Advertisement

ಕರಾವಳಿ ಕರ್ನಾಟಕದ ಮೊತ್ತಮೊದಲ ಚರ್ಮನಿಧಿ ಲೋಕಾರ್ಪಣೆ

11:09 PM Aug 21, 2021 | Team Udayavani |

ಉಡುಪಿ: ಕರಾವಳಿ ಕರ್ನಾಟಕದ ಮೊತ್ತ ಮೊದಲ ಚರ್ಮ ನಿಧಿ (ಸ್ಕಿನ್‌ ಬ್ಯಾಂಕ್‌)ಯನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಶನಿವಾರ ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಅಧ್ಯಕ್ಷ ಡಾ| ರಂಜನ್‌ ಆರ್‌. ಪೈ ಉದ್ಘಾಟಿಸಿದರು.

Advertisement

ರೋಟರಿ ಕ್ಲಬ್‌ ಮಣಿಪಾಲ ಟೌನ್‌ ಮತ್ತು ಮಣಿಪಾಲ ಮಾಹೆ ಪಾಲುದಾರಿಕೆಯಲ್ಲಿ ರೋಟರಿ ಮಾಹೆ “ಸ್ಕಿನ್‌ ಬ್ಯಾಂಕ್‌’ ಅನ್ನು ಸ್ಥಾಪಿಸಲಾಗಿದೆ. ರೋಟರಿ ಕ್ಲಬ್‌ ಮಣಿಪಾಲ್‌ ಟೌನ್‌ ಉಪಕರಣಗಳನ್ನು ಖರೀದಿಸಲು ರೋಟರಿ ಫೌಂಡೇಶನ್‌ನ ಜಾಗತಿಕ ಅನುದಾನ ಕಾರ್ಯಕ್ರಮದಡಿ 83 ಲ.ರೂ. ನೀಡಲಾಗಿದೆ. ಜತೆಗೆ ಮೂಲಸೌಕರ್ಯಗಳಿಗೆ ಮಾಹೆ 50 ಲ.ರೂ. ಕೊಡುಗೆಯಾಗಿ ನೀಡಿದೆ.

ಡಾ| ರಂಜನ್‌ ಪೈ ಮಾತನಾಡಿ, ಮಾಹೆ ಅತ್ಯಾಧುನಿಕ ಮತ್ತು ಗುಣಮಟ್ಟದ ವೈದ್ಯಕೀಯ ಆರೈಕೆ ನೀಡುವಲ್ಲಿ ಮುಂಚೂಣಿಯಲ್ಲಿದೆ. ಸುಟ್ಟ ಗಾಯಗಳ ಸಂತ್ರಸ್ತರಿಗೆ ಹಾಗೂ ವಿಶೇಷವಾಗಿ ಹಿಂದುಳಿದ ಪ್ರದೇಶದ ಜನರಿಗೆ ಸ್ಕಿನ್‌ ಬ್ಯಾಂಕ್‌ ಸಹಕಾರಿಯಾಗಲಿದೆ ಎಂದರು.

ಪ್ಲಾಸ್ಟಿಕ್‌ ಸರ್ಜರಿ ವಿಭಾಗದ ಮುಖ್ಯಸ್ಥ ಡಾ| ಎನ್‌.ಸಿ. ಶ್ರೀಕುಮಾರ್‌ ಮಾತನಾಡಿ, ಇನ್ನು ಸುಟ್ಟಗಾಯಕ್ಕೊಳಗಾದವರು ದೇಶದ ಇತರ ಭಾಗಗಳಿಂದ ಚರ್ಮವನ್ನು ಪಡೆಯಲು ನಿರ್ಣಾಯಕ ಅವಧಿಯ 2-3 ದಿನಗಳ ವರೆಗೆ ಕಾಯಬೇಕಾಗಿಲ್ಲ. ನಮ್ಮದೇ ಚರ್ಮವನ್ನು ನಾವು ಮರಳಿ ಪಡೆಯುವ ಮೂಲಕ, ನಾವು ಬೇಗನೆ ಚಿಕಿತ್ಸೆಯನ್ನು ಪ್ರಾರಂಭಿಸಬಹುದು ಮತ್ತು ನೋವನ್ನು ಕಡಿಮೆ ಮಾಡಬಹುದು ಜತೆಗೆ ಜೀವ ಉಳಿಸಬಹುದು ಎಂದು ಹೇಳಿದರು.

ಪೂರ್ಣ ಪ್ರಮಾಣದ ಬರ್ನ್ಸ್ ಘಟಕ :

Advertisement

ಅಧ್ಯಕ್ಷತೆ ವಹಿಸಿದ್ದ ಮಾಹೆ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, ನಾವೀಗ 18 ಹಾಸಿಗೆಗಳನ್ನು ಹೊಂದಿರುವ ಪೂರ್ಣ ಪ್ರಮಾಣದ ಬರ್ನ್ಸ್ ಘಟಕವನ್ನು ಹೊಂದಿದ್ದೇವೆ. ಬಹುತೇಕ ಸುಟ್ಟಗಾಯ ರೋಗಿಗಳಿಗೆ ಚರ್ಮದ ಕಸಿ ಅಗತ್ಯವಿರುತ್ತದೆ. ಅಂಗ ಮತ್ತು ಅಂಗಾಂಶ ದಾನವನ್ನು ನಮ್ಮೆಲ್ಲರ ಕರ್ತವ್ಯವೆಂದು ಪರಿಗಣಿಸಬೇಕು ಎಂದರು.

ಜಾಗೃತಿ ಮೂಡಿಸೋಣ :

ಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌ ಮತ್ತು ಮುಂಬಯಿಯ ನ್ಯಾಶನಲ್‌ ಬರ್ನ್ಸ್ ಸೆಂಟರ್‌ ಮತ್ತು ಸ್ಕಿನ್‌ ಬ್ಯಾಂಕ್‌ ನಿರ್ದೇಶಕ ಡಾ| ಸುನಿಲ್‌ ಕೇಶ್ವಾನಿ ಮಾತನಾಡಿ, ಚರ್ಮನಿಧಿಯಲ್ಲಿ ಚರ್ಮ ಸಂಗ್ರಹವಾಗಲು ನಾವು ಜನರಲ್ಲಿ ಜಾಗೃತಿ ಮೂಡಿಸೋಣ ಎಂದು ಹೇಳಿದರು.

ರೋಟರಿ ಜಿಲ್ಲಾ 3182ನ ಗವರ್ನರ್‌ ಎಂ.ಜಿ. ರಾಮಚಂದ್ರ ಮೂರ್ತಿ ಅವರು ಸದಾನಂದ ಚಾತ್ರ, ರಾಜಾರಾಮ್‌ ಭಟ್‌, ಗಣೇಶ್‌ ನಾಯಕ್‌ ಅವರೊಂದಿಗೆ ಸ್ಕಿನ್‌ ಬ್ಯಾಂಕ್‌ ಉಪಕರಣಗಳನ್ನು ಮಾಹೆಯ ಡಾ| ಎಚ್‌.ಎಸ್‌. ಬಲ್ಲಾಳ್‌, ಡಾ| ಎಂ.ಡಿ. ವೆಂಕಟೇಶ್‌, ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ್ಣ ಅವರಿಗೆ ಹಸ್ತಾಂತರಿಸಿದರು.

ರೋಟರಿಯ ಶೇಷಪ್ಪ ರೈ ಅವರು ಪ್ರಮುಖ ಕೊಡುಗೆದಾರರಾದ ಅಮೆರಿಕದ ಡಾ| ವಸಂತ ಪ್ರಭು, ದಿನೇಶ್‌ ನಾಯಕ್‌ ಮತ್ತು ರೋಟರಿ ಪ್ರತಿಷ್ಠಾನದ ಟ್ರಸ್ಟಿ ಗುಲಾಮ್‌ ಎ. ವಾಹನ್ವತಿಯ ಸಂದೇಶಗಳನ್ನು ವಾಚಿಸಿದರು. ರೋಟರಿ ಕ್ಲಬ್‌ ಮಣಿಪಾಲ ಟೌನ್‌ ಅಧ್ಯಕ್ಷ ಗಣೇಶ್‌ ನಾಯಕ್‌ ಸ್ವಾಗತಿಸಿದರು, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಶೆಟ್ಟಿ ವಂದಿಸಿದರು. ಮಾಹೆಯ ಡಾ| ರವಿರಾಜ ಎನ್‌.ಎಸ್‌. ಕಾರ್ಯಕ್ರಮ ನಿರೂಪಿಸಿದರು.

ಸ್ಕಿನ್‌ ಬ್ಯಾಂಕ್‌ ಸಹಾಯವಾಣಿ – 09686676564

Advertisement

Udayavani is now on Telegram. Click here to join our channel and stay updated with the latest news.

Next