ಒಮ್ಮೆ ರಾಜ ದೇಶಸಂಚಾರ ಮಾಡುತ್ತಿದ್ದ. ನದಿಯೊಂದರಲ್ಲಿ ವ್ಯಕ್ತಿಯೊಬ್ಬ ನೀರು ಕುಡಿಯುತ್ತಿದ್ದ. ರಾಜನನ್ನು ಕಂಡಾಕ್ಷಣ ಭಿಕ್ಷೆ ಬೇಡತೊಡಗಿದ. ರಾಜನಿಗೆ ಅವನನ್ನು ನೋಡಿ ಸಿಟ್ಟು ಬಂದಿತು. “ದೂರ ಹೋಗು, ನನ್ನ ಮನಃಶಾಂತಿ ಹಾಳು ಮಾಡಬೇಡ’ ಎಂದು ಗದರುತ್ತಾನೆ. ಭಿಕ್ಷುಕ ನಗುತ್ತ, “ರಾಜ, ನಿನಗೆ ಇಷ್ಟು ಚಿಕ್ಕ ವಿಷಯಕ್ಕೆ ಮನಃಶಾಂತಿ ಹಾಳಾಗುತ್ತದೆಂದರೆ ಅದು ಯಾವಾಗಲೂ ಶಾಂತಿಯಿಂದ ಇರಲು ಸಾಧ್ಯವಿಲ್ಲ’ ಎನ್ನುವನು.
ಭಿಕ್ಷುಕನ ಮಾತನ್ನು ಕೇಳಿ ರಾಜ ಇವನು ಭಿಕ್ಷುಕನಲ್ಲ ಸಾಧು ಇರಬೇಕು ಎಂದು ಯೋಚಿಸುತ್ತಾ ಅವನ ಕಡೆಗೆ ತಿರುಗಿ, “ಮಹಾತ್ಮರೇ, ತಪ್ಪಾಯಿತು. ಕ್ಷಮಿಸಿ. ನಿಮಗೆ ಅವಶ್ಯಕತೆ ಇರುವುದನ್ನು ಕೇಳಿ ಕೊಡುತ್ತೇನೆ’ ಎನ್ನುವನು. ಭಿಕ್ಷುಕ ರಾಜನಿಗೆ, “ನಿನ್ನಿಂದ ಕೊಡಲು ಸಾಧ್ಯವಾಗುತ್ತದೆ ಎಂದರೆ ಮಾತ್ರ ಮಾತು ಕೊಡು’ ಎನ್ನುತ್ತಾನೆ.
ಮಾತು ಕೊಟ್ಟ ರಾಜ ಸಾಧುವನ್ನು ಅರಮನೆಗೆ ಕರೆದುಕೊಂಡು ಹೋಗುತ್ತಾನೆ. ಸಾಧುವಿಗೆ ಏನು ಬೇಕೆಂದು ಕೇಳುತ್ತಾನೆ. ಸಾಧು ಭಿಕ್ಷಾಪಾತ್ರೆಯನ್ನು ಹಿಡಿದು ಇದು ತುಂಬುವಷ್ಟು ಚಿನ್ನದ ನಾಣ್ಯಗಳನ್ನು ಕೊಡು ಎನ್ನುತ್ತಾನೆ. ರಾಜ ನಗುತ್ತಾ ಅಯ್ಯೋ ಅಷ್ಟೇನಾ! ಎಂದು ಅಣಕ ಮಾಡುತ್ತಾ ಬೊಗಸೆ ಚಿನ್ನದ ನಾಣ್ಯಗಳನ್ನು ತರುವಂತೆ ಸೇವಕರಲ್ಲಿ ಆಜ್ಞಾಪಿಸುತ್ತಾನೆ. ಆದರೆ ಆಲ್ಲಿ ಪವಾಡ ಜರುಗಿತು. ಬೊಗಸೆ ಚಿನ್ನದ ನಾಣ್ಯಗಳಿಂದ ಭಿಕ್ಷಾಪಾತ್ರೆ ತುಂಬಲಿಲ್ಲ. ಪೆಟ್ಟಿಗೆಗಟ್ಟಲೆ ಚಿನ್ನದ ನಾಣ್ಯಗಳನ್ನು ಹಾಕಿದರೂ ತುಂಬಲಿಲ್ಲ. ಖಜಾನೆ ಖಾಲಿಯಾಗತೊಡಗಿತು. ಪಾತ್ರೆ ಮಾತ್ರ ತುಂಬಲೇ ಇಲ್ಲ.
ಕೊನೆಗೆ ರಾಜ ಸೋಲೊಪ್ಪಿಕೊಂಡ. ಸಾಧುವಿನ ಪಾದಕ್ಕೆ ನಮಸ್ಕಾರ ಮಾಡಿ, ಈ ಬಿûಾಪಾತ್ರೆಯ ಮಹಿಮೆ ತಿಳಿಸಿ ಕೊಡಿ ಎಂದ. ಅದಕ್ಕೆ ಸಾಧು ನಗುತ್ತಾ, “ಎಲೈ ರಾಜನೇ, ಈ ಭಿಕ್ಷಪಾತ್ರೆಯನ್ನು ಯಾರಿಂದಲೂ ತುಂಬಿಸಲು ಸಾಧ್ಯವಿಲ್ಲ. ಏಕೆಂದರೆ ಇದು ಸಾಮಾನ್ಯ ಭಿಕ್ಷಪಾತ್ರೆಯಲ್ಲ. ಇದು ಒಬ್ಬ ಮಹಾ ದುರಾಸೆಯ ಮನುಷ್ಯನ ತಲೆಬುರುಡೆಯಿಂದ ತಯಾರಿಸಿರುವ ಭಿûಾಪಾತ್ರೆ’ ಎನ್ನುವನು. ರಾಜನಿಗೆ ತನ್ನ ಅಜ್ಞಾನಕ್ಕೆ ನಾಚಿಕೆಯಾಯಿತು. ಭಿಕ್ಷಾಪಾತ್ರೆಯ ಮರ್ಮ ಅರ್ಥವಾಯಿತು. ಅಂದಿನಿಂದ ದುರಾಸೆಯನ್ನು ತ್ಯಜಿಸಿದ. ಖಜಾನೆಯನ್ನು ಪ್ರಜೆಗಳ ಉದ್ಧಾರಕ್ಕೆ ಬಳಸತೊಡಗಿದ.
-ವೇದಾವತಿ ಎಚ್.ಎಸ್