Advertisement

ಮಳೆ ಸುರಿವ ಸಮಯದಲ್ಲಿ ಚರ್ಮದ ಆರೈಕೆ

06:30 AM Jun 22, 2018 | |

ಪ್ರಕೃತಿಗೆ “ನವನವೋನ್ಮೆಷಶಾಲಿನಿ’ ಎಂದು ಕರೆಯುತ್ತಾರೆ. ಭುವಿಯ ಚಲನೆಯಿಂದಾಗಿ ವಿವಿಧ ಋತುಗಳು ಉಂಟಾಗುತ್ತವೆ. ವರ್ಷಋತು ಧಾರೆ ಧಾರೆ ಮಳೆಹರಿಸಿ ಇಳೆಯನ್ನು ಸಂತೃಪ್ತಗೊಳಿಸುತ್ತದೆ.

Advertisement

ಮಳೆಹನಿ ! ಮಳೆಹನಿ !
ಜಾನ್‌ ಅಪೆಡೈಕ್‌ ಸುಂದರವಾಗಿ ಹೇಳುತ್ತಾನೆ-
“ಮಳೆಯೊಂದು ವರದಾನ. ಮಳೆಯೆಂದರೆ ಆಗಸವೇ ಧರೆಗಿಳಿದು ಬಂದಂತೆ ಅದ್ಭುತ. ಮಳೆಯಿಲ್ಲದಿದ್ದರೆ ಜೀವವೂ ಇಲ್ಲ, ಜೀವನವೂ ಇಲ್ಲ”ಮಳೆಯಿಂದಲೇ ಇಳೆ, ಬೆಳೆ, ಜೀವಸಂಕುಲಕ್ಕೆ ಕಳೆ.

ಮಳೆಯ ತುಂತುರು ಹನಿ, ಮೊದಲ ಮಳೆಯ ವಿಶಿಷ್ಟ ಮಣ್ಣಿನ ವಾಸನೆ, ಆಗಸದಲ್ಲಿ ಕಪ್ಪು-ಬಿಳಿ ಮೋಡಗಳ ದೃಶ್ಯಕಾವ್ಯ. ಟಿಸಿಲೊಡೆದು ಬೆಳಕಿನ ಕುಡಿ ಕಿಡಿಯಾಗಿ, ಮಿಂಚಾಗಿ ಫ‌ಳಫ‌ಳಿಸಿದರೆ ಅದರ ಜೊತೆಗೆ ಬರುವ ಗುಡುಗಿನ ನಾದಗರ್ಜನೆ. ಕಾಮನಬಿಲ್ಲಿನ ಸೌಂದರ್ಯದ ಕಣ್‌ತಂಪು. 

ಓಹ್‌ ಮಳೆಗಾಲ ಎಷ್ಟು ಅದ್ಭುತ.ಮಳೆಗಾಲಕ್ಕೆ ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸುವುದರೊಂದಿಗೆ, ಮಳೆಗಾಲದ ವಿಶಿಷ್ಟ ಆರೈಕೆ, ಆರೋಗ್ಯ, ಚರ್ಮದ ಸೌಂದರ್ಯ, ಕೂದಲ ಸೌಂದರ್ಯದ ಜೊತೆಗೆ ಅಡುಗೆ ಮನೆಯ ಆರೈಕೆ, ತೋಟದ ಆರೈಕೆ, ಮಕ್ಕಳ ಆರೈಕೆ ಇತ್ಯಾದಿಗಳನ್ನು ಅಳವಡಿಸಿಕೊಂಡರೆ ಈ ಮಳೆಗಾಲವನ್ನು ಖುಷಿಯಿಂದ ಆಸ್ವಾದಿಸುತ್ತ ಆರೋಗ್ಯಪೂರ್ಣವಾಗಿ ಕಳೆಯಲು ಸುಲಭ ಸಾಧ್ಯ.ಆ ನಿಟ್ಟಿನಲ್ಲಿ ಚಿಂತನೆಯ ಹನಿಗಳು ಇಲ್ಲಿವೆ. 

ಬೇಸಿಗೆಯುದ್ದಕ್ಕೂ ಬೆವರು, ಶಾಖ, ಬಿಸಿಲಿನ ತೀವ್ರತೆಯಿಂದ ಬಸವಳಿದ, ಬೆವರಿಳಿದ ಚರ್ಮಕ್ಕೆ ಮಳೆಗಾಲದ ತಂಪು ಹಾಗೂ ಶೀತಲತೆ ಆಪ್ಯಾಯಮಾನ. ಆದರೆ, ಮಳೆಗಾಲದಲ್ಲಿ ಇರುವ ಅಧಿಕ ತೇವಾಂಶದಿಂದಾಗಿ ಚರ್ಮಕ್ಕೆ ವಿಶಿಷ್ಟ ಆರೈಕೆ ಅವಶ್ಯ.

Advertisement

ಮಹಿಳೆಯರು ವಿವಿಧ “ಬ್ಲೀಚ್‌’ ಬಳಸುವುದು ಸಾಮಾನ್ಯ. ಆದರೆ, ಮಳೆಗಾಲದಲ್ಲಿ “ಬ್ಲೀಚ್‌’ ಬಳಸಿದರೆ ಮೊಗದ ಸ್ನಿಗ್ಧತೆ ಮಾಯವಾಗಿ ಬಿರುಸುತನ ಉಂಟಾಗುವುದರಿಂದ ಮಳೆಗಾಲವಿಡೀ “ಬ್ಲೀಚ್‌’ ಬಳಸದಿದ್ದರೆ ಹಿತಕರ.

ಓಟ್‌ಮೀಲ್‌ ಸðಬ್‌ 
ಮಳೆಗಾಲದಲ್ಲಿ ಮೊಗದಲ್ಲಿ ಒಸರುವ ಅಧಿಕ ತೈಲಾಂಶವನ್ನು ನಿವಾರಣೆ ಮಾಡಲು ಹಾಗೂ ಅಧಿಕ ತೈಲಾಂಶವಿರುವ ಮಹಿಳೆಯರಿಗೆ ಈ ಸðಬ್‌ ಉತ್ತಮ.
ವಿಧಾನ: 3 ಚಮಚ ಓಟ್‌ಮೀಲ್‌ ಪುಡಿಗೆ 1 ಚಮಚ ಜೇನುತುಪ್ಪ , ಸ್ವಲ್ಪ ನೀರು ಬೆರೆಸಿ ಪೇಸ್ಟ್‌ ತಯಾರಿಸಿ. ಇದನ್ನು ವರ್ತುಲಾಕಾರದಲ್ಲಿ ಮಾಲೀಶು ಮಾಡುತ್ತ ಲೇಪಿಸಬೇಕು. ಈ ಸðಬ್‌ ವಿಧಾನದಿಂದಾಗಿ ಮೊಗದಲ್ಲಿನ ಅಧಿಕ ಎಣ್ಣೆಯ ಪಸೆ ನಿವಾರಣೆಯಾಗಿ ಮೊಗದ ಕಾಂತಿವರ್ಧಿಸುತ್ತದೆ.

ಶುಷ್ಕ ಚರ್ಮದವರಿಗೆ ಬಾದಾಮಿ ಹಾಗೂ ಜೇನಿನ  ಫೇಸ್‌ಪ್ಯಾಕ್‌ 8-10 ಬಾದಾಮಿಗಳನ್ನು ರಾತ್ರಿ ನೆನೆಸಿ ಮರುದಿನ ಬೆಳಿಗ್ಗೆ ಸಿಪ್ಪೆ ತೆಗೆದು ಅರೆಯಬೇಕು. ತದನಂತರ ಇದಕ್ಕೆ ಶುದ್ಧ ಜೇನು ಹಾಗೂ ಗುಲಾಬಿಜಲ ಬೆರೆಸಿ ಪೇಸ್ಟ್‌ ತಯಾರಿಸಿ ಮುಖಕ್ಕೆ ಲೇಪಿಸಬೇಕು. ಶುಷ್ಕ, ಒಣಚರ್ಮ ಉಳ್ಳವರಿಗೆ ಮಳೆಗಾಲದಲ್ಲಿ ಈ ಫೇಸ್‌ಪ್ಯಾಕ್‌ ಉತ್ತಮ. ಲೇಪಿಸಿ 15 ನಿಮಿಷದ ಬಳಿಕ ತೊಳೆಯಬೇಕು.

ಮಳೆಗಾಲದಲ್ಲಿ ಚರ್ಮಕ್ಕೆ ಟಾನಿಕ್‌
ಗುಲಾಬಿದಳ-ಹಾಲಿನ ಫೇಸ್‌ಪ್ಯಾಕ್‌: ತಾಜಾ ಗುಲಾಬಿ ದಳಗಳನ್ನು 15 ನಿಮಿಷ ಕುದಿಸಿ ತಣಿಸಿದ ಹಾಲಿನಲ್ಲಿ ನೆನೆಸಿಡಬೇಕು. ತದನಂತರ ಅರೆದು ಪೇಸ್ಟ್‌ ತಯಾರಿಸಿ ಮುಖಕ್ಕೆ ಲೇಪಿಸಬೇಕು. 20 ನಿಮಿಷದ ಬಳಿಕ ಮೊಗ ತೊಳೆದರೆ ಶುಭ್ರ ಹಾಗೂ ಕಾಂತಿಯುತವಾಗಿ ಹೊಳೆಯುತ್ತದೆ.ಮಳೆಗಾಲದಲ್ಲಿ ಚರ್ಮಕ್ಕೆ ಉತ್ತಮ ಮೂಲಿಕೆಯಿಂದ ತಯಾರಿಸಿದ ಮಾಯಿಶ್ಚರೈಸರ್‌ ನಿತ್ಯ ಲೇಪಿಸಬೇಕು. ಇದು ಮುಖವನ್ನು ಸ್ನಿಗ್ಧವಾಗಿಡುತ್ತದೆ.

ಮುಖವನ್ನು ಮಾಯಿಶ್ಚರೈಸ್‌ಗೊಳಿಸಲು (ಮೊಗದ ತೇವಾಂಶ ವರ್ಧಕವಾಗಿ ಗುಲಾಬಿಜಲ ಮತ್ತು ಗ್ಲಿಸರಿನ್‌ ಲೇಪ ಹಚ್ಚಿದರೆ ಹಿತಕರ.

ಯಾವುದೇ ತೀಕ್ಷ್ಣ ಕ್ಲೆನ್ಸರ್‌ ಬಳಸುವುದು ಉತ್ತಮವಲ್ಲ. ಕೆಮಿಕಲ್ಸ್‌ (ರಾಸಾಯನಿಕ)ಯುಕ್ತ ಕ್ಲೆನ್ಸರ್‌ ಬದಲಾಗಿ, ಮಳೆಗಾಲದಲ್ಲಿ ಮನೆಯಲ್ಲೇ ತಯಾರಿಸಿ ಬಳಸಬಹುದಾದ ಕ್ಲೆನ್ಸರ್‌ ಇಂತಿದೆ.

.ಕಡಲೆಹಿಟ್ಟು 1 ಚಮಚ, ಹೆಸರುಹಿಟ್ಟು 1 ಚಮಚ- ಇವೆರಡನ್ನೂ ಸ್ವಲ್ಪ ನೀರಿನಲ್ಲಿ ಕರಗಿಸಬೇಕು. ಈ ಪೇಸ್ಟ್‌ಗೆ ಹಾಲು, ಜೇನು ಹಾಗೂ ನಿಂಬೆರಸ ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ಮುಖಕ್ಕೆ ಲೇಪಿಸಿ, ಮೃದುವಾಗಿ ತಿಕ್ಕಿ ತೊಳೆದರೆ, ಮೊಗದ ಚರ್ಮಕ್ಕೆ ಮೃದುತ್ವ, ಮಾರ್ದವತೆ ಉಂಟಾಗುತ್ತದೆ. ಇದು ಉತ್ತಮ ಕ್ಲೆನ್ಸರ್‌.

.ಮಕ್ಕಳ ಮೃದು ಚರ್ಮಕ್ಕೆ ರಾತ್ರಿ ಮಲಗುವಾಗ ಮುಖ, ಅಂಗೈ, ಅಂಗಾಲುಗಳಿಗೆ ಕೊಬ್ಬರಿ ಎಣ್ಣೆ ಹಾಗೂ ಬಾದಾಮಿ ತೈಲ ಬೆರೆಸಿ ಲೇಪಿಸಿದರೆ ಹಿತಕರ.

ಉತ್ತಮ ಪೌಷ್ಟಿಕಾಂಶವುಳ್ಳ ಆಹಾರ ಸೇವನೆ, 3 ಲೀಟರ್‌ನಷ್ಟು ನೀರು ಸೇವನೆ ಮಳೆಗಾಲದಲ್ಲಿ ಹಿತಕರ.

– ಡಾ. ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next