Advertisement

ಕನಸು ಕಂಡ ಅಮ್ಮನಿಗೆ ಬಾನೆತ್ತರದ ಬೀಳ್ಕೊಡುಗೆ

10:26 AM Aug 01, 2018 | Team Udayavani |

ಬೆಂಗಳೂರು: ಅದೊಂದು ಭಾವನಾತ್ಮಕ ಕ್ಷಣ… ಬರೋಬ್ಬರಿ 38 ವರ್ಷಗಳ ಕಾಲ ಏರ್‌ಇಂಡಿಯಾದಲ್ಲಿ ಗಗನಸಖೀಯಾಗಿ ಕಾರ್ಯನಿರ್ವಹಿಸಿದ್ದ ಪೂಜಾ ಚಿಂಚಂಕರ್‌ ತಮ್ಮ ಕೆಲಸಕ್ಕೆ ವಿದಾಯ ಹೇಳುವ ಆ ಹೊತ್ತಲ್ಲಿ,  ಸುತ್ತಲಿದ್ದವರೆಲ್ಲ ಕರತಾಡನ ಮಾಡುತ್ತಿದ್ದರೆ, ಪಕ್ಕದಲ್ಲೇ ನಿಂತಿದ್ದ ಮಗಳ ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಏಕೆಂದರೆ, ಗಗನಸಖೀಯಾಗಿ ಅಮ್ಮನ ಕೊನೆಯ ಪಯಣಕ್ಕೆ ಚಾಲಕಿಯಾಗಿದ್ದಳು ಆ ಮಗಳು!

Advertisement

ಹೌದು, ಪೂಜಾ ಅವರ ಪುತ್ರಿ ಅಶ್ರಿತಾ ಏರ್‌ಇಂಡಿಯಾದ ಪೈಲಟ್‌. ಅದೇ ವಿಮಾನದಲ್ಲಿ ತಾಯಿ ಪೂಜಾ ಗಗನಸಖೀ. 38 ವರ್ಷಗಳ ಕಾಲ ಏರ್‌ಹೋಸ್ಟೆಸ್‌ ಆಗಿ ಕರ್ತವ್ಯ ಪೂರ್ಣಗೊಳಿಸಿರುವ ಪೂಜಾ ಅವರು ಮಂಗಳವಾರ ನಿವೃತ್ತಿ
ಹೊಂದಿದರು. ತಮ್ಮ ಸೇವೆಗೆ ವಿದಾಯ ಹೇಳುವ ದಿನ ಪೂಜಾರಿಗೆ ದುಃಖ ಉಮ್ಮಳಿಸಿ ಬರುತ್ತಿದ್ದರೂ, ತಮ್ಮ ಆಸೆಯಂತೆಯೇ ಮಗಳು ಪೈಲಟ್‌ ಆಗಿ ತಮ್ಮ ಕೊನೆಯ ಪಯಣಕ್ಕೆ ಸಾಕ್ಷಿಯಾಗಿದ್ದು ಕಣ್ಣೀರಿನ ನಡುವೆಯೂ ಹೆಮ್ಮೆ ಮೂಡಿಸಿತ್ತು.

ಮುಂಬೈನಿಂದ ಬೆಂಗಳೂರಿಗೆ ಬಂದ ವಿಮಾನದಲ್ಲಿ ಅಶ್ರಿತಾ ಪೈಲಟ್‌ ಆಗಿದ್ದರೆ, ತಾಯಿ ಪೂಜಾ ಏರ್‌ಹೋಸ್ಟೆಸ್‌ ಆಗಿದ್ದರು. ಅವರ ದೀರ್ಘಾವಧಿ ಸೇವೆಯನ್ನು ಕ್ಯಾಬಿನ್‌ ಸಿಬ್ಬಂದಿ ವಿಮಾನದಲ್ಲೇ ಘೋಷಿಸಿ, ಅಭಿನಂದನೆ ಸಲ್ಲಿಸಿದಾಗ,
ಪ್ರಯಾಣಿಕರೆಲ್ಲರೂ ಚಪ್ಪಾಳೆ ತಟ್ಟಿ ಶ್ಲಾ ಸಿದರು. ಪೂಜಾ ಅವರು ಪ್ರಯಾಣಿಕರ ಮುಂದೆ ಬಂದು ಕೈಮುಗಿದು ಧನ್ಯವಾದ ಅರ್ಪಿಸಿದರು.

ಸರಣಿ ಟ್ವೀಟ್‌ಗಳು: ಸೋಮವಾರ ರಾತ್ರಿಯೇ ಈ ಕುರಿತು ಸರಣಿ ಟ್ವೀಟ್‌ ಮಾಡಿದ್ದ ಪುತ್ರಿ ಅಶ್ರಿತಾ, “ಗೆಳೆಯರೇ, ನಾಳೆ ನನ್ನ ಅಮ್ಮನ ನಿವೃತ್ತಿಯ ದಿನ, ಅವಳೊಂದಿಗೇ ನಾನೂ ಪಯಣಿಸುತ್ತೇನೆ, ಆ ವಿಮಾನದ ಪೈಲಟ್‌ ಆಗಿ. ಗಗನಸಖೀಯಾಗಿ ಕೊನೆಯ ದಿನ ಕಾರ್ಯನಿರ್ವಹಿಸಲಿರುವ ಏರ್‌ಇಂಡಿಯಾ ವಿಮಾನದಲ್ಲಿ ನಾನೇ ಫ‌ಸ್ಟ್‌ ಆμàಸರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವುದು ನನಗೆ ಸಿಕ್ಕಸುವರ್ಣಾವಕಾಶ.

ನನಗೆ ಖುಷಿ, ಹೆಮ್ಮೆ ಒಟ್ಟೊಟ್ಟಿಗೇ ಆಗುತ್ತಿದೆ’ ಎಂದು ಬರೆದಿದ್ದರು. ಜತೆಗೆ, “ಏರ್‌ಇಂಡಿಯಾದಲ್ಲಿ ತಾವು ಗಗನಸಖೀಯಾಗಿ ಕೆಲಸ ಮಾಡಲಿರುವ ಕೊನೆಯ ದಿನದಂದು ಆ ವಿಮಾನದ ಪೈಲಟ್‌ ಮಗಳೇ ಆಗಿರಲಿ ಎಂದು ಅಮ್ಮ ಕನಸು ಕಾಣುತ್ತಿದ್ದರು. ಆ ಕನಸು ಇದೀಗ ನನಸಾಗುತ್ತಿದೆ’ ಎಂದೂ ಟ್ವೀಟಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದಲ್ಲದೆ, ಸಾವಿರಾರು ಮಂದಿ ತಾಯಿ-ಮಗಳಿಗೆ ಶುಭ ಕೋರಿದ್ದರು.

Advertisement

ಕಾಕತಾಳೀಯ: ಇದೇ ವೇಳೆ, ಪೂಜಾ ಅವರ ನಿವೃತ್ತಿ ದಿನದ ವಿಮಾನಕ್ಕೆ ಅವರ ಮಗಳು ಅಶ್ರಿತಾ ಅವರೇ ಪೈಲಟ್‌ ಆಗಿದ್ದು ಕಾಕತಾಳೀಯ ಎಂದು ಏರ್‌ಇಂಡಿಯಾ ವಕ್ತಾರರು ತಿಳಿಸಿದ್ದಾರೆ. ಜತೆಗೆ, ಪೂಜಾ ಅವರ ದೀರ್ಘಾವಧಿ ಸೇವೆಗೆ ಹೃತ್ಪೂರ್ವಕ ಅಭಿನಂದನೆಗಳು ಎಂದೂ ಟ್ವೀಟ್‌ ಮಾಡಿದ್ದಾರೆ. ಇನ್ನೊಂದೆಡೆ, ಅಶ್ರಿತಾ ಅವರ ಸರಣಿ ಟ್ವೀಟ್‌ಗಳಿಗೆ ಕೇಂದ್ರದ ಮಾಜಿ ನಾಗರಿಕ ವಿಮಾನಯಾನ ಸಚಿವ ಪ್ರಫ‌ುಲ್‌ ಪಟೇಲ್‌ ಅವರೂ ಪ್ರತಿಕ್ರಿಯಿಸಿದ್ದು, “ಕೆಲವೊಂದು ಅತ್ಯದ್ಭುತ ಹಾಗೂ ಸ್ಮರಣೀಯ ಘಟನೆಗಳು ಬದುಕಿನಲ್ಲಿ ಸಂಭವಿಸುತ್ತವೆ. ಅಂಥ ಕ್ಷಣಗಳಿಗೆ ನೀವು ಸಾಕ್ಷಿಯಾಗಿದ್ದೀರಿ. ನಿಮ್ಮ ಅಮ್ಮನ ಹೆಮ್ಮೆಯ ಮಗಳಾಗಿ’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next