ಕೊಲಂಬೋ: ಇಂಗ್ಲೆಂಡ್ ಪ್ರವಾಸದ ವೇಳೆ ಬಯೋ ಬಬಲ್ ಉಲ್ಲಂಘನೆ ಮಾಡಿದ ಆರೋಪದಡಿ ಒಂದು ವರ್ಷ ನಿಷೇಧ ಶಿಕ್ಷೆಗೆ ಒಳಗಾಗಿದ್ದ ಮೂವರು ಆಟಗಾರರ ನಿಷೇಧವನ್ನು ಶ್ರೀಲಂಕಾ ಕ್ರಿಕೆಟ್ ತೆರವು ಮಾಡಿದೆ.
ತಕ್ಷಣವೇ ಜಾರಿಗೆ ಬರುವಂತೆ ದನುಷ್ಕಾ ಗುಣತಿಲಕ, ಕುಸಾಲ್ ಮೆಂಡಿಸ್ ಮತ್ತು ನಿರೋಶನ್ ಡಿಕ್ವೆಲ್ಲಾ ಮೇಲೆ ವಿಧಿಸಲಾಗಿದ್ದ ಒಂದು ವರ್ಷದ ಅಮಾನತು ರದ್ದುಗೊಳಿಸಿದೆ.
“ಎಲ್‌ಪಿಎಲ್ 2021 ರ ತೀರ್ಮಾನಕ್ಕೆ ಅನುಸಾರವಾಗಿ ಮೂರು ಆಟಗಾರರು ಶ್ರೀಲಂಕಾ ಕ್ರಿಕೆಟ್‌ಗೆ ತಮ್ಮ ಮೇಲೆ ವಿಧಿಸಲಾದ ನಿಷೇಧವನ್ನು ತೆಗೆದುಹಾಕಲು ಮಾಡಿದ ಮನವಿಯ ನಂತರ ಇತ್ತೀಚಿನ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ” ಎಂದು ಶ್ರೀಲಂಕಾ ಕ್ರಿಕೆಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ನಟನಾಗಿ ನನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬೇಕು.. ಸಿನಿ ದುನಿಯಾದಲ್ಲಿ ಸಲಗ ಮಾತು…
ಆಟಗಾರರ ಮನವಿಯನ್ನು ಅನುಸರಿಸಿ, ಅಮಾನತು ಅವಧಿಯಲ್ಲಿ ಅವರಿಗೆ ಕೌನ್ಸೆಲಿಂಗ್ ನೀಡಲು ಮಂಡಳಿಯು ನೇಮಿಸಿದ ವೈದ್ಯರಿಂದ ಶ್ರೀಲಂಕಾ ಕ್ರಿಕೆಟ್ ಅವರ ವರದಿಗಳನ್ನು ಪಡೆದುಕೊಂಡಿತ್ತು, ನಂತರ ಆಟಗಾರರ ಮನವಿಯನ್ನು ಪರಿಗಣಿಸಿ ನಿಷೇಧದ ಉಳಿದ ಭಾಗವನ್ನು ಅಮಾನತುಗೊಳಿಸಿದೆ.
2021ರ ಇಂಗ್ಲೆಂಡ್ ಸರಣಿಯ ವೇಳೆ ದನುಷ್ಕಾ ಗುಣತಿಲಕ, ಕುಸಾಲ್ ಮೆಂಡಿಸ್ ಮತ್ತು ನಿರೋಶನ್ ಡಿಕ್ವೆಲ್ಲಾ ಅವರು ಬಯೋ ಬಬಲ್ ಉಲ್ಲಂಘಿಸಿ ಡುರ್ಹಮ್ ನಲ್ಲಿ ತಿರುಗಾಟ ನಡೆಸಿರುವುದು ಪತ್ತೆಯಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮೂವರು ಆಟಗಾರರಿಗೆ ಒಂದು ವರ್ಷದ ನಿಷೇಧ ಹೇರಿತ್ತು.