ಬೆಂಗಳೂರು: ದೇಶದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಕ್ಷಿಪ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಗರದ ವಿಕ್ರಮ್ ಆಸ್ಪತ್ರೆ ಕ್ಯಾನ್ಸರ್ ರೋಗತಜ್ಞರು “ಅರ್ಬುದ ರೋಗ ಜಾಗೃತಿ ಮಾಸ’ ಕಾರ್ಯಾಗಾರ ನಡೆಸಿದರು.
ವಿಕ್ರಮ್ ಆಸ್ಪತ್ರೆಯ ವೈದ್ಯಕೀಯ ಕ್ಯಾನ್ಸರ್ ರೋಗಶಾಸ್ತ್ರದ ಹಿರಿಯ ಸಲಹಾ ತಜ್ಞೆ ಮತ್ತು ರಕ್ತ ಕ್ಯಾನ್ಸರ್ ರೋಗತಜ್ಞೆ ಡಾ. ನಿತಿ ರೈಜಾದ ಅವರು ಮಾತನಾಡಿ, ವಿಶ್ವ ವ್ಯಾಪಿಯಾಗಿ ನವೆಂಬರ್ ತಿಂಗಳನ್ನು ಶ್ವಾಸಕೋಶದ ಕ್ಯಾನ್ಸರ್ ಜಾಗೃತಿ ಮಾಸ ಎಂದು ಆಚರಿಸಲಾಗುತ್ತದೆ. ಆರಂಭದಲ್ಲಿ ಕ್ಯಾನ್ಸರ್ ಲಕ್ಷಣಗಳು ಕಂಡುಬರುವುದಿಲ್ಲವಾದರೂ ಅಸ್ಪಷ್ಟವಾದ ಲಕ್ಷಣಗಳನ್ನು ಮಾತ್ರ ಹೊಂದಿರುತ್ತಾರೆ.
ಆದರೆ, ರೋಗ ಪತ್ತೆಯಾಗುವ ಹೊತ್ತಿಗೆ ಮೀತಿ ಮೀರಿರುತ್ತದೆ. ಈ ರೋಗದ ಸ್ವಭಾವದ ಕಾರಣದಿಂದ ಇತರೆ ಕ್ಯಾನ್ಸರ್‌ಗಳಿಗಿಂತ ಶ್ವಾಸಕೋಶದ ಕ್ಯಾನ್ಸರ್ ರೋಗಿಗಳು ತಡವಾಗಿ ಚಿಕಿತ್ಸೆ ಪಡೆಯಲು ಬರುತ್ತಾರೆ. ಶೇ.15ರಷ್ಟು ಪ್ರಕರಣಗಳು ಮಾತ್ರ ಗುಣಪಡಿಸಲು ಯೋಗ್ಯವಾಗಿರುತ್ತವೆ ಎಂದರು.
ಕ್ಯಾನ್ಸರ್ ಶಸ್ತ್ರಕ್ರಿಯಾ ಸಲಹಾ ತಜ್ಞ ಡಾ.ಸೂರಜ್ ಮಂಜುನಾಥ್ ಅವರು ಶ್ವಾಸಕೋಶದ ಕ್ಯಾನ್ಸರ್‌ನಲ್ಲಿ ಅತೀ ಹೆಚ್ಚು ಸಾವುಗಳನ್ನು ಕಾಣುತ್ತೇವೆ. ಶ್ವಾಸಕೋಶದ ಕ್ಯಾನ್ಸರ್‌ಗೆ ಧೂಮಪಾನ ಪ್ರಮುಖ ಕಾರಣ. ಇದರೊಂದಿಗೆ ಪರೋಕ್ಷ ಧೂಮಪಾನ, ಆಸ್‌ಬೆಸ್ಟೊಸ್ ಮತ್ತು ರ್ಯಾಡಾನ್, ವಿಕಿರಣ ಹಾಗೂ ವಾಯು ಮಾಲಿನ್ಯಗಳಿಗೆ ತೆರೆದುಕೊಂಡಿರುವುದು ಕೂಡ ಕ್ಯಾನ್ಸರ್‌ಗೆ ಕಾರಣವಾಗಬಹುದು.
ಜಾಗತಿಕವಾಗಿ ಪುರುಷರಲ್ಲಿ ಕಂಡುಬರುವ ಕ್ಯಾನ್ಸರ್‌ಗಳ ಪೈಕಿ ಶೇ.14.5ರಷ್ಟು ಹಾಗೂ ಮಹಿಳೆಯರ ಪೈಕಿ ಶೇ.8.4ರಷ್ಟು ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳಿರುತ್ತವೆ. ಇತೀ¤ಚಿನ ದಿನಗಳಲ್ಲಿ ಧೂಮಪಾನ ವ್ಯಸನ ಹೊಂದಿರುವ ಮಹಿಳೆಯರ ಪ್ರಮಾಣ ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣ ಆಗಬೇಕಾಗಿದೆ. ಶ್ವಾಸಕೋಶ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವತ್ತ ವಿಕ್ರಮ್ ಆಸ್ಪತ್ರೆ ಮುಂದಾಗಿದೆ ಎಂದು ವಿವರಿಸಿದರು.
ಶ್ವಾಸಕೋಶ ರೋಗ ಸಲಹಾತಜ್ಞ ಮತ್ತು ಎದೆಭಾಗದ ತಜ್ಞ ವೈದ್ಯ ಡಾ.ಕೆ.ಎಸ್.ಸತೀಶ್, ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ವಿಕ್ರಮ್ ಆಸ್ಪತ್ರೆ, ಶ್ವಾಸಕೋಶದ ಕ್ಯಾನ್ಸರ್ ತಪಾಸಣೆ ಕಾರ್ಯಕ್ರಮ ಹಾಗೂ ಧೂಮಪಾನ ತ್ಯಜಿಸುವ ಚಿಕಿತ್ಸೆಯನ್ನು ನಡೆಸುತ್ತಿದೆ ಎಂದರು.