Advertisement

ವಿಐಪಿ ಸಂಸ್ಕೃತಿ ಬಿಟ್ಟು ಬಿಡಿ; ಪ್ರತಿಯೊಬ್ಬ ವ್ಯಕ್ತಿಗೂ ಮಹತ್ವ ನೀಡಿ

09:41 AM May 01, 2017 | |

ನವದೆಹಲಿ: ಕೆಲವು ವ್ಯಕ್ತಿಗಳ ಮನಸ್ಸಲ್ಲಿ ಮನೆ ಮಾಡಿಕೊಂಡಿರುವ ವಿಐಪಿ ಸಂಸ್ಕೃತಿಯನ್ನು ತೊಡೆದುಹಾಕಬೇಕು ಎಂಬುದೇ ಕೆಂಪುದೀಪಗಳಿಗೆ ನಿಷೇಧ ಹೇರಿರುವುದರ ಹಿಂದಿನ ಉದ್ದೇಶ. ವಿಐಪಿ ಸಂಸ್ಕೃತಿಯನ್ನು ಬಿಟ್ಟು ಹಾಕಿ, ಇಪಿಐ (ಎವ್ರಿ ಪರ್ಸನ್‌ ಈಸ್‌ ಇಂಪಾರ್ಟೆಂಟ್‌) ಎಂಬ ಪರಿಕಲ್ಪನೆಯನ್ನು ಸಾಕಾರ ಮಾಡಿ, ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Advertisement

ಭಾನುವಾರ ತಮ್ಮ 32ನೇ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಇತ್ತೀಚೆಗೆ ಹೊರಡಿಸಿದ “ಕೆಂಪುದೀಪ’ ನಿಷೇಧ ಆದೇಶದ ಕುರಿತು ಮಾತನಾಡಿದ್ದಾರೆ. “ಗೂಟದ ಕಾರುಗಳನ್ನು ನಿಷೇಧಿಸಿ ನಾವು ಆದೇಶ ಹೊರಡಿಸುವವರೆಗೂ ನಮಗೆ, ಕೆಂಪುದೀಪದ ಕಾರುಗಳ ಬಗ್ಗೆ ಜನರಿಗೆ ಅಸಹನೆಯಿದೆ ಎಂಬುದು ಗೊತ್ತಿರಲಿಲ್ಲ. ಕೆಂಪು ದೀಪ ಎನ್ನುವುದು ವಿಐಪಿ ಸಂಸ್ಕೃತಿಯ ಸಂಕೇತವಾಗಿದ್ದು, ಇದು ಕೆಲವರ ಮನಸ್ಥಿತಿಯ ಆಳಕ್ಕೆ ಹೊಕ್ಕಿದೆ. ಹಾಗಾಗಿ, ಕೆಂಪು ದೀಪ ತೆಗೆದರಷ್ಟೇ ಸಾಲದು, ಮನಸ್ಸಿನೊಳಗಿನ ವಿಐಪಿ ಎಂಬ ಭಾವನೆಯನ್ನೂ ತೆಗೆದುಹಾಕಬೇಕು,’ ಎಂದಿದ್ದಾರೆ ಮೋದಿ.

ವಿಐಪಿ ಬೇಡ ಇಪಿಐ ಬೇಕು:
ನಮ್ಮ ನವಭಾರತದ ಕಲ್ಪನೆಯಲ್ಲಿ ವಿಐಪಿ ಇರುವುದಿಲ್ಲ, ಬದಲಿಗೆ ಪ್ರತಿಯೊಬ್ಬ ವ್ಯಕ್ತಿಗೂ ಪ್ರಾಮುಖ್ಯತೆ (ಇಪಿಐ) ನೀಡಲಾಗುತ್ತದೆ. ದೇಶದ 123 ಕೋಟಿ ನಾಗರಿಕರ ಮಹತ್ವವನ್ನು ನಾವು ಅರಿತರೆ, ನಮ್ಮ ಕನಸುಗಳನ್ನು ಈಡೇರಿಸಲು ನಮಗಿರುವ ಸಾಮರ್ಥ್ಯ ಎಷ್ಟಿರಬಹುದೆಂದು ಊಹಿಸಿ. ನಾವೆಲ್ಲರೂ ಒಂದಾಗಿ ಆ ಕೆಲಸ ಮಾಡಬೇಕು ಎಂದು ಮೋದಿ ಕರೆ ನೀಡಿದ್ದಾರೆ.

ನಗದು ಯೋಜನೆಯ ಲಾಭ ಪಡೆಯಿರಿ:
ಇದೇ ವೇಳೆ, ಡಿಜಿಟಲ್‌ ವಹಿವಾಟು ಪರ ಮತ್ತೂಮ್ಮೆ ಧ್ವನಿಯೆತ್ತಿದ ಪ್ರಧಾನಿ ಮೋದಿ, ಭೀಮ್‌ ಆ್ಯಪ್‌ ಬಳಸಿಕೊಂಡು, ಅದನ್ನು ಇನ್ನೊಬ್ಬರಿಗೆ ಸೂಚಿಸುವುದರಿಂದ ಬರುವ ನಗದು ಬಹುಮಾನವನ್ನು ನಿಮ್ಮದಾಗಿಸಿಕೊಳ್ಳಿ ಎಂದು ಯುವಕರಿಗೆ ಕರೆ ನೀಡಿದ್ದಾರೆ. ಈ ಯೋಜನೆಯು ಅಕ್ಟೋಬರ್‌ 14ರವರೆಗೆ ಚಾಲ್ತಿಯಲ್ಲಿರಲಿದ್ದು, ನೀವೆಲ್ಲರೂ ಇದರ ಹಣಕಾಸಿನ ಲಾಭವನ್ನು ಪಡೆಯಿರಿ ಎಂದು ಹೇಳಿದ್ದಾರೆ. ಭೀಮ್‌ ಆ್ಯಪ್‌ ಹೊಂದಿರುವವರು ಮತ್ತೂಬ್ಬರಿಗೆ ಇದೇ ಆ್ಯಪ್‌ ಬಳಸುವಂತೆ ಸೂಚಿಸಿದರೆ ಮತ್ತು ಅವರು 3 ಬಾರಿ ಅದರಲ್ಲಿ ವಹಿವಾಟು ನಡೆಸಿದರೆ, ಸೂಚಿಸಿದಾತನಿಗೆ 10 ರೂ. ನೀಡಲಾಗುತ್ತದೆ. ಅಂತೆಯೇ, 10 ಮಂದಿಯನ್ನು ಸೂಚಿಸಿದರೆ, 100 ರೂ. ಪಡೆಯಬಹುದಾಗಿದೆ. ಇದರಿಂದ ಡಿಜಿಟಲ್‌ ಇಂಡಿಯಾಗೆ ನೀವು ಕೊಡುಗೆ ಕೊಟ್ಟಂತೆಯೂ ಆಗುತ್ತದೆ ಎಂದಿದ್ದಾರೆ ಮೋದಿ.

Advertisement

Udayavani is now on Telegram. Click here to join our channel and stay updated with the latest news.

Next