Advertisement
ಅಬ್ಟಾ! ಕಣ್ಣೆವೆಗಳು ದಣಿಯುವಷ್ಟು ನಿದ್ದೆ ಮಾಡಬೇಕು. ಬಾಲ್ಯದಲ್ಲಿ ಮಲಗಿ ನಿದ್ರಿಸಿ ಕನಸಿನ ಲೋಕದಲ್ಲಿ ಪಯಣಿಸಿ ಬಂದ ಹಾಗೆ. ಚಂದಿರನೂರು, ಅಲ್ಲಿರುವ ಸಹಸ್ರಾರು ತಾರೆಯರು, ಮಿರಮಿರನೆ ಮಿಂಚುವ ಅಪ್ಸರೆಯರ ನಡುವೆ ನಾವು ಎನಿಸುವಷ್ಟರ ಮಟ್ಟಿಗಿನ ನಿದ್ದೆಯೊಂದು ಬಂದು ಆವರಿಸಿ ಬಿಡಬೇಕು. ಯಾವ ಗದ್ದಲ, ಗೊಂದಲ, ಆತಂಕಗಳ ಹಂಗಿರದೇ ನಿರ್ಭಿಡೆಯಿಂದ ನಿದ್ರಿಸುವುದು ಸಾಧ್ಯವಾಗಬೇಕು. ಬೆಳಗ್ಗೆ ಎದ್ದು ದಡಬಡಿಸಿ ಮನೆಗೆಲಸ ಮುಗಿಸಿಕೊಂಡು, ಮಕ್ಕಳ ಊಟದ ಬುತ್ತಿ ಕಟ್ಟಿ ವ್ಯಾನ್ ಬರುವಷ್ಟರಲ್ಲಿ ಅವರನ್ನು ರೆಡಿ ಮಾಡಿಸಿ ಅವರಿಗಿಂತಲೂ ಮೊದಲು ನಾನು ರೆಡಿಯಾಗಿ… ಉಫ್! ಬದುಕು ಬರೀ ನಡೆಯುತ್ತಿಲ್ಲ, ಓಡುತ್ತಿದೆ ಎಂಬ ಧಾವಂತದ ನಡುವೆಯೂ ಕನಸು ಬೀಳಲೂ ಬಿಡುವು ಕೊಡದಂತೆ ನಿದ್ರಿಸಬೇಕು! ಆಹಾ, ಹಾಗೆ ಬರುವ ನಿದ್ದೆಯ ಕಲ್ಪನೆಯೂ ಎಷ್ಟು ಸೊಗಸು!
Related Articles
Advertisement
ಮಗು ಒಡಲಿಂದ ಮಡಿಲಿಗೆ ಬಂದ ಮೇಲೆ ಬದುಕು ಇನ್ನೂ ಬದಲಾಗುತ್ತದೆ. ಇನ್ನು ಮೇಲಿಂದ ನಾವೇನೇ ಪಣ ತೊಟ್ಟರೂ ರಾತ್ರಿ ಮಲಗಿದವರು ಬೆಳಗ್ಗೆಯೇ ಏಳುವುದು ಎಂಬಂತಿಲ್ಲ. ಮನೆಗೆಲಸ ಮುಗಿಸಿ ಇನ್ನೇನು ಲೈಟ್ ಆಫ್ ಮಾಡಿದೆವು ಎಂಬಷ್ಟರಲ್ಲಿ ಜೋಲಿಯೊಳಗಿನ ಮಗು ಕುಸುಕುಸು ಎನ್ನಲಾರಂಭಿಸುತ್ತದೆ. ಅದಕ್ಕೆ ಪೂರ್ತಿ ಎಚ್ಚರ! ಅಕಸ್ಮಾತ್ ಮಗು ನಿದ್ದೆ ಮಾಡಿದರೂ ನಾವು ನಮ್ಮ ಪಾಡಿಗೆ ಗೊರಕೆ ಹೊಡೆಯಲಾಗುವುದಿಲ್ಲ. ಕಡೆಯಪಕ್ಷ ನಾಲ್ಕು ಬಾರಿಯಾದರೂ ಎದ್ದೇಳುವುದು ಅನಿವಾರ್ಯ. ಅಲಾರಾಂ ಹಾಡಲಾರಂಭಿಸಿದರೆ, ನಿದ್ದೆಯ ಮೂಡ್‌ನಲ್ಲಿ ಅದರ ತಲೆಯ ಮೇಲೊಂದು ಮೊಟಕಿ ಹಾಗೆಯೇ ಮುಸುಕೆಳೆದೇವು, ಆದರೆ ಕಂದಮ್ಮನನ್ನು ಕಾಳಜಿ ಮಾಡಲೇಬೇಕಲ್ಲ! ಅದರ ಸಲುವಾಗಿ ಬದಲಾಗಲೇಬೇಕು. ಮೊದಲ ಮಗುವನ್ನಾದರೂ ಹೇಗಾದರೂ ಸಂಭಾಳಿಸಿಯೇವು, ಆದರೆ ಎರಡನೆಯ ಮಗುವಾಗುವಾಗ ಎಲ್ಲವನ್ನೂ, ಎಲ್ಲರನ್ನೂ ನಿಭಾಯಿಸುವ ಹೊಣೆಯೂ ನಮ್ಮದೇ ಆಗಿರುತ್ತದೆ. ಆ ಅವಧಿಯಂತೂ ಬಹಳ ಕಠಿಣ. ಮನೆಯಲ್ಲಿ ಹಿರಿಯ ಜೀವವೊಂದು ಇದ್ದರೆ ಪರವಾಗಿಲ್ಲ, ಸ್ವಲ್ಪವಾದರೂ ನೆಮ್ಮದಿ ದೊರಕೀತು, ಇಲ್ಲದೇ ಇದ್ದರೆ ಅವಳ ಕಥೆಯೇ ಬದಲಾಗಿರುತ್ತದೆ.
ದುಡಿಯುವ ಮಹಿಳೆಯ ಉದಾಹರಣೆ ತೆಗೆದುಕೊಳ್ಳಿ. ಹಗಲಿಡೀ ಹೊರಗಿನ ದುಡಿಮೆ. ಬಿಡುವಿನ ವೇಳೆಯೆಂಬುದೇ ಕಡಿಮೆ. ಬೆಳಗ್ಗೆ ಎದ್ದಲ್ಲಿಂದ ರಾತ್ರಿ ಹನ್ನೊಂದರವರೆಗೂ ಅವಳ ಕಾಲಿನ ಚಕ್ರ ಸುತ್ತುತ್ತಲೇ ಇರಬೇಕು. ಮನೆಯಲ್ಲಿ ಗಂಡಸರು ಹಗಲು ವಿಶ್ರಾಂತಿ ಪಡೆದಂತೆ ಹೆಣ್ಣಿಗೆ ವಿಶ್ರಾಂತಿಯ ಅವಕಾಶವಿರುವುದಿಲ್ಲ. ಆಫೀಸಿಂದ ಬಂದ ತಕ್ಷಣ ಸುಸ್ತಾಗಿದೆಯೆಂದು ದಿನಂಪ್ರತಿ ಹೆಣ್ಣು ಮಲಗಿದರೆ ಅವಳ ಕುರಿತ ಅಭಿಪ್ರಾಯವೇ ಬದಲಾಗುತ್ತದೆ. ಎಷ್ಟೇ ದಣಿದಿರಲಿ, ಶರೀರ ಮೊಂಡು ಮಾಡುತ್ತಿರಲಿ, ಅವಳದೇ ಆದ ಜವಾಬ್ದಾರಿಗಳಿಗೆ ಅವಳು ತಲೆಕೊಡಲೇಬೇಕು. ಅವಳು ಯಂತ್ರವಾಗಿ ಬಿಡುತ್ತಾಳೆ.
ಮಕ್ಕಳ ವಿದ್ಯಾಭ್ಯಾಸದ ಹಂತದಲ್ಲೂ ಅವರನ್ನು ಬೆಳಗ್ಗೆ ಎಬ್ಬಿಸಬೇಕೆಂದರೆ, ಅಮ್ಮನೂ ಎದ್ದೇಳಬೇಕು. ಮಕ್ಕಳು ಓದುತ್ತಿದ್ದಾರೆಂಬುದನ್ನು ಖಾತ್ರಿ ಪಡಿಸಿಕೊಳ್ಳುವುದು ಅವಳದೇ ಕರ್ತವ್ಯ. ಏನೇ ವ್ಯತ್ಯಾಸವಾದರೂ ಮೊದಲು ಹಂಗಿಸಲ್ಪಡುವವಳೂ ಅವಳೇ. ಬರಬರುತ್ತಾ ನಿದ್ದೆಯೂ ಅವಳೊಂದಿಗೆ ಮುನಿಸಿಕೊಂಡು ದೂರವಾಗಿರುತ್ತದೆ. ಅವಳ ಯಾವ ತ್ಯಾಗಗಳಿಗೂ ಬೆಲೆಯಿಲ್ಲವೆಂಬಂತೆ ಬದುಕು ಅವಳನ್ನು ಕಿಚಾಯಿಸಲಾರಂಭಿಸಿದರೆ, ದಿನದಿನವೂ ಹೈರಾಣಾಗುವ ಸರದಿ ಅವಳದೇ ಆಗಿರುತ್ತದೆ. ತನ್ನ ಮೂಲಭೂತ ಅಗತ್ಯಗಳಲ್ಲೊಂದಾದ ನಿದ್ದೆಯ ವಿಚಾರದಲ್ಲೇ ಹೊಂದಾಣಿಕೆ ಮಾಡಿಕೊಂಡು ಬದುಕು ಸವೆಸಿದರೂ “ಕುಟುಂಬಕ್ಕಾಗಿ, ಮನೆಗಾಗಿ ನೀನೇನು ಮಾಡಿದೆ?’ ಎಂಬ ಪ್ರಶ್ನೆ ಅವಳನ್ನು ಸದಾ ಬಾಧಿಸುತ್ತದೆ. ಹೆಂಡತಿ ಸದಾ ತಮಾಷೆಯ ವಸ್ತುವೆಂಬಂತೆ, ಬದುಕಿನ ಅತಿದೊಡ್ಡ ಸಮಸ್ಯೆಯೆಂಬಂತೆ ಪ್ರತಿಪಾದಿಸಿ ಹಾಸ್ಯ ಸಂದೇಶಗಳನ್ನು ನಿರಂತರವಾಗಿ ರವಾನೆ ಮಾಡುವವರಿಗೆ ತಾವು ಮದುವೆಯಾಗಿರುವ ಕಾರಣಕ್ಕೇ ಅವಳ ಬದುಕಲ್ಲಾದ ಬದಲಾವಣೆಗಳು ಕೊಂಚವೂ ಕಾಣಲಾರದೇ?
– ಆರತಿ ಪಟ್ರಮೆ