Advertisement

ಗೋವುಗಳಿಗೆ ಚರ್ಮ ಗಂಟು ರೋಗ

12:21 AM Oct 29, 2021 | Team Udayavani |

ಸವಣೂರು: ಕರಾವಳಿಯಲ್ಲಿ ಕಳೆದೊಂದು ವರ್ಷದಿಂದ ಗೋವುಗಳನ್ನು ಬಾಧಿಸುತ್ತಿರುವ ಚರ್ಮಗಂಟು ರೋಗ ಹೈನುಗಾರನ್ನು ಕಂಗೆಡಿಸಿದೆ. ಹೈನುಗಾರಿಕೆಯಿಂದ ಜೀವನ ಸಾಗಿಸುವ ಕುಟುಂಬಗಳಿಗೆ ಆತಂಕ ಎದುರಾಗಿದೆ.

Advertisement

ಮಲೆನಾಡಿನಲ್ಲಿ ವ್ಯಾಪಕವಾಗಿದ್ದ ಈ ಕಾಯಿಲೆ ಇತ್ತೀಚಿನ ವರ್ಷಗಳಲ್ಲಿ ಕರಾವಳಿಯ ಅಲ್ಲಲ್ಲಿ ಕಾಣಿಸಿಕೊಳ್ಳಲಾರಂಭಿಸಿದೆ.

ಏನಿದು ಕಾಯಿಲೆ:

ಆರಂಭದಲ್ಲಿ ಗೋವಿನ ಮೈಯಲ್ಲಿ ಒಂದರೆಡು ಕಡೆ ಗಂಟು ರೂಪದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ ಕೆಲವೇ ದಿನಗಳಲ್ಲಿ ಮೈಯೆಲ್ಲ ಆವರಿಸಿಕೊಳ್ಳುತ್ತದೆ. ಬಳಿಕ ಗಂಟುಗಳು ಒಡೆದು ಕೀವು ಸೋರುತ್ತದೆ. ಇದು ನೊಣಗಳ ಮೂಲಕ ಹರಡುವುದರಿಂದ ಅಕ್ಕಪಕ್ಕದಲ್ಲಿರುವ ಗೋವುಗಳಿಗೆ ಹರಡುವ ಸಾಧ್ಯತೆಯಿದೆ. ಒಂದೊಮ್ಮೆ ಒಂದು ಹಸುವಿನಲ್ಲಿ ಕಾಣಿಸಿಕೊಂಡರೂ ಜತೆಗಿರುವ ಎಲ್ಲ ಹಸುಗಳಿಗೆ ಚಿಕಿತ್ಸೆ ನೀಡಬೇಕಾಗುತ್ತದೆ.

ನಿರ್ದಿಷ್ಟ ಔಷಧವಿಲ್ಲ:

Advertisement

ಈ ಕಾಯಿಲೆಗೆ ನಿರ್ದಿಷ್ಟ ಔಷಧವನ್ನು ಇನ್ನೂ ಕಂಡು ಹಿಡಿದಿಲ್ಲ. ಸದ್ಯ ಕುರಿಗಳಿಗೆ ನೀಡುವ ರೋಗ ನಿರೋಧಕ ಚುಚ್ಚು ಮದ್ದನ್ನು ನೀಡಲಾಗುತ್ತದೆ. ಕರಾವಳಿಯಲ್ಲಿ ಈ ಚುಚ್ಚು ಮದ್ದಿನ ದಾಸ್ತಾನು ಕಡಿಮೆಯಿದೆ. ಅದನ್ನು ನೀಡುವುದರಿಂದ ಹಾಲು ನೀಡುವ ಗೋವುಗಳ ಹಾಲಿನ ಪ್ರಮಾಣದಲ್ಲಿ ಏರುಪೇರಾಗುತ್ತದೆ. ಅಲ್ಲದೆ ಗರ್ಭ ಕೋಶಕ್ಕೆ ತೊಂದರೆಯಾಗುತ್ತದೆ ಎನ್ನುತ್ತಾರೆ ಪಶು ವೈದ್ಯರು.

ಆಯುರ್ವೇದ ಚಿಕಿತ್ಸೆ:

ವೀಳ್ಯದೆಲೆ 10, ಕಾಳುಮೆಣಸು 10, ಉಪ್ಪು 10 ಗ್ರಾಂ, ಬೆಲ್ಲ 50 ಗ್ರಾಂ ತೆಗೆದುಕೊಂಡು ರುಬ್ಬಿ ದಿನಕ್ಕೆ 2 ಭಾರಿ ರೋಗ ಬಾಧಿತ ಗೋವುಗಳಿಗೆ ತಿನ್ನಿಸಬೇಕು. ಅಲ್ಲದೆ ಅರಶಿಣ 20 ಗ್ರಾಂ, ಮೆಹಂದಿ ಸೊಪ್ಪು 1 ಹಿಡಿ (ಮುಷ್ಟಿ), ಬೇವಿನ ಸೊಪ್ಪು 1 ಹಿಡಿ, ತುಳಸಿ ಎಲೆ 10 ಹಿಡಿ, ಬೆಳ್ಳುಳ್ಳಿ 10 ಎಸಳುಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಬೇಯಿಸಿ ತಣ್ಣಗೆ ಮಾಡಿ ಗಾಯಗಳಿಗೆ ದಿನಕ್ಕೆ ಮೂರು ಬಾರಿ ಹಚ್ಚಬೇಕು ಎಂದು ಪಶುವೈದ್ಯರು ಸಲಹೆ ನೀಡುತ್ತಾರೆ.

ಚರ್ಮ ಗಂಟು ರೋಗ ಮಾರಣಾಂತಿಕವಲ್ಲ. ಆರಂಭದಲ್ಲಿ ಚುಚ್ಚುಮದ್ದು ಅಥವಾ ಆಯರ್ವೇದ ಚಿಕಿತ್ಸೆ ನೀಡಿದರೆ ವಾರದೊಳಗೆ ಗುಣಪಡಿಸಬಹುದು. ಬಾಧಿತ ಗೋವಿನಲ್ಲಿ ಸ್ವತ್ಛತೆಗೆ ಆದ್ಯತೆ ನೀಡ ಬೇಕು. ಇತರ ಗೋವುಗಳಿಂದ ಅಂತರ ದಲ್ಲಿಟ್ಟು ಕೊಳ್ಳಬೇಕು. ಬಯಲು ಸೀಮೆ, ಮಲೆನಾಡು ಭಾಗದಲ್ಲಿ ಇಂತಹ ಕಾಯಿಲೆ ಯಿದೆ. ಆ ಭಾಗದಿಂದ ಗೋವುಗಳನ್ನು ಖರೀದಿಸಿ ಕರಾವಳಿಗೆ ತಂದಾಗ ಕಾಯಿಲೆ ಇಲ್ಲಿಗೂ ಹರಡಿರಬಹುದು.– ಡಾ| ಅಜಿತ್‌, ಪಶುವೈದ್ಯಾಧಿಕಾರಿ, ಕಡಬ

ಚರ್ಮ ಗಂಟು ರೋಗ ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗುತ್ತಿದೆ. ಕಡಬ ತಾಲೂಕಿನ ಹಲವೆಡೆ ಈ ರೋಗ ಹರಡಿದೆ. ಒಂದು ಹಸುವನ್ನು ಬಾಧಿಸಿದರೆ ಅದು ಇತರ ಎಲ್ಲ ಗೋವು ಗಳಿಗೆ ಹರಡುವ ಭೀತಿ ಇರು ವುದ ರಿಂದ ನಿರ್ದಿಷ್ಟ ಔಷಧವನ್ನು ಕಂಡು ಹಿಡಿ ಯಲು ಸಂಬಂಧಪಟ್ಟವರು ಪ್ರಯತ್ನಿಸ  ಬೇಕು. ಮುಂಜಾಗ್ರತ ಕ್ರಮವಾಗಿ ಗೋವುಗಳಿಗೆ ಸಾಮೂಹಿಕ ಚುಚ್ಚು ಮದ್ದನ್ನು ಉಚಿತವಾಗಿ ನೀಡಲು ಸರಕಾರ ಮುಂದಾಗಬೇಕು.– ಶಿವಣ್ಣ ಗೌಡ, ಹೈನುಗಾರ

Advertisement

Udayavani is now on Telegram. Click here to join our channel and stay updated with the latest news.

Next