ಪಾಟ್ನಾ: ‘ನನ್ನ ತಂದೆ ಮತ್ತು ತಾಯಿಯ ತೇಜೋವಧೆ ಮಾಡುವ ರೀತಿಯ ಪೋಸ್ಟರ್ ಗಳನ್ನು ಹಾಕಿರುವ ಕುರಿತಾಗಿ ನನ್ನ ಅತ್ತೆಯ ಬಳಿ ವಿಚಾರಿಸಲು ಹೋದಾಗ ಅವರು ಸಿಟ್ಟುಗೊಂಡು ನನಗೆ ಹೊಡೆದರು ಮತ್ತು ನನ್ನ ತಲೆಕೂದಲನ್ನು ಎಳೆದು ನನಗೆ ದೈಹಿಕ ಹಿಂಸೆಯನ್ನು ನೀಡಿದ್ದಾರೆ. ಮತ್ತು ಅಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸರನ್ನು ಕರೆದು ನನ್ನನ್ನು ಹೊರಹಾಕುವಂತೆ ಆದೇಶ ನೀಡಿದ್ದಾರೆ. ಅವರ ಆದೇಶವನ್ನು ಪಾಲಿಸಿದ ಮಹಿಳಾ ಪೊಲೀಸ್ ಸಿಬ್ಬಂದಿ ನನ್ನನ್ನು ಚಪ್ಪಲಿ ರಹಿತವಾಗಿ ಬಂಗಲೆಯ ಗೇಟಿನಿಂದ ಹೊರದಬ್ಬಿದರು’ ಎಂದು ಐಶ್ವರ್ಯಾ ರೈ ಅವರು ಆರೋಪಿಸಿದ್ದಾರೆ.
ಆಶ್ಚರ್ಯವಾಗುತ್ತಿದೆಯೇ? ಇದು ನಟಿ ಐಶ್ವರ್ಯಾ ರೈ ಮಾಡಿದ ಆರೋಪ ಅಂದುಕೊಂಡಿರಾ? ಹಾಗಾದ್ರೆ ಸ್ವಲ್ಪ ತಾಳಿ, ಇದು ನಟಿ ಐಶ್ವರ್ಯಾ ರೈ ಪ್ರಕರಣವಲ್ಲ ಬದಲಾಗಿ ಬಿಹಾರದ ಮಾಜೀ ಮುಖ್ಯಮಂತ್ರಿ, ಆರ್.ಜೆ.ಡಿ. ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಅವರ ಪತ್ನಿ ಐಶ್ವರ್ಯಾ ರೈ ಅವರು ತಮ್ಮ ಅತ್ತೆ ರಾಬ್ಡಿ ದೇವಿ ವಿರುದ್ಧದ ಎಫ್.ಐ.ಆರ್.ನಲ್ಲಿ ಮಾಡಿರುವ ಆರೋಪ! ರವಿವಾರ ಸಾಯಂಕಾಲ 5.30ರ ಸುಮಾರಿಗೆ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ಲಾಲು ಪ್ರಸಾದ್ ಯಾದವ್ ಅವರ ಮಗನಾಗಿರುವ ತೇಜ್ ಪ್ರತಾಪ್ ಯಾದವ್ ಅವರ ಪತ್ನಿ ಐಶ್ವರ್ಯಾ ರೈ ಅವರು ಇದೀಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ತಮ್ಮ ವಿಚ್ಛೇದನ ವಿಚಾರದಲ್ಲಿ ತನ್ನ ತಂದೆ, ತಾಯಿಯರ ಹೆಸರನ್ನು ಎಳೆದು ತರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಐಶ್ವರ್ಯಾ ಕೋಪಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಮತ್ತು ಇದೇ ವಿಚಾರದ ಕುರಿತಾಗಿ ತನ್ನ ಅತ್ತೆಯ ಬಳಿ ಮಾತನಾಡಲು ಹೋಗಿದ್ದ ಸಂದರ್ಭದಲ್ಲಿ ಅತ್ತೆ ರಾಬ್ಡಿ ದೇವಿ ಅವರು ತನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂಬುದು ಸೊಸೆ ಐಶ್ವರ್ಯಾ ಆರೋಪವಾಗಿದೆ.
ಈ ಘಟನೆ ನಡೆದ ತಕ್ಷಣ ಐಶ್ವರ್ಯಾ ರೈ ಅವರು ತಮ್ಮ ತಂದೆ ಮತ್ತು ಆರ್.ಜೆ.ಡಿ. ಶಾಸಕರಾಗಿರುವ ಚಂದ್ರಿಕಾ ರೈ ಅವರಿಗೆ ಫೋನ್ ಮಾಡಿದ್ದಾರೆ. ತಕ್ಷಣವೇ ಅವರು ತನ್ನ ಗೆಳೆಯರು ಮತ್ತು ಮಾಧ್ಯಮದವರ ಜೊತೆಯಲ್ಲಿ ಘಟನಾ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸಚಿವಾಲಯ ಪೊಲೀಸ್ ಠಾಣೆಯಲ್ಲಿ ರಾಬ್ಡಿ ದೇವಿ ವಿರುದ್ಧ ಎಫ್.ಐ.ಆರ್. ದಾಖಲಾಗಿದೆ. ಮತ್ತು ಹಲ್ಲೆಯಿಂದ ಗಾಯಗೊಂಡಿದ್ದ ಐಶ್ವರ್ಯಾ ರೈ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಗಾಯ ಸಂಬಂಧಿತ ವರದಿಯನ್ನು ಪಡೆದುಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಐಶ್ವರ್ಯಾ ರೈ ಅವರು ತೇಜ್ ಪ್ರತಾಪ್ ಯಾದವ್ ಅವರನ್ನು 2018ರ ಮೇ 18ರಂದು ವಿವಾಹವಾಗಿದ್ದರು. ಮತ್ತು ಸಂಸಾರದಲ್ಲಿ ಹೊಂದಾಣಿಕೆ ಕೊರತೆಯಿಂದ ಐಶ್ವರ್ಯಾ ಅವರು ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಪಾಟ್ನಾ ನ್ಯಾಯಾಲಯದಲ್ಲಿ ವಿಚ್ಚೇದನಾ ಅರ್ಜಿ ಸಲ್ಲಿಸಿದ್ದರು. ವಿಚ್ಛೇದನಾ ಅರ್ಜಿಯ ವಿಚಾರಣೆ ಡಿಸೆಂಬರ್ 17ರಂದು ನಡೆಯಲಿದೆ. ಇದಕ್ಕೆ ಎರಡು ದಿನ ಮುಂಚಿತವಾಗಿ ಈ ಹೈಡ್ರಾಮಾ ನಡೆದಿರುವುದು ವಿಶೇಷವಾಗಿದೆ.
‘ಅವರು ಇಂದು ತಮ್ಮ ಎಲ್ಲಾ ಮಿತಿಗಳನ್ನು ದಾಟಿದ್ದಾರೆ, ಮಾತ್ರವಲ್ಲದೇ ಅವರು ನನ್ನ ಮಗಳನ್ನು ತಿಂಗಳುಗಟ್ಟಲೇ ಆಹಾರ ನೀಡದೆ ಉಪವಾಸ ಕೆಡವಿದ್ದರು. ಆ ಸಂದರ್ಭದಲ್ಲಿ ನನ್ನ ಮಗಳಿಗೆ ಮನೆಯಿಂದಲೇ ಊಟವನ್ನು ಕಳುಹಿಸಿಕೊಡಲಾಗುತ್ತಿತ್ತು’ ಎಂದು ಮಾಜೀ ಸಾರಿಗೆ ಸಚಿವರೂ ಆಗಿರುವ ಚಂದ್ರಿಕಾ ರೈ ಅವರು ಲಾಲೂ ಪತ್ನಿ ಮೇಲೆ ಕಿಡಿ ಕಾರಿದ್ದಾರೆ.
ಐಶ್ವರ್ಯಾ ರೈ ಅವರು ಬಿಹಾರದ ಮಾಜೀ ಮುಖ್ಯಮಂತ್ರಿ ದರೋಗಾ ಪ್ರಸಾದ್ ರೈ ಅವರ ಮೊಮ್ಮಗಳಾಗಿದ್ದಾರೆ.