Advertisement
ಕೋಟ: ನಿರ್ಮಾಣ ಹಂತದಲ್ಲಿದ್ದ ಮನೆಯ ಸ್ಲ್ಯಾಬ್ ಕುಸಿದು ಕಾರ್ಮಿಕ ಮೃತಪಟ್ಟ ಘಟನೆ ಕೋಟತಟ್ಟು ಪಡುಕೆರೆಯ ಶಿರಸಿ ಮಾರಿಕಾಂಬಾ ದೇವಸ್ಥಾನದ ಸಮೀಪದಲ್ಲಿ ಬುಧವಾರ ಜರಗಿದೆ.
ಇಲ್ಲಿನ ರಾಜಶೇಖರ್ ಹಂದೆ ಎನ್ನುವರ ನಿರ್ಮಾಣ ಹಂತದ ಮನೆಯಲ್ಲಿ ಈ ದುರ್ಘಟನೆ ನಡೆದಿದ್ದು, ಕಟ್ಟಡಕ್ಕೆ ಯಾವುದೇ ಫಿಲ್ಲರ್, ಇನ್ನಿತರ ಆಧಾರವಿಲ್ಲದೆ ಸುಮಾರು 30 ಫೀಟ್ ಉದ್ದ, 3 ಫೀಟ್ ಆಗಲದ ಸ್ಲ್ಯಾಬ್ ಹಾಕಲಾಗಿತ್ತು. ಸ್ಲ್ಯಾಬ್‌ಗೆ ಅಳವಡಿಸಿದ್ದ ಕಂಬವನ್ನು ತೆರವುಗೊಳಿಸುತ್ತಿದ್ದಂತೆ ಗೋಡೆಯ ಒಂದು ಸಾಲು ಕಲ್ಲಿನ ಸಮೇತ ಸ್ಲ್ಯಾಬ್ ನೆಲಕ್ಕುರುಳಿದ್ದು, ಈ ಸಂದರ್ಭ ಕೆಳಗಡೆ ಗಾರೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಮಂಜುನಾಥ ಅವರ ತಲೆಯ ಮೇಲೆ ಹಾಗೂ ಸೆಂಟ್ರಿಂಗ್ ಸಹಾಯಕನಾಗಿ ಕಾರ್‍ಯ ನಿರ್ವಹಿಸುತ್ತಿದ್ದ ಚೇತನ್‌ನ ಕಾಲಿನ ಮೇಲೆ ಸ್ಲ್ಯಾಬ್ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಮಂಜುನಾಥ್ ಅವರನ್ನು ಸ್ಥಳೀಯ ಜೀವನ್‌ಮಿತ್ರ ಆಂಬುಲೆನ್ಸ್ ಮೂಲಕ ತತ್‌ಕ್ಷಣ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ಆಸ್ಪತ್ರೆ ತಲುಪುವಾಗ ಮೃತಪಟ್ಟಿದ್ದಾರೆ. ಚೇತನ್ ಪೂಜಾರಿಯವರ ಕಾಲಿಗೆ ಬಲವಾದ ಪೆಟ್ಟಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿಯೇ ದುರಂತಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
ಮೃತ ಮಂಜುನಾಥ ತಂದೆ, ತಾಯಿ, ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ಇವರ ತಂದೆ ಗಂಭೀರವಾದ ಖಾಯಿಲೆಯಿಂದ ಬಳಲುತ್ತಿದ್ದು ಮನೆಗೆ ಆಧಾರದವಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.
Advertisement
ಕೋಟ ಪೊಲೀಸ್ ಠಾಣಾಧಿಕಾರಿ ಸಂತೋಷ್ ಬಿ.ಪಿ. ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಕೋಟ ಠಾಣೆಯಲ್ಲಿ ಮನೆಯ ಮಾಲೀಕರು, ಇಂಜಿನಿಯರ್, ಸೆಂಟ್ರಿಂಗ್ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಾಗಿದೆ.