ಹಾವೇರಿ, ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ರಾಷ್ಟ್ರೀಯ ಹೆದ್ದಾರಿ 4ರಲ್ಲಿನ ದಾಬಾ ಮತ್ತು ರೆಸಾರ್ಟ್‌ ಗಳನ್ನು ಬುಕ್‌ ಮಾಡಿದ್ದಾರೆ. ಸಂಜೆವರೆಗೂ ಪ್ರಚಾರ ಮಾಡುವ ಆಯಾ ಪಕ್ಷದ ಕಾರ್ಯಕರ್ತರು ರಾತ್ರಿ ಊಟ ಮತ್ತು ಎಣ್ಣೆ ಸೇವೆಗೆ ಇಲ್ಲಿಗೆ ದಾಂಗುಡಿ ಹಾಕುತ್ತಿದ್ದಾರೆ. ಧಾರವಾಡ ಗೋವಾ ಮಧ್ಯದ ರಾಜ್ಯ ಹೆದ್ದಾರಿ, ಹುಬ್ಬಳ್ಳಿ ವಿಜಯಪುರ ಹೆದ್ದಾರಿ, ಬೆಳಗಾವಿ ಬಾಗಲಕೋಟೆ, ಹಾವೇರಿ ಗದಗ, ಗದಗ ಕೊಪ್ಪಳ ಹೀಗೆ ಹೆದ್ದಾರಿ ಪಕ್ಕದ ದಾಬಾಗಳಲ್ಲಿ ರಾಜಕಾರಣಿಗಳ ಹಿಂಬಾಲಕರ ಹೆಸರಿನಲ್ಲಿ ಅಕೌಂಟ್‌ಗಳಿದ್ದು ಕಾರ್ಯಕರ್ತರು ಇಲ್ಲಿಯೇ ಚುನಾವಣೆ ರಂಗೇರಿಸುತ್ತಿದ್ದಾರೆ. ಇನ್ನು ಕೆಲ ದಾಬಾಗಳ ಮಾಲೀಕರೆ ಒಂದೊಂದು ಪಕ್ಷದ ಕಾರ್ಯಕರ್ತರಿದ್ದು, ಬಹಿರಂಗವಾಗಿಯೇ ತಮ್ಮ ಪಕ್ಷಗಳ ಕಾರ್ಯಕರ್ತರಿಗೆ ಸಕಲ ವ್ಯವಸ್ಥೆ ಮಾಡುತ್ತಿದ್ದಾರೆ.

ತೋರಿಸೋದು ರಾಮನ ಲೆಕ್ಕ, ಮಾಡೋದು ಕೃಷ್ಣನ ಲೆಕ್ಕ

ಚುನಾವಣಾ ಆಯೋಗ ಚಾಪೆ ಕೆಳಗೆ ನುಗ್ಗಿದರೆ ರಾಜಕಾರಣಿಗಳು ರಂಗೋಲಿ ಕೆಳಗೆ ನುಗ್ಗುತ್ತಿದ್ದಾರೆ. ಹಳ್ಳಿಗಳಲ್ಲಿನ ಮದುವೆಗಳು, ಸೀಮಂತ ಕಾರ್ಯಕ್ರಮ, ಜಾತ್ರೆಗಳು, ರಥೋತ್ಸವ ಸಂದರ್ಭದಲ್ಲಿ ಮಾಡಿದ ಪ್ರಸಾದ ವ್ಯವಸ್ಥೆಗೆ ಹಣ ನೀಡಿದ್ದಾರೆ. ಆಯಾ ಪ್ರದೇಶದಲ್ಲಿ ಪ್ರಚಾರ ಮಾಡುವ ತಮ್ಮ ಪಕ್ಷದ ಕಾರ್ಯಕರ್ತರಿಗೆ ಅಲ್ಲಿಯೇ ಊಟದ ವ್ಯವಸ್ಥೆ ಕಲ್ಪಿಸುವಂತೆ ನೋಡಿಕೊಂಡಿದ್ದಾರೆ. ಅತೀ ವೆಚ್ಚದ ಚುನಾವಣೆ ತಡೆಯಲು ಚುನಾವಣಾ ಆಯೋಗ ಪ್ರಯತ್ನ ಮಾಡುವುದು ಒಂದೆಡೆಯಾದರೆ, ಗೆಲ್ಲುವ ಭರದಲ್ಲಿ ಹೆಚ್ಚು ಕಾರ್ಯಕರ್ತರನ್ನು ದುಡಿಸುವ ರಾಜಕಾರಣಿಗಳು ಕೃಷ್ಣನ ಲೆಕ್ಕ ಅನಿವಾರ್ಯ ಎನ್ನುತ್ತಿದ್ದಾರೆ.

ಹಣ ಕೊಟ್ಟು ಊಟ ಮಾಡಿ ಹೋದವರನ್ನ ನಾವು ಲೆಕ್ಕ ಇಡಲಾಗುವುದಿಲ್ಲ. ನಮ್ಮ ದಾಬಾಕ್ಕೆ ಬರುವವರಿಗೆ ಊಟ ನೀಡುವುದು ನಮ್ಮ ಕರ್ತವ್ಯ.ಯಾವುದೇ ಪಕ್ಷ, ಕುಲ, ಗೋತ್ರ ಎಲ್ಲ ನಾವು ನೋಡುವುದಿಲ್ಲ.
•ಸಾಯಿ ದಾಬಾ,ಬೆಳಗಾವಿ ರಸ್ತೆ,ಧಾರವಾಡ.

ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಒಂದು ಪಕ್ಷದ ಕಾರ್ಯಕರ್ತರಾಗಿ ನಾವು ಚುನಾವಣೆ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಲೇಬೇಕಾಗುತ್ತದೆ. ಹಾಗಾದರೆ ಚುನಾವಣೆ ಪ್ರಚಾರ ಮಾಡಿದ ಜನರು ಊಟವನ್ನೂ ಮಾಡಬಾರದೇ? ಚುನಾವಣಾ ಆಯೋಗ ನನ್ನ ಪ್ರಕಾರ ಇದಕ್ಕೆಲ್ಲ ಇನ್ನಷ್ಟು ರಿಯಾಯಿತಿ ನೀಡಬೇಕು.
•ಸುರೇಶಗೌಡ ಪಾಟೀಲ, ರಾಜಕೀಯ ಪಕ್ಷವೊಂದರ ಕಾರ್ಯಕರ್ತ

Advertisement

Udayavani is now on Telegram. Click here to join our channel and stay updated with the latest news.

Next