Advertisement

ಮಂಗಳೂರಿಗೂ ಬಂದಿದ್ದಾರೆ “ಸ್ಕಿಮ್ಮಿಂಗ್‌’ಖದೀಮರು

01:12 PM Oct 26, 2018 | Team Udayavani |

ಮಂಗಳೂರು: ಬ್ಯಾಂಕ್‌ ಎಟಿಎಂ ಮೆಶಿನ್‌ಗೆ ರಹಸ್ಯವಾಗಿ ಚಿಪ್‌ ಹಾಗೂ ಕೆಮರಾ ಅಳವಡಿಸಿ ಗ್ರಾಹಕರ ಮಾಹಿತಿ ಕದ್ದು, ಬೇರೆಡೆ ಕುಳಿತು ಹಣ ಲಪಟಾಯಿಸುವ ಜಾಲ ಈಗ ಮಂಗಳೂರು ನಗರಕ್ಕೂ ವ್ಯಾಪಿಸಿರುವುದು ಬೆಳಕಿಗೆ ಬಂದಿದೆ. ನಗರದ ಮೂರು  ಎಟಿಎಂಗಳಲ್ಲಿ ಗ್ರಾಹಕರು ಈ ರೀತಿ ಹಣ ಕಳೆದುಕೊಂಡು ಮೋಸ ಹೋಗಿರುವುದನ್ನು ಮಂಗಳೂರು ಸೈಬರ್‌ ಪೊಲೀಸರು ಪತ್ತೆ ಮಾಡಿದ್ದಾರೆ.

Advertisement

ಮಣ್ಣಗುಡ್ಡೆ ಮತ್ತು ಕುದ್ರೋಳಿಯ ಕೆನರಾ ಬ್ಯಾಂಕ್‌ ಎಟಿಎಂ ಹಾಗೂ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸುರತ್ಕಲ್‌ ಎನ್‌ಐಟಿಕೆ ಆವರಣದ ಎಟಿಎಂ ಮೆಶಿನ್‌ನಲ್ಲಿ ಈ ರೀತಿ ಹಣ ಎಗರಿಸಲಾಗಿದೆ. ಈ ಹೈಟೆಕ್‌ 
ವಂಚನೆ ಜಾಲದಡಿ ಹಣ ಕಳೆದುಕೊಂಡಿರುವ ಸಂಬಂಧ ಈಗಾಗಲೇ ನಾಲ್ವರು ನಗರದ ಸೈಬರ್‌ ಕ್ರೈಮ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆೆ. 

ಹೀಗೆ ಹಣ ಎಗರಿಸುವ ಖದೀಮರು ಮಂಗಳೂರಿಗೂ ಕಾಲಿರಿಸಿರುವುದು ಆತಂಕಕಾರಿ. ಎಟಿಎಂ ಯಂತ್ರಕ್ಕೆ ರಹಸ್ಯವಾಗಿ ಮಾಹಿತಿ ಸೋರಿಕೆ ಮಾಡುವ ಉಪಕರಣ ಅಳವಡಿಸಿ ಬೇರೆ ಕಡೆ ಕುಳಿತು ಗ್ರಾಹಕರ ಖಾತೆಯಿಂದ ಹಣ ಲಪಟಾಯಿಸುವ ವಂಚನೆಯನ್ನು ಸೈಬರ್‌ ಅಪರಾಧ ಪರಿಭಾಷೆಯಲ್ಲಿ “ಸ್ಕಿಮ್ಮಿಂಗ್‌’ 
ಎನ್ನಲಾಗುತ್ತದೆ.

ಸ್ಕಿಮ್ಮಿಂಗ್‌ ಹೀಗೆ ನಡೆಯುತ್ತದೆ
ಎಟಿಎಂನ ಕಾರ್ಡ್‌ ತೂರಿಸಿ ಸ್ವೆ„ಪ್‌ ಮಾಡುವ ಕಾರ್ಡ್‌ ರೀಡರ್‌ನ ಹೊರ ಭಾಗದಲ್ಲಿ ವಂಚಕರು ನಕಲಿ ಕಾರ್ಡ್‌ ರೀಡರ್‌ ಅಳವಡಿಸುತ್ತಾರೆ. ಇದರಲ್ಲಿರುವ ಮೆಮೊರಿ ಕಾರ್ಡ್‌ ಸ್ವೆಪ್‌ ಆಗುವ ಪ್ರತಿ ಎಟಿಎಂ ಕಾರ್ಡಿನ ವಿವರಗಳನ್ನು ದಾಖಲಿಸಿಕೊಳ್ಳುತ್ತದೆ. ಎಟಿಎಂ ಮೆಶಿನ್‌ ಕೀ ಬೋರ್ಡ್‌ನ ಮೇಲ್ಭಾಗದಲ್ಲಿ ಪಿನ್‌ ಕೆಮರಾ ಇರುವ ಮೌಲ್ಡಿಂಗ್‌ನ್ನು ಕಳ್ಳರು ಅಳವಡಿಸುತ್ತಾರೆ. ಗ್ರಾಹಕರು ದಾಖಲಿಸುವ ಪಾಸ್‌ವರ್ಡ್‌/ ಪಿನ್‌ ನಂಬರ್‌ ಮಾಹಿತಿ ಕೂಡ ಹೀಗೆ ವಂಚಕರ ಪಾಲಾಗುತ್ತದೆ. 

ಕಳ್ಳರು ಮುಂಜಾನೆ 3- 4 ಗಂಟೆ ವೇಳೆ, ವಾಚ್‌ಮನ್‌ ಇಲ್ಲದಿರುವ ಅಥವಾ ನಿದ್ದೆಗೆ ಜಾರಿದ ಸಮಯದಲ್ಲಿ ಮತ್ತು ಸಿಸಿ ಕೆಮರಾ ಕಾರ್ಯ ನಿರ್ವಹಿಸದಿರುವ ಎಟಿಎಂಗಳಲ್ಲಿ ಈ ರೀತಿ ನಕಲಿ ಕಾರ್ಡ್‌ ರೀಡರ್‌ ಮತ್ತು ಪಿನ್‌ ಕೆಮರಾ ಡಿವೈಸ್‌ ಅಳವಡಿಸಿ ತಮ್ಮ ಕರಾಮತ್ತು ನಡೆಸುತ್ತಾರೆ. 

Advertisement

ಉತ್ತರ ಭಾರತದಲ್ಲಿ ಲಪಟಾವಣೆ
ಕಳ್ಳರು ತಾವು ಅಳವಡಿಸಿದ ನಕಲಿ ಡಿವೈಸ್‌ಗಳನ್ನು ಮಧ್ಯಾಹ್ನ ಅಥವಾ ಸಂಜೆ ತೆಗೆದು, ದಾಖಲಾಗಿರುವ ಮಾಹಿತಿಗಳನ್ನು ಉತ್ತರ ಭಾರತದಲ್ಲಿರುವ ತಮ್ಮ ಸಹವರ್ತಿಗಳಿಗೆ ಕಳುಹಿಸುತ್ತಾರೆ. ಅವರು ಅಲ್ಲೇ ಕುಳಿತು ಈ ಮಾಹಿತಿಯನ್ನು ಉಪಯೋಗಿಸಿ ಎಟಿಎಂನಿಂದ ಹಣ ಡ್ರಾ ಮಾಡುತ್ತಾರೆ.

ತಮ್ಮ ಅರಿವಿಗೆ ಬಾರದೆ ಎಟಿಎಂ ಮೂಲಕ ಹಣ ಡ್ರಾ ಆಗಿದೆ ಎಂಬುದಾಗಿ ಒಂದು ವಾರದಲ್ಲಿ ನಾಲ್ಕು ಮಂದಿ ನಗರದ ಸೈಬರ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಎಟಿಎಂ ಸ್ಕಿಮಿಂಗ್‌ ಬೆಳಕಿಗೆ ಬಂದಿದೆ.  ಉ.ಭಾರತದ ಎಟಿಎಂ ಸ್ಕಿಮ್ಮರ್‌ಗಳು ದಂಧೆಗಾಗಿ ಕೆಲವರನ್ನು ಮಂಗಳೂರಿಗೆ ಕಳುಹಿಸಿದ್ದು, ನಗರದಲ್ಲಿ ಈ ಕೃತ್ಯ ಎಸಗುತ್ತಿದ್ದಾರೆ. ಇದಕ್ಕಾಗಿ ನೇಮಕ ಕೊಂಡಿರುವ ಖದೀಮರು ನೈಜೀರಿಯನ್‌ ಪ್ರಜೆಗಳು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. 

ಬ್ಯಾಂಕ್‌ ಮ್ಯಾನೇಜರ್‌ಗಳಿಗೆ ಜಾಗೃತಿ 
ಈ ಹಿನ್ನೆಲೆಯಲ್ಲಿ ಸೈಬರ್‌ ಕ್ರೈಂ ಪೊಲೀಸರು ವಿವಿಧ ಬ್ಯಾಂಕುಗಳ ಮ್ಯಾನೇಜರ್‌ಗಳನ್ನು ಕರೆಸಿ ಎಟಿಎಂ ಸ್ಕಿಮ್ಮಿಂಗ್‌ ಕುರಿತಂತೆ ತಿಳಿವಳಿಕೆ ನೀಡಿ ಜಾಗೃತಿ ಮೂಡಿಸಲು ಯತ್ನಿಸುತ್ತಿದ್ದಾರೆ. 

ಗ್ರಾಹಕರು ಹೇಗೆ ಎಚ್ಚರ ವಹಿಸಬೇಕು?
* ಎಟಿಎಂನಲ್ಲಿ ಕಾರ್ಡ್‌ ಹಾಕುವಾಗ ಕಾರ್ಡ್‌ ರೀಡರ್‌ ಗಡುಸಾಗಿರುವುದು ಅನುಭವಕ್ಕೆ ಬಂದರೆ ಅಧಿಕಾರಿಗಳ ಗಮನಕ್ಕೆ ತರಬೇಕು.
* ಪಾಸ್‌ವರ್ಡ್‌/ ಪಿನ್‌ ನಂಬರ್‌ ಹಾಕುವಾಗ ಮೇಲ್ಗಡೆ ಇನ್ನೊಂದು ಕೈ  ಅಡ್ಡವಾಗಿ ಇರಿಸಬೇಕು. ಇದರಿಂದ ರಹಸ್ಯ ಪಿನ್‌ ಕೆಮರಾದಲ್ಲಿ ಪಾಸ್‌ವರ್ಡ್‌ ದಾಖಲಾಗುವುದನ್ನು ತಡೆಯಬಹುದು. 

ಸೆಕ್ಯುರಿಟಿ ಇಲ್ಲ, ಕೈಕೊಟ್ಟ ಸಿಸಿ ಕೆಮರಾ 
ನಗರದಲ್ಲಿ ಹಲವಾರು ಎಟಿಎಂಗಳಲ್ಲಿ ಸೆಕ್ಯುರಿಟಿ ಗಾರ್ಡ್‌ ಇಲ್ಲ. ಕೆಲವು ಕಡೆ ಇದ್ದರೂ ಅವರು ಕುಳಿತಲ್ಲಿಯೇ ನಿದ್ದೆ ಹೋಗಿರುತ್ತಾರೆ. ಇನ್ನೂ ಕೆಲವು ಕಡೆ ಜಾಗೃತ ಸ್ಥಿತಿಯಲ್ಲಿ ಇಲ್ಲದೆ “ಬೆದರು ಬೊಂಬೆ’ಗಳಾಗಿ ಇರುತ್ತಾರೆ. ಕೆಲವು ಎಟಿಎಂಗಳಲ್ಲಿ ಸಿಸಿ ಕೆಮರಾಗಳು ಕೆಟ್ಟಿವೆ. ಕೆಲವ ಕಡೆ ಕಳಪೆ ಮಟ್ಟದ ಸಿಸಿ ಕೆಮರಾ ನಿರ್ವಹಣೆ ಇಲ್ಲದೆ ಧೂಳು ಹಿಡಿದಿವೆ.

ವಂಚನೆ ನಡೆದಿರುವುದು ನಿಜ
ಎಟಿಎಂ ಸ್ಕಿಮ್ಮಿಂಗ್‌  ಮಂಗಳೂರು ನಗರದಲ್ಲಿ ನಡೆದಿರುವುದು ನಿಜ. ಕಳೆದ ವಾರ ಸಿಸಿ ಕೆಮರಾ ಸರಿಯಾಗಿ ಕೆಲಸ ಮಾಡದ ಹಾಗೂ ಭದ್ರತಾ ಸಿಬಂದಿ ಇಲ್ಲದ ಕೆಲವು ಎಟಿಎಂಗಳನ್ನು ಗುರುತಿಸಿ ನಕಲಿ ಚಿಪ್‌ ಹಾಗೂ ಸ್ಪೈ ಕೆಮರಾ ಇರಿಸಿ ಗ್ರಾಹಕರ ಮಾಹಿತಿ ಕದ್ದಿರುವುದು ಹಾಗೂ ಬಳಿಕ ಬೇರೆಡೆಯಿಂದ ಹಣ ಡ್ರಾ ಮಾಡಿರುವುದು ಗಮನಕ್ಕೆ ಬಂದಿದೆ. ಎಲ್ಲ ಕಡೆಯೂ ಮುಂಜಾನೆ ಹೊತ್ತಿನಲ್ಲಿಯೇ ಖದೀಮರು ಚಿಪ್‌ ಮತ್ತು ಸ್ಪೈ ಕೆಮರಾ ಅಳವಡಿಸಿರುವುದು ಬೆಳಕಿಗೆ ಬಂದಿದೆ ಎಂದು ಮಂಗಳೂರು ಸೈಬರ್‌ ಠಾಣೆಯ ಪೊಲೀಸ್‌ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

ಸ್ಕಿಮ್ಮಿಂಗ್‌ ಎಂದರೇನು?
ಸ್ಕಿಮ್ಮಿಂಗ್‌ ಒಂದು ಬಗೆಯ ಬಿಳಿ ಕಾಲರ್‌ ಅಪರಾಧ. ಶ್ರಮವಿಲ್ಲದೆ ದೂರದಲ್ಲಿ ಕುಳಿತು ಯಾರ ಗಮನಕ್ಕೂ ಬಾರದೆ ಇನ್ನೊಬ್ಬರ ಹಣವನ್ನು ದೋಚುವುದು ಈ ಅಪರಾಧದ ವೈಶಿಷ್ಟ್ಯ.

ಮಂಗಳೂರಿನ ಗ್ರಾಹಕರ ಹಣ ಹಾಸನದಲ್ಲಿ ಡ್ರಾ!
ಐಸಿಐಸಿಐ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ವಿಜಯಾ ಬಿ. ಅವರು ಇದೇ ಅ. 16ರಂದು ಬೆಳಗ್ಗೆ 6.56 ಗಂಟೆಗೆ ಮಂಗಳೂರು ಕಾರ್‌ಸ್ಟ್ರೀಟ್‌ನ ಹೂವಿನ ಮಾರ್ಕೆಟ್‌ ಎದುರು ಇರುವ ಕೆನರಾ ಬ್ಯಾಂಕ್‌ ಎಟಿಎಂಗೆ ತೆರಳಿ ತಮ್ಮ ಐಸಿಐಸಿಐ ಬ್ಯಾಂಕ್‌ ಖಾತೆಯಿಂದ ಹಣ ಡ್ರಾ ಮಾಡಿದ್ದರು. ಅ. 17ರಂದು ಬೆಳಗ್ಗೆ 9.45ಕ್ಕೆ ಅವರ ಖಾತೆಯಿಂದ 6,000 ರೂ. ಹಾಸನದ ಎಟಿಎಂ ಒಂದರಿಂದ ವಿತ್‌ಡ್ರಾ ಆಗಿರುವ ಬಗ್ಗೆ ಅವರ ಮೊಬೈಲ್‌ಗೆ ಸಂದೇಶ ಬಂದಿದೆ. ತನ್ನ ಖಾತೆಯನ್ನು ಅಪರಿಚಿತರು ಹ್ಯಾಕ್‌ ಮಾಡಿ ವಂಚಿಸಿದ್ದಾರೆ ಎಂದು ಅವರು ಸೈಬರ್‌ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ. 

 ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next