Advertisement

Brand Bengaluru; ಬೆಂಗಳೂರಿನ ಸೌಂದರ್ಯ ವೀಕಣೆಗೆ ಸ್ಕೈಡೆಕ್

10:00 AM Oct 20, 2023 | Team Udayavani |

ಬೆಂಗಳೂರು: “ಸಿಲಿಕಾನ್‌ ಸಿಟಿ’ ಬೆಂಗಳೂರಿನ ರಮಣೀಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಆಲದ ಮರದ ರಚನೆಯಲ್ಲಿ ‘ಬೃಹತ್‌ ವೀಕ್ಷಣಾ ಗೋಪುರ’ ತಲೆ ಎತ್ತಲಿದೆ. ಶಾಂಘಾಯ್‌ ವೀಕ್ಷಣಾ ಗೋಪುರಗಳ ಮಾದರಿಯಲ್ಲಿ ನಿರ್ಮಾಣವಾಗಲಿದ್ದು “ಬ್ರ್ಯಾಂಡ್‌ ಬೆಂಗಳೂರು’ ಯೋಜನೆಗಳಲ್ಲಿ ಇದು ಮಹತ್ವದ ಸ್ಥಾನ ಪಡೆಯಲಿದೆ.

Advertisement

280 ಮೀಟರ್‌ ಎತ್ತರ ವೀಕ್ಷಣಾ ಗೋಪುರದ ಮೇಲೆ ನಿಂತರೆ ರಾಜಧಾನಿಯ ಇಡೀ ಸಹಜ ಸೌಂದರ್ಯ ನೋಡುಗರ ಕಣ್ಣಿಗೆ ರಾಚಲಿದೆ. ಪ್ರವಾಸೋದ್ಯಮವನ್ನು ಆಕರ್ಷಿಸುವುದು ಈ ಯೋಜನೆ ಮುಖ್ಯ ಉದ್ದೇಶವಾಗಿದೆ. ಕಂಠೀರವ ಕ್ರೀಡಾಂಗಣ, ವಿಧಾನಸೌಧ ಮತ್ತು ರೇಸ್‌ ಕೋರ್ಸ್‌ ರಸ್ತೆ ಜಾಗ ಹುಡುಕುವ ಕೆಲಸ ನಡೆದಿದೆ.

ಬ್ರ್ಯಾಂಡ್‌ ಬೆಂಗಳೂರು ಯೋಜನೆಯ ವಿಸ್ತೀರ್ಣದ ಭಾಗವಾಗಿ ಈ ಗೋಪುರ ನಿರ್ಮಾಣಕ್ಕೆ ಚಿಂತನೆ ನಡೆದಿದ್ದು, ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಜತೆಗೆ ಸಮಾಲೋಚನೆ ನಡೆಸಿದ್ದಾರೆ. ಆರ್ಥಿಕ ಇಲಾಖೆ ಮತ್ತು ಸಚಿವ ಸಂಪುಟ ಈ ಯೋಜನೆಗೆ ಅನುಮೋದನೆ ನೀಡಿದರೆ ಮಾತ್ರ ಈ ಯೋಜನೆ ಜಾರಿಯಾಗಲಿದೆ.

ಮೆಗಾ ಸ್ಕೈಡೆಕ್‌ ವಿನ್ಯಾಸ ಭವ್ಯವಾದ ಆಲದ ಮರದ ವಿಸ್ತಾರವಾದ ಕೊಂಬೆಗಳು, ನೇತಾಡುವ ಬೇರುಗಳು ಮತ್ತು ಹೂ ಬಿಡುವ ಹೂವುಗಳ ನೈಸರ್ಗಿಕ ಬೆಳವಣಿಗೆಯಿಂದ ಪ್ರೇರಿತವಾಗಿದೆ. ಸ್ಕೈಡೆಕ್‌ ಅನ್ನು ಬೇಸ್‌, ಟ್ರಂಕ್‌ ಮತ್ತು ಬ್ಲಾಸ್ಸಮ್‌ ಎಂಬ ಮೂರು ಭಾಗಗಳಲ್ಲಿ ವಿಂಗಡಿಸಲಾಗಿದ್ದು, ಪ್ರವಾಸಿಗರಿಗಂತೂ ಪ್ರಕೃತಿಯ ಅಪ್ಪುಗೆಯಲ್ಲಿ ಮುಳುಗಿರುವ ಭಾವನೆಯನ್ನು ನೀಡಲಿದೆ.

ಸ್ಕೈಡೆಕ್‌ ಬೇಸ್‌ನಲ್ಲಿ ನಗರ ಮತ್ತು ಸ್ಥಳದ ಇತಿಹಾಸ ಹೊಂದಿರಲಿದೆ. ಟ್ರಂಕ್‌ ಭಾಗವು ಆಲದ ಮರದ ಬೆಳವಣಿಗೆಯನ್ನು ನೆನಪಿಸುವ ಅಮೋಘ ಪ್ರಯಾಣವನ್ನು ಸೂಚಿಸುತ್ತದೆ ಮತ್ತು ಮೂರನೇ ಭಾಗ ಬ್ಲಾಸ್ಸಮ್‌, ಅರಳಿದ ಹೂವಿನಿಂದ ಪ್ರೇರಿತವಾದ ದಾರಿದೀಪವನ್ನು ಹೋಲುತ್ತದೆ ಎಂದು ಮೂಲಗಳು ತಿಳಿಸಿವೆ.

Advertisement

ಸೌರಫ‌ಲಕಗಳಿಂದ ವಿದ್ಯುತ್‌: ಬೃಹತ್‌ ವೀಕ್ಷಣಾ ಗೋಪುರವನ್ನು ಶಕ್ತಿ-ಸಮರ್ಥ ಮಾನದಂಡಗಳನ್ನು ಅಳವಡಿಸಿಕೊಂಡು ನಿರ್ಮಿಸಲಾಗುತ್ತದೆ. ಮೇಲ್ಭಾಗದಲ್ಲಿರುವ ವಿಂಗ್‌ ಕ್ಯಾಚರ್‌ ಗಾಳಿಯ ದಿಕ್ಕನ್ನು ಎದುರಿಸಲು ತಿರುಗುತ್ತದೆ. ರೋಲರ್‌ -ಕೋಸ್ಟರ್‌ ಡೆಕ್‌ನಲ್ಲಿರುವ ಸೌರ ಫಲಕಗಳು ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಅಲ್ಗಾರಿದಮಿಕ್‌ ಆಧಾರಿತ ಬೇಸ್‌ ರಚನೆಗಳು ಸಾಕಷ್ಟು ಗಾಳಿಯನ್ನು ಹಾದುಹೋಗಲು ಅನುವು ಮಾಡಿಕೊಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸ್ಕೈಡೆಕ್‌ ಸಿದ್ಧವಾದರೆ ಬಹುಮನರಂಜನಾ ಸೌಲಭ್ಯಗಳೊಂದಿಗೆ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯಲಿದೆ. ಗೋಪುರದ ತಳಮಟ್ಟದಲ್ಲಿ ಶಾಪಿಂಗ್‌ ಪ್ಯಾಸೇಜ್‌, ರೆಸ್ಟೋರೆಂಟ್‌ಗಳು, ಚಿತ್ರಮಂದಿರ ಮತ್ತು ಸ್ಕೈಗಾರ್ಡನ್‌ ನಂತಹ ಹಲವು ಸೌಲಭ್ಯಗಳನ್ನು ಹೊಂದಿರಲಿದೆ ಎಂದು ತಿಳಿಸಿದ್ದಾರೆ. ಮೇಲ್ಭಾಗದಲ್ಲಿ ಒಂದು ರೋಲರ್‌ ಕೋಸ್ಟರ್‌ ನಿಲ್ದಾಣ, ಪ್ರದರ್ಶನ ಸಭಾಂಗಣ, ಸ್ಕೈಲಾಬಿ, ವಿಹಂಗಮ ನೋಟಕ್ಕಾಗಿ ಸ್ಕೈಡೆಕ್‌, ರೆಸ್ಟೋರೆಂಟ್‌ , ಬಾರ್‌ ಮತ್ತು ವಿಐಪಿ ಏರಿಯಾ ಇರಲಿದೆ.

ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇ ತಮ್ಮ ಕನಸಿನ ಯೋಜನೆ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜಾಲತಾಣ” ಎಕ್ಸ್‌’ ನಲ್ಲಿ ಹಂಚಿಕೊಂಡಿದ್ದಾರೆ. ಆಸ್ಟ್ರೀಯಾ ಮೂಲದ COOP HIMMELB(L)AU ಸಂಸ್ಥೆಯು ವರ್ಲ್ಡ್ ಡಿಸೈನ್‌ ಆರ್ಗನೈಸೇಶನ್‌ ಸಹಕಾರದೊಂದಿಗೆ ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಕೈಡೆಸ್ಕ್ ಯೋಜನೆಯನ್ನು ಪರಿಶೀಲಿಸಿದೆ. ಇದು ನಿರ್ಮಾಣವಾದ ನಂತರ ದೇಶದಲ್ಲೇ ಅತಿ ಎತ್ತರದ ವೀಕ್ಷಣಾ ಗೋಪುರ ಎನ್ನುವ ಕೀರ್ತಿಗೆ ಪಾತ್ರವಾಗಲಿದೆ. ಯೋಜನೆಯ ಅನುಷ್ಠಾನಕ್ಕೆ ಸೂಕ್ತವಾದ 8-10 ಎಕರೆ ಭೂಮಿಯನ್ನು ಗುರುತಿಸುವುದರ ಜೊತೆಗೆ ಆರ್ಥಿಕ ಕಾರ್ಯಸಾಧ್ಯತೆಯನ್ನು ನಿರ್ಣಯಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದಿದ್ದಾರೆ.

ಸ್ಕೈಡೆಕ್‌ ಪ್ರಸ್ತಾವನೆಯನ್ನು ಆಸ್ಟ್ರೀಯಾ ಮೂಲದ ವಿನ್ಯಾಸ ಮತ್ತು ವಾಸ್ತುಶಿಲ್ಪ ಸಂಸ್ಥೆ ಕೂಪ್‌ ಹಿಮ್ಮೆಲ್ಬ್ (ಐ) ಎಯು ವಿನ್ಯಾಸಗೊಳಿಸಿದೆ. ಈ ಸಂಸ್ಥೆ ಬೆಂಗಳೂರಿನ ವಿಶ್ವ ವಿನ್ಯಾಸ ಸಂಸ್ಥೆ ಸಹಯೋಗದೊಂದಿಗೆ ಫ್ರಾನ್ಸ್‌ ನಲ್ಲಿ ಮ್ಯೂಸಿ ಡೆಸ್‌ ಕನ್‌ಫುಯೆನ್ಸ್‌ (ಲಿಯಾನ್‌) ಮತ್ತು ಜರ್ಮನಿಯಲ್ಲಿ ಯೂರೂಪಿಯನ್‌ ಸೆಂಟ್ರಲ್‌ ಬ್ಯಾಂಕ್‌ (ಫ್ರಾಂಕ್‌ಫರ್ಟ್‌) ನಂತಹ ಕಟ್ಟಡ ನಿರ್ಮಾಣಗಳಿಗೆ ಹೆಸರುವಾಸಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next