Advertisement

ಸಿಕ್ಕಿಂಗಾಗಿ ಎಸ್‌ಕೆಎಂ,ಎಸ್‌ಡಿಎಫ್ ಕುಸ್ತಿ

02:05 AM May 24, 2019 | Team Udayavani |

ಗ್ಯಾಂಗ್ಟಕ್‌: ಸಿಕ್ಕಿಂ ವಿಧಾನಸಭಾ ಚುನಾವಣೆಯಲ್ಲಿ ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ಮತ್ತು ಸಿಕ್ಕಿಂ ಡೆಮಾಕ್ರಟಿಕ್‌ ಫ್ರಂಟ್ (ಎಸ್‌ಡಿಎಫ್) ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ತೀವ್ರ ಕುತೂಹಲ ಘಟ್ಟ ತಲುಪಿದೆ.

Advertisement

ಒಟ್ಟಾರೆ 32 ಸ್ಥಾನಗಳ ಪೈಕಿ ಸರ್ಕಾರ ರಚನೆಗೆ 17 ಸೀಟುಗಳ ಅವಶ್ಯಕತೆ ಇದೆ. ಈಗಾಗಲೇ ಘೋಷಣೆ ಆಗಿರುವ 19 ಕ್ಷೇತ್ರಗಳ ಪೈಕಿ 12ರಲ್ಲಿ ಎಸ್‌ಕೆಎಂ ಹಾಗೂ ಉಳಿದ ಏಳು ಕಡೆಗಳಲ್ಲಿ ಎಸ್‌ಡಿಎಫ್ ಜಯಭೇರಿ ಬಾರಿಸಿವೆ. ಉಳಿದ ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು, ಅದರಲ್ಲಿ ಒಂದು ಕ್ಷೇತ್ರದಲ್ಲಿ ಎಸ್‌ಕೆಎಂ ಮತ್ತು ಐದರಲ್ಲಿ ಎಸ್‌ಡಿಎಫ್ ಮುನ್ನಡೆ ಸಾಧಿಸಿವೆ. ಸಿಕ್ಕಿಂ ಗದ್ದುಗೆ ಯಾರು ಏರಲಿದ್ದಾರೆ ಎಂಬುದಕ್ಕೆ ಶುಕ್ರವಾರ ಉತ್ತರ ಸಿಗಲಿದೆ.

ಎಸ್‌ಡಿಎಫ್ ಗೆದ್ದರೆ ಆ ಪಕ್ಷದ ಮುಖ್ಯಸ್ಥ ಪವನ್‌ ಚಾಮ್ಲಿಂಗ್‌ ಸತತ ಆರನೇ ಬಾರಿಗೆ ಸಿಕ್ಕಿಂ ಸಿಂಹಾಸನವನ್ನು ಅಲಂಕರಿಸಲಿದ್ದು, ದೇಶದಲ್ಲಿ ಅತಿ ಹೆಚ್ಚು ಅವಧಿ ಮುಖ್ಯಮಂತ್ರಿಯಾದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಇದರೊಂದಿಗೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ದಿವಂಗತ ಜ್ಯೋತಿ ಬಸು ಅವರ ದಾಖಲೆಯನ್ನೂ ಅವರು ಸರಿಗಟ್ಟಲಿದ್ದಾರೆ. ಜ್ಯೋತಿ ಬಸು ಸತತ ಐದು ಬಾರಿ ಮುಖ್ಯಮಂತ್ರಿ ಆಗಿದ್ದರು.

ಒಂದು ವೇಳೆ, ಎಸ್‌ಕೆಎಂ, ಮ್ಯಾಜಿಕ್‌ ನಂಬರ್‌ 17ರ ಗಡಿ ತಲುಪಿದಲ್ಲಿ ಸುಮಾರು ಎರಡು ದಶಕಗಳಿಂದ ಅಧಿಕಾರದಲ್ಲಿದ್ದ ಎಸ್‌ಡಿಎಫ್ನ ಭದ್ರಕೋಟೆಯನ್ನು ಛಿದ್ರಗೊಳಿಸಿದಂತಾಗುತ್ತದೆ. ಆ ಪಕ್ಷದ ಮುಖ್ಯಸ್ಥ ಪಿ.ಎಸ್‌.ಗೊಲಾಯ್‌ ಪುತ್ರ ಆದಿತ್ಯ ಗೊಲಾಯ್‌ ಮುಖ್ಯಮಂತ್ರಿ ಗದ್ದುಗೆ ಏರುವ ಸಾಧ್ಯತೆ ಇದೆ.

Advertisement

ಈ ಎರಡೂ ಪಕ್ಷಗಳ ಇಬ್ಬರೂ ನಾಯಕರು ಈಗಾಗಲೇ ತಮ್ಮ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಬದಲಾವಣೆ ಪರ್ವ?
1994ರ ಡಿಸೆಂಬರ್‌ 12ರಂದು ಅಧಿಕಾರಕ್ಕೆ ಬಂದ ಎಸ್‌ಡಿಎಫ್, ನಿರಂತರವಾಗಿ ಗೆಲುವು ಸಾಧಿಸಿಕೊಂಡು ಬಂದಿದೆ. 2009ರಲ್ಲಿ ಎಲ್ಲ 32 ಸ್ಥಾನಗಳನ್ನೂ ಬೀಗುತ್ತಿದ್ದ ಆ ಪಕ್ಷಕ್ಕೆ 2014ರಲ್ಲಿ ಆಘಾತ ನೀಡಿದ್ದು ಎಸ್‌ಕೆಎಂ. ಒಟ್ಟಾರೆ 32 ಸೀಟುಗಳಲ್ಲಿ ಹೊಸದಾಗಿ ಪ್ರವೇಶ ಪಡೆದ ಎಸ್‌ಕೆಎಂ, ಹತ್ತು ಸೀಟುಗಳನ್ನು ಗೆದ್ದಿತ್ತು. ಜತೆಗೆ ಶೇ. 11ರಷ್ಟು ವೋಟುಗಳನ್ನು ಎಸ್‌ಡಿಎಫ್ನಿಂದ ಹಾಗೂ ಶೇ. 27.09ರಷ್ಟು ವೋಟುಗಳನ್ನು ಕಾಂಗ್ರೆಸ್‌ನಿಂದ ಕಿತ್ತುಕೊಂಡಿತ್ತು. ಆ ಮೂಲಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ.40.8ರಷ್ಟು ಮತಗಳನ್ನು ಪಡೆಯುವ ಮೂಲಕ ಎದುರಾಳಿಗೆ ಎಚ್ಚರಿಕೆ ನೀಡಿತ್ತು. ಭ್ರಷ್ಟಾಚಾರ, ನಿರುದ್ಯೋಗ, ಹೆಚ್ಚಿದ ಮಾದಕ ವಸ್ತುಗಳ ಮಾಫಿಯಾದಿಂದ ಜನ ರೋಸಿ ಹೋಗಿದ್ದರು. ಈ ಮಧ್ಯೆ, ಅಭಿವೃದ್ಧಿ ಚಟುವಟಿಕೆಗಳಿಗೆ ಹಿನ್ನೆಡೆಯಾಗಿದೆ ಹಾಗೂ ಸತತ 20 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಪವನ್‌ ಚಾಮ್ಲಿಂಗ್‌ ರಾಜ್ಯವನ್ನು ಆಳಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಲ್ಲಿನ ಜನ ಬದಲಾವಣೆಯನ್ನು ಬಯಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next