Advertisement

SL vs IND: ಟೈ ಅಲ್ಲ , ಭಾರತಕ್ಕೆ ಬೇಕಿದೆ ಗೆಲುವಿನ ಫ‌ಲಿತಾಂಶ

10:34 PM Aug 03, 2024 | Team Udayavani |

ಕೊಲಂಬೊ: ಶ್ರೀಲಂಕಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಗೆಲುವಿನ ಫ‌ಲಿತಾಂಶ ದಾಖಲಿಸಲು ವಿಫ‌ಲವಾದ ಭಾರತ, ರವಿವಾರ ಸುಧಾರಿತ ಬ್ಯಾಟಿಂಗ್‌ ಪ್ರದರ್ಶನ ದೊಂದಿಗೆ ದ್ವಿತೀಯ ಪಂದ್ಯವನ್ನು ಆಡಬೇಕಿದೆ. ಗೆದ್ದು ಸರಣಿ ಮುನ್ನಡೆ ಸಾಧಿಸುವುದು ರೋಹಿತ್‌ ಪಡೆಯ ಯೋಜನೆ ಆಗಬೇಕಿದೆ.

Advertisement

ಕೊಲಂಬೋದ “ಆರ್‌. ಪ್ರೇಮದಾಸ ಸ್ಟೇಡಿಯಂ’ ಟ್ರ್ಯಾಕ್‌ ಬೌಲರ್‌ಗಳಿಗೆ, ಅದರಲ್ಲೂ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿತ್ತು. ಚೆಂಡು ವಿಪರೀತ ಟರ್ನ್ ಪಡೆದುಕೊಳ್ಳುತ್ತಿತ್ತು. ಹೀಗಾಗಿ ರನ್‌ ಗಳಿಕೆ ಕಷ್ಟವಿತ್ತು. ಆದರೆ ಗೆಲುವಿನ ಗಡಿ ತನಕ ಬಂದಿದ್ದ ಭಾರತ ಸತತ 2 ವಿಕೆಟ್‌ ಕಳೆದು ಕೊಂಡು ಪಂದ್ಯವನ್ನು ಟೈ ಮಾಡಿಕೊಳ್ಳಬೇಕಾದ ಸ್ಥಿತಿಯೇನೂ ಇರಲಿಲ್ಲ. ನಾಯಕ ರೋಹಿತ್‌ ಶರ್ಮ ಹೇಳಿದಂತೆ, ಆ ಒಂದು ಗೆಲುವಿನ ರನ್ನನ್ನು ಖಂಡಿತ ಗಳಿಸಬಹುದಿತ್ತು.

ಚೇತರಿಸಿದ ಲಂಕಾ, ಕುಸಿದ ಭಾರತ:

ಇಲ್ಲಿ ಇತ್ತಂಡಗಳ ಬ್ಯಾಟಿಂಗ್‌ ವೈರುಧ್ಯವ ನ್ನೊಮ್ಮೆ ನೋಡಬೇಕಿದೆ. ಶ್ರೀಲಂಕಾ ಒಂದು ಹಂತದಲ್ಲಿ 6ಕ್ಕೆ 142 ರನ್‌ ಗಳಿಸಿ ಇನ್ನೂರರ ಗಡಿ ದಾಟುವುದೂ ಅನುಮಾನ ಎಂಬ ಸ್ಥಿತಿಯಲ್ಲಿತ್ತು. ಆದರೆ ಕೊನೆಯಲ್ಲಿ ದುನಿತ್‌ ವೆಲ್ಲಲಗೆ ಮುನ್ನುಗ್ಗಿ ಬಾರಿಸಿದ ಪರಿಣಾಮ ಸ್ಕೋರ್‌ 230ರ ತನಕ ಏರಿತು. ಕೊನೆಯ 15 ಓವರ್‌ಗಳಲ್ಲಿ ಭಾರತದ ಬೌಲರ್ ಲಂಕೆಯನ್ನು ನಿಯಂತ್ರಿಸಲು ಸಂಪೂರ್ಣ ವಿಫ‌ಲರಾದರು.

ಭಾರತದ್ದು ಇದಕ್ಕೆ ವಿರುದ್ಧವಾದ ಸ್ಥಿತಿ. ಚೇಸಿಂಗ್‌ ವೇಳೆ, 24ನೇ ಓವರ್‌ನಲ್ಲಿ 3ಕ್ಕೆ 130 ರನ್‌ ಮಾಡಿದ್ದ ಭಾರತಕ್ಕೆ ಗೆಲುವು ಅಸಾಧ್ಯವೇನೂ ಆಗಿರಲಿಲ್ಲ. ಆದರೆ ಇಲ್ಲಿಂದ ಮುಂದೆ ರನ್‌ ಗತಿ ಕುಂಟಿತಗೊಂಡಿತು; ವಿಕೆಟ್‌ ಉಳಿಸಿಕೊಳ್ಳಲಿಕ್ಕೂ ವಿಫ‌ಲವಾಯಿತು. ಕೆ.ಎಲ್‌. ರಾಹುಲ್‌, ಅಕ್ಷರ್‌ ಪಟೇಲ್‌ ಮತ್ತು ಶಿವಂ ದುಬೆ ಉತ್ತಮ ಹೋರಾಟ ಸಂಘಟಿಸಿದರೂ ತಂಡವನ್ನು ದಡ ಸೇರಿಸಲು ಇವರಿಂದಾಗಲಿಲ್ಲ. ದುಬೆ ಮತ್ತು ಅರ್ಷದೀಪ್‌ ಅವರನ್ನು ಸತತ ಎಸೆತಗಳಲ್ಲಿ ಕೆಡವಿದ ಲಂಕಾ ನಾಯಕ ಅಸಲಂಕ, ಭಾರತದ ಗೆಲುವನ್ನು ಕಸಿಯುವಲ್ಲಿ ಯಶಸ್ವಿಯಾದರು.

Advertisement

ರೋಹಿತ್‌ ಶರ್ಮ ಆಕ್ರಮಣಕಾರಿ ಆಟವಾಡಿ ಬಿರುಸಿನ ಆರಂಭ ಒದಗಿಸಿದರು. ಮೊದಲ ವಿಕೆಟಿಗೆ 12.4 ಓವರ್‌ಗಳಿಂದ 75 ರನ್‌ ಒಟ್ಟುಗೂಡಿದಾಗಲೂ ಭಾರತದ ಗೆಲುವಿನ ಮೇಲೆ ಅನುಮಾನ ಇರಲಿಲ್ಲ. ಆದರೆ ಉಳಿದವರ ವೈಫ‌ಲ್ಯ ತಂಡಕ್ಕೆ ಮುಳುವಾಯಿತು. ಗಿಲ್‌, ಕೊಹ್ಲಿ, ಅಯ್ಯರ್‌, ರಾಹುಲ್‌ ಇನ್ನಿಂಗ್ಸ್‌ ವಿಸ್ತರಿಸಬೇಕಿದೆ. ವಾಷಿಂಗ್ಟನ್‌ಗೆ ಭಡ್ತಿ ನೀಡುವ ಅಗತ್ಯ ಇರಲಿಲ್ಲ.

ಸ್ಪಿನ್‌ ನಿಭಾವಣೆ ಅಗತ್ಯ:

ಭಾರತ ಮೇಲುಗೈ ಸಾಧಿಸಬೇಕಾದರೆ ಹಸರಂಗ, ಅಸಲಂಕ ಅವರ ಸ್ಪಿನ್‌ ದಾಳಿಯನ್ನು ನಿಭಾಯಿಸಿ ನಿಲ್ಲುವುದು ಮುಖ್ಯ. ಇತ್ತ ಭಾರತದ ಸ್ಪಿನ್ನರ್ ಇನ್ನಷ್ಟು ಹರಿತಗೊಳ್ಳಬೇಕಿದೆ. ಗಿಲ್‌ ಸೇರಿದಂತೆ ಭಾರತದ ನಾಲ್ವರು ಸ್ಪಿನ್ನರ್ 30 ಓವರ್‌ಗಳಲ್ಲಿ 126 ರನ್‌ ನೀಡಿದ್ದರು. ಉರುಳಿಸಿದ್ದು 4 ವಿಕೆಟ್‌. ಲಂಕಾ ಸ್ಪಿನ್ನರ್ 37.5 ಓವರ್‌ಗಳಲ್ಲಿ 167 ರನ್‌ ನೀಡಿ 9 ವಿಕೆಟ್‌ ಉಡಾಯಿಸಿದರು. ಪಂದ್ಯದ ವ್ಯತ್ಯಾಸವನ್ನು ಇಲ್ಲಿ ಗಮನಿಸಬಹುದು.

ಆರಂಭ: ಅ. 2.30

ಪ್ರಸಾರ: ಸೋನಿ ಸ್ಪೋಟ್ಸ್‌ 

Advertisement

Udayavani is now on Telegram. Click here to join our channel and stay updated with the latest news.

Next