ಹೊಸದಿಲ್ಲಿ: ಸ್ಲೀಪರ್ ಟ್ರೈನ್‌ನ ಮೇಲಿನ ಬರ್ತ್ ಗಳಿಗೆ ಹತ್ತಿ ಮಲಗಲು ಆಗುವುದಿಲ್ಲವೇ? ಹಾಗಾದರೆ ಕೆಳ ಬರ್ತ್‌ಗೆ ಹೆಚ್ಚಿನ ಹಣ ಕೊಡಲು ಸಿದ್ಧರಾಗಿ!
ಹೌದು. ಈ ಸಂಬಂಧ ರೈಲ್ವೇ ದರ ಪರಿಶೀಲನ ಸಮಿತಿ ರೈಲ್ವೇ ಮಂಡಳಿಗೆ ಕೆಲವೊಂದು ಶಿಫಾರಸುಗಳನ್ನು ಮಾಡಿದ್ದು, ಇದು ಜಾರಿಯಾದಲ್ಲಿ ಜೇಬಿಗೆ ಕತ್ತರಿ ನಿಶ್ಚಿತ.
ಈಗಾಗಲೇ ಪ್ರೀಮಿಯಂ ರೈಲುಗಳಲ್ಲಿ ಬೇಡಿಕೆ ಹೆಚ್ಚಾ ದಂತೆ ಟಿಕೆಟ್ ದರವೂ ಹೆಚ್ಚಳ ಮಾಡುವ ಸೌಲಭ್ಯ ಜಾರಿ ಮಾಡಲಾಗಿದೆ. ಈಗ ಇನ್ನೂ ಮುಂದೆ ಹೋಗಿ ಮಧ್ಯ, ಮೇಲಿನ ಬರ್ತ್‌ಗಳಿಗೆ ಹೋಗಲಾರದ ಕೆಳಗಿನ ಬರ್ತ್ ಗಳನ್ನೇ ಆಯ್ಕೆ ಮಾಡಿಕೊಳ್ಳುವವರಿಂದ ಹೆಚ್ಚಿನ ದರ ವಸೂಲಿ ಮಾಡಿ ಎಂದು ಈ ಸಮಿತಿ ಶಿಫಾರಸು ಮಾಡಿದೆ.
ಈಗಾಗಲೇ ಈ ನಿಯಮ ವಿಮಾನ ಮತ್ತು ಹೊಟೇಲ್‌ಗಳಲ್ಲಿ ಜಾರಿಯಿದೆ. ವಿಮಾನದಲ್ಲಿ ನೀವು ಮುಂದಿನ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದಾದರೆ ಅನಿವಾರ್ಯವಾಗಿ ಹೆಚ್ಚಿನ ದರ ನೀಡಲೇಬೇಕು. ಇದೇ ರೀತಿಯಲ್ಲೇ ಕೆಳಗಿನ ಬರ್ತ್ ಆಯ್ಕೆ ಮಾಡಿಕೊಳ್ಳುವವರಿಂದ ಹೆಚ್ಚಿನ ಹಣ ಪಡೆಯಬಹುದು ಎಂದು ಸಮಿತಿ ಹೇಳಿದೆ.
ರೈಲಿನ ಸ್ಲಿàಪರ್ ಬೋಗಿಗಳಲ್ಲಿ ಕೆಳಗಿನ ಸೀಟುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾದಂತೆ ಟಿಕೆಟ್ ದರದ ಮೇಲೆ ಶೇ.10, ಶೇ.20…. ಹೀಗೆ ಶೇ.50ರ ವರೆಗೆ ಹೆಚ್ಚಿಸಿ ಎಂದು ಸಲಹೆ ನೀಡಿದೆ. ಇದರ ಜತೆಗೆ, ಹಬ್ಬದ ವೇಳೆಯಲ್ಲಿ ಹೆಚ್ಚು ದರ ವಸೂಲಿ ಮಾಡಬಹುದು ಎಂದು ಈ ಸಮಿತಿ ಶಿಫಾರಸು ಮಾಡಿದೆ.
ಈ ಮಧ್ಯೆ, ಜನ ಹೆಚ್ಚಾಗಿ ಸಂಚರಿಸುವ ವೇಳೆಯ ರೈಲುಗಳಲ್ಲಿ ಹೆಚ್ಚಿನ ದರ ಹಾಗೂ ಬೇಡಿಕೆ ಇಲ್ಲದ ಸಮಯದ ರೈಲುಗಳಲ್ಲಿ ಟಿಕೆಟ್ ದರದಲ್ಲಿ ವಿನಾಯಿತಿ ನೀಡಬಹುದು ಎಂದೂ ಈ ಸಮಿತಿ ಸಲಹೆ ನೀಡಿದೆ. ಅಂದರೆ ಮಧ್ಯರಾತ್ರಿ 12ರಿಂದ ಬೆಳಗಿನ ಜಾವ 4 ಗಂಟೆವರೆಗೆ ಹಾಗೂ ಮಧ್ಯಾಹ್ನ 1ರಿಂದ ಸಂಜೆ 5 ಗಂಟೆವರೆಗೆ ಟಿಕೆಟ್ ದರದಲ್ಲಿ ರಿಯಾಯಿತಿ ತೋರ ಬಹುದು ಎಂದಿದೆ.