Advertisement

ಜಿಎಸ್‌ಟಿ ಹೊಡೆತಕ್ಕೆ ನಲುಗಿದ ಚರ್ಮ ವ್ಯಾಪಾರ

09:07 AM Oct 21, 2017 | |

ಬೆಳಗಾವಿ: ಕುರಿ-ಆಡು, ಎಮ್ಮೆಗಳ ಚರ್ಮದ ಮೇಲೆ ಜಿಎಸ್‌ಟಿ ಹೆಚ್ಚಿಸಿದ್ದರಿಂದ ಚರ್ಮದ ವ್ಯಾಪಾರಕ್ಕೆ ಭಾರಿ ಹೊಡೆತ ಬಿದ್ದಿದೆ. ಇದರಿಂದಾಗಿ ಬೆಳಗಾವಿಯಿಂದ ತಮಿಳುನಾಡು ಕಾರ್ಖಾನೆಗಳಿಗೆ ಕಚ್ಚಾ ಚರ್ಮ ಸರಬರಾಜಾಗದೆ ವಹಿವಾಟು ಕುಸಿದಿದೆ.

Advertisement

ಜಿಎಸ್‌ಟಿಯ ಭಾರ ತಡೆದುಕೊಳ್ಳಲಾಗದೆ ವ್ಯಾಪಾರಸ್ಥರು ತಮಿಳುನಾಡಿಗೆ ಚರ್ಮ ಸರಬರಾಜು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ತಮಿಳುನಾಡಿನ ಕಾರ್ಖಾನೆಗಳ ಚರ್ಮದ ಉತ್ಪನ್ನಗಳಿಗೆ ಹೊಡೆತ ಬಿದ್ದಿದೆ. ಬೆಳಗಾವಿ ಸುತ್ತಲಿನ ಮಾಂಸದ ವ್ಯಾಪಾರಸ್ಥರು ನಗರಕ್ಕೆ ಬಂದು ಚರ್ಮ ಮಾರಾಟ ಮಾಡುತ್ತಾರೆ. ಗೋವಾ, ಮಹಾರಾಷ್ಟ್ರದ ಕೆಲವು ಪ್ರದೇಶ ಗಳಿಂದ ಕಚ್ಚಾಚರ್ಮ ಕೂಡ ಇಲ್ಲಿಗೇ ಬರುವುದರಿಂದ ಬೆಳಗಾವಿಯಿಂದ 10 ದಿನಗಳಿಗೊಮ್ಮೆ ಆಡು ಹಾಗೂ  ಕುರಿಯ ಸುಮಾರು 15ರಿಂದ 20 ಸಾವಿರ ಸಂಖ್ಯೆಯ ಕಚ್ಚಾಚರ್ಮದ ಹಾಸುಗಳು ತಮಿಳುನಾಡಿಗೆ ಕಳುಹಿಸಲಾಗುತ್ತದೆ. ತಿಂಗಳಿಗೊಮ್ಮೆ 5-6 ಸಾವಿರ ಸಂಖ್ಯೆಯ ಎಮ್ಮೆಯ ಚರ್ಮ ರವಾನೆಯಾಗುತ್ತದೆ. ರಾಜ್ಯದಿಂದ ನಿತ್ಯ ಲಕ್ಷಾಂತರ ಚರ್ಮದ ಹಾಸುಗಳು ತಮಿಳುನಾಡಿನ ದಿಂಡಿಗಲ್‌, ವಾನಮಡಿ, ರಾಣಿಪೇಟ, ಈರೋಡ್‌, ಆಂಬೂರಗಳಲ್ಲಿರುವ ಫ್ಯಾಕ್ಟರಿಗಳಿಗೆ ಸರಬರಾಜು ಮಾಡಲಾಗುತ್ತದೆ. ಜತೆಗೆ ಕೋಲ್ಕತಾ, ಜೈಪುರ, ಪಂಜಾಬ್‌ ಸೇರಿ ವಿವಿಧ ಕಡೆ ಚರ್ಮದ ಫ್ಯಾಕ್ಟ ರಿಗಳಿದ್ದರೂ ಬಹುತೇಕ ರಾಜ್ಯಗಳು ತಮಿಳುನಾಡಿನ ಫ್ಯಾಕ್ಟರಿಗಳನ್ನೇ ಆಶ್ರಯಿಸಿವೆ. ಕುರಿ ಮಾಂಸದ ವ್ಯಾಪಾರಸ್ಥರು, ಇತರರಿಂದ ಕಚ್ಚಾ ಚರ್ಮ ಖರೀದಿಸಿದರೆ ಅದಕ್ಕೆ ಈ ಮುಂಚೆ ಶೇ.2ರಷ್ಟು ವ್ಯಾಟ್‌ ಇತ್ತು. ಈಗ
ಶೇ.5ರಷ್ಟು ಜಿಎಸ್‌ಟಿ ನೀಡಬೇಕಾಗಿದೆ. ಫ್ಯಾಕ್ಟರಿಗೆ ಕಳುಹಿಸಿದಾಗ ಅಲ್ಲಿ ತಯಾರಾಗುವ ಚರ್ಮೋತ್ಪನ್ನಗಳಿಗೆ ಶೇ.23ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ.

ವಿದೇಶಕ್ಕೆ ಚರ್ಮೋತ್ಪನ್ನಗಳನ್ನು ರಫ್ತು ಮಾಡಿದರೆ ಸರಕಾರ ಶೇ.17ರಷ್ಟು ಸಬ್ಸಿಡಿ ನೀಡುತ್ತಿತ್ತು. ಈಗ ಇದನ್ನೂ ಹಿಂತೆಗೆದುಕೊಂಡಿದೆ. ಇಟಲಿ, ಫ್ರಾನ್ಸ್‌, ಜರ್ಮನಿಗಳಿಗೆ ಚರ್ಮೋತ್ಪನ್ನಗಳ ರಫ್ತು ಕೂಡ ಸ್ಥಗಿತಗೊಂಡಿದ್ದು, ವ್ಯಾಪಾರಸ್ಥರಿಗೆ ದೊಡ್ಡ ಹೊಡೆತ ನೀಡಿದೆ. ಚರ್ಮದಿಂದ ಶೂ, ಜಾಕೆಟ್‌, ವ್ಯಾನಿಟಿಬ್ಯಾಗ್‌, ಸಾಕ್ಸ್‌, ಕ್ಯಾಪ್‌, ಕೈ ಚೀಲ ಸೇರಿ ವಿವಿಧ ವಸ್ತುಗಳನ್ನು ತಯಾರಿಸಲಾಗುತ್ತದೆ. ಈ ಮುಂಚೆ ಆಡು-ಕುರಿ ಚರ್ಮದ 32ರಿಂದ 34 ಇಂಚಿನ ಉದ್ದದ ಚರ್ಮಕ್ಕೆ ಮೂಲ ದರ 120 ರೂ., 160 ರೂ. ನೀಡಿ
ಖರೀದಿಸಲಾಗುತ್ತಿತ್ತು. ಇದರಿಂದ ಕುರಿ ಮಾಂಸದ ವ್ಯಾಪಾರಿಗಳಿಗೂ ಹಾಗೂ ಚರ್ಮ ಖರೀದಿಸುವವರಿಗೂ ಲಾಭವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಳೆ ಏರುಪೇರು ಆಗಿದ್ದರಿಂದ ಉತ್ತಮ ಗುಣಮಟ್ಟದ ಚರ್ಮ ಸಿಗುತ್ತಿಲ್ಲ. ಚರ್ಮದ ಮೇಲೆ ಮೊಡವೆ,
ಸಣ್ಣಪುಟ್ಟ ಗಾಯಗಳಾಗಿರುವುದರಿಂದ ಅಂಥ ಚರ್ಮಕ್ಕೆ ಬೆಲೆ ಅಷ್ಟಕ್ಕಷ್ಟೇ. ಹೀಗಾಗಿ ಅದೇ ಅಳತೆಯ ಚರ್ಮಕ್ಕೆ ಈಗ 40-50 ರೂ. ನೀಡಲಾಗುತ್ತಿದೆ ಎನ್ನುತ್ತಾರೆ ಚರ್ಮದ ವ್ಯಾಪಾರಿ ಅಲ್ಲಿಸಾಬ್‌ ಪಟೇಲ.

ಮಾರ್ಚ್‌, ಏಪ್ರಿಲ್‌, ಮೇ ತಿಂಗಳಲ್ಲಿ ಚರ್ಮದ ವ್ಯಾಪಾರ ಚೆನ್ನಾಗಿರುತ್ತದೆ. ಮಳೆ ಶುರುವಾದರೆ ಗುಣಮಟ್ಟದ ಚರ್ಮ ಬರುವುದಿಲ್ಲ. ಜತೆಗೆ ಈಗ ಜಿಎಸ್‌ಟಿ ಹೊಡೆತದಿಂದಾಗಿ ಭಾರಿ ಪ್ರಮಾಣದಲ್ಲಿ ವ್ಯಾಪಾರ ಕುಸಿತಗೊಂಡಿದೆ.
 ಅಲ್ಲಿಸಾಬ್‌ ಪಟೇಲ, ಆಡು-ಕುರಿ ಚರ್ಮದ ವ್ಯಾಪಾರಿ

ಕೇಂದ್ರ ಸರ್ಕಾರ ವಿಧಿಸಿರುವ ಜಿಎಸ್‌ಟಿ ಭರಿಸುವುದೇ ಕಷ್ಟಕರವಾಗಿದೆ. 2-3 ಹಂತದಲ್ಲಿ ಜಿಎಸ್‌ಟಿ ಕಟ್ಟಬೇಕಿರುವುದರಿಂದ ಚರ್ಮದ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಚರ್ಮ ಸರಬರಾಜು ಮಾಡಿದಾಗ ಬಿಲ್‌ ಬರುತ್ತಿಲ್ಲ. ಈಗ ಬೀದಿಗೆ ಬರುವುದೊಂದೇ ಬಾಕಿ ಉಳಿದಿದೆ.
 ●ಅತಾವುಲ್ಲಾ ವರದಾ, ಎಮ್ಮೆ ಚರ್ಮದ ವ್ಯಾಪಾರಿ

Advertisement

ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next