Advertisement

ಕೌಶಲವೇ ಬದುಕಾಗಿ…

12:30 AM Jan 13, 2019 | |

ಮಣಿಪಾಲದ ಮಾಹೆ ಆಶ್ರಯದ ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರಕ್ಕಾಗಿ ಕೊರಗ ಸಮುದಾಯದ ಬದುಕು-ಕಾಯಕದ ದಾಖಲೀಕರಣ ಇತ್ತೀಚೆಗೆ ನಡೆಯಿತು…

Advertisement

ಸಂಸ್ಕೃತಿ ಎನ್ನುವುದು ಸಮೂಹ ಒಪ್ಪಿದ ಜೀವನ ವಿಧಾನ. ಇದು ಸರ್ವಸಮ್ಮತಿಯಾಗಿ ತಲೆಮಾರಿನಿಂದ ತಲೆಮಾರಿಗೆ ಸಾಗಿ ಬರುತ್ತದೆ. ಈ ಸ್ವಸ್ಥ-ಸ್ವತ್ಛ ಪರಂಪರೆಯಂತೆ ಕೂಡಿಬಾಳುವ ಪೂರ್ಣ ವಿಶ್ವಾಸ ಸಿದ್ಧಿಸುತ್ತದೆ. ಹೀಗೆ ಒದಗಿದ ಪಾರಂಪರಿಕ ಭದ್ರತೆಯ ಬದುಕನ್ನು-ಬದುಕಿನ ಕ್ರಮವನ್ನು ಬದಲಿಸಲು ನಿರಾಕರಿಸುತ್ತ ಅವಕಾಶ ವಂಚಿತರಾಗುತ್ತ ಅಥವಾ ಅವಗಣಿಸಲ್ಪಟ್ಟು ಬಹುಕಾಲ ಪ್ರತ್ಯೇಕವಾಗಿ ಬದುಕುತ್ತ ಇತ್ತೀಚೆಗಿನ ದಶಕಗಳಲ್ಲಿ ಮುಖ್ಯವಾಹಿನಿಯತ್ತ ಬಂದ ಅಥವಾ ಬರುತ್ತಿರುವ ವರ್ಗಗಳಲ್ಲಿ ಕೊರಗ ಸಮುದಾಯವೂ ಒಂದು. 

ತಮ್ಮ ಕುಲಕಸುಬು ಸಮಾಜದ ಅಗತ್ಯಗಳನ್ನು ಪೂರೈಸುವಂಥದ್ದು, ಅವು ಇಲ್ಲದೆ ಸಮಾಜವಿಲ್ಲ ಎಂಬ ಕಾಲದಿಂದ ತೊಡಗಿ, ಅಗತ್ಯವಿದೆ ಆದರೆ ಅನಿವಾರ್ಯವಲ್ಲ, ನೈಪುಣ್ಯವಿದೆ, ಅಲಂಕಾರಿಕವೂ ಹೌದು ಎಂಬಲ್ಲಿಯವರೆಗೆ ಇವರ ಕುಲಕಸುಬಿನ ಹುಟ್ಟುವಳಿಗೆ ಬೇಡಿಕೆ ಸೀಮಿತವಾಗುತ್ತದೆ.  ಖರೀದಿಸುವವರು ಇದ್ದರೂ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಇಲ್ಲ ಎಂಬ ಕಾರಣಕ್ಕೆ ಪೂರ್ಣಪ್ರಮಾಣದಲ್ಲಿ ಕುಲಕಸುಬನ್ನೇ ನಂಬಿ ಬದುಕು ಕಷ್ಟಸಾಧ್ಯ ಎಂದು ಮನಗಂಡು ಇತರ ಸಂಪಾದನೆಯ ದಾರಿಗಳಾದ ಮೇಸಿŒ ಕೆಲಸಗಳಲ್ಲೋ, ಕೃಷಿ ಕಾರ್ಮಿಕರಾಗಿಯೋ ದುಡಿಯುತ್ತಿರುವ ಕೊರಗ ಸಮುದಾಯ ತಮ್ಮ ಕುಲಕಸುಬನ್ನು ಪೂರ್ಣ ಮರೆತಿಲ್ಲ. ವಿದ್ಯಾವಂತರಾಗಿ ಉದ್ಯೋಗ ಪಡೆಯುವಲ್ಲಿ ಸಾಧನೆ ಇದೆ. ಈ ಮೂಲಕ ಮುಖ್ಯವಾಹಿನಿಗೆ ಬರುತ್ತಿರುವುದು ಸ್ಪಷ್ಟ. ಪ್ರಮಾಣ ಇನ್ನೂ ಹೆಚ್ಚಬೇಕಿದೆ. 

ದಾಖಲೀಕರಣ
ಹೂ ಗಿಡಗಳಿಂದ ಆವೃತವಾಗಿದ್ದ ಒಪ್ಪ-ಓರಣದ ಹೆಂಚಿನಮನೆ. ಸ್ವತ್ಛ ಪರಿಸರದಲ್ಲಿ ಆತ್ಮೀಯವಾಗಿ ಸ್ವಾಗತಿಸಿದ ಮುಗ್ಧ ಮನಸ್ಸುಗಳ ಜನರಿದ್ದ ಒಂದು ಕೊಪ್ಪಕ್ಕೆ ಕುಲಕಸುಬುಗಳ ಜೀವನ ಪದ್ಧತಿಯ ದಾಖಲಾತಿಗೆಂದು ಉಡುಪಿ-ಹಿರಿಯಡಕ ಸಮೀಪದ ಬೊಮ್ಮರಬೆಟ್ಟು ಎಂಬಲ್ಲಿಯ ಕೊಪ್ಪವೊಂದಕ್ಕೆ ಹೋದಾಗ ಆದ ಅನುಭವ.  ಮಣಿಪಾಲದ ಮಾಹೆ ಆಶ್ರಯದ ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರಕ್ಕಾಗಿ ದಾಖಲೀಕರಣದ ವೇಳೆ ಸಂಗ್ರಹಿಸಿದ ಮಾಹಿತಿಯ ಸ್ವಲ್ಪ$ಅಂಶ ಇದು. 

ಕುಲಕಸುಬಿನ ಮೇಲಿನ ಹಿಡಿತ ಮರೆತಿಲ್ಲ. ಜೀವನ ಪದ್ಧತಿಯಲ್ಲಿ ಬಹುತೇಕ ನಾಗರಿಕತೆಯ ಸ್ಪಷ್ಟತೆ ಇದೆ, ಆದರೆ ಸಂಪ್ರದಾಯಗಳು ಉಳಿದುಕೊಂಡಿವೆ. ಆಚರಣೆಗಳಲ್ಲಿ ಪರಿಸರದ ಪ್ರಭಾವ ನಿಚ್ಚಳವಾಗಿದೆ.  ಪರಂಪರೆ ಮರೆತಿಲ್ಲ ಎಂದೇ ಹೇಳಬಹುದು.  ಅವಲಂಬನೆಗಳಿಲ್ಲದೆ ಬದುಕುವ ವಿಶ್ವಾಸದ ಮನಃಸ್ಥಿತಿಗಳು ಮಾತನಾಡುತ್ತಿರುವಂತೆ ತೆರೆದುಕೊಳ್ಳುತ್ತವೆ.

Advertisement

ಹೆಡಿಗೆ (ಪುಡಾಯಿ), ಗೆರಸೆ (ತಡೆ³), ಬೀಳಲಿನ ಸಣ್ಣ-ದೊಡ್ಡ ಎಸರುತಟ್ಟೆ (ಅನ್ನ ಬಸಿಯಲು ಮತ್ತು ಪಾತ್ರೆಗೆ ಮುಚ್ಚಲು ಬಳಸುವ ತಟ್ಟಿಕುಡು³), ಬೀಳಲುಗಳನ್ನು ಬಳಸಿ ಮಾಡಿದ ಸಣ್ಣ-ದೊಡ್ಡ ಕುಕ್ಕೆ (ಕುಡು³) ಮುಂತಾದುವುಗಳ ನಿರ್ಮಾಣವನ್ನು ಹಂತ ಹಂತವಾಗಿ ಮಾಡಿತೋರಿಸಿದರು. ನಡುವೆ ಮಾತನಾಡುತ್ತ ಬದುಕಿನ, ಆಚರಣೆಗಳ, ನಂಬಿಕೆಗಳ ಕುರಿತು ಅನೇಕ ಪ್ರಶ್ನೆಗಳಿಗೆ ಉತ್ತರಿಸುತ್ತ ತಮ್ಮ ಜೀವನ ವಿಧಾನವನ್ನು ತೆರೆದಿಟ್ಟರು. ಅದು ಮುಗ್ಧ ಮನಸ್ಸುಗಳ ನೇರ ನಡೆನುಡಿಯ ನಿರೂಪಣೆಯೇ ಆಗಿತ್ತು. ಕೆಲವೊಂದು ಉತ್ಪನ್ನಗಳಿಗೆ ಬೇಡಿಕೆ ಇಲ್ಲದೆ ತಯಾರಿಸುವುದಿಲ್ಲ.  ಬೇರೆ ಹಲವು ಬಿಳಲುಗಳ ಕೊರತೆಯಿಂದಲೂ ತಯಾರಿಸಲ್ಪಡುವುದಿಲ್ಲ.  ಉದಾಹರಣೆಗೆ ತರಗೆಲೆ ತುಂಬಿಸುವ ಕುರ್ಕಿಲ್‌, ಕೋಳಿಗಳನ್ನು ಹಿಡಿದುಹಾಕುವ ಕುತ್ತೆರಿ, ಗೊಬ್ಬರ ತುಂಬಿಸಿ ಹೊರಲು ಬಳಸುವ ಗೊಬ್ಬರದ ಹೆಡಿಗೆ ಅಥವಾ ಕನ್ನದ ಪುಡಾಯಿ ಮುಂತಾದವುಗಳು.  

ಒಂದು ಕಾಲವಿತ್ತು, ಕೊಪ್ಪದ ಪಕ್ಕದ ಕಾಡಿನಲ್ಲಿ ಬೀಳಲುಗಳು ಸಿಗುತ್ತಿದ್ದುವು. ಊರಿನ ಒಳಗೆ ದೊಡ್ಡ ದೊಡ್ಡ ತೋಟಗಳ ಬೇಲಿಯಲ್ಲಿ ಕೆಲವೊಂದು ಜಾತಿಯ ಅವಶ್ಯ ಬೀಳಲುಗಳು ದೊರೆಯುತ್ತಿದ್ದುವು. ಬೀಳು ಕೀಳಲು ಹೋಗುವಾಗ ತೋಟದ ಮನೆಯವರು ಆಕ್ಷೇಪಿಸುತ್ತಿರಲಿಲ್ಲ, ಬದಲಿಗೆ ಯಾವುದಾದರೊಂದು ವಸ್ತು ಬೇಕಿತ್ತು, ತಂದು ಕೊಡಿ ಎಂಬ ಬೇಡಿಕೆಯನ್ನು ಮುಂದಿಡುತ್ತಿದ್ದರು. ನಿತ್ಯ ಬಳಕೆಯ ಹೆಡಿಗೆ, ಗೆರಸೆ ಮುಂತಾದ ವಸ್ತುಗಳಿಗೆ ನಮ್ಮನ್ನು ಆಶ್ರಯಿಸಬೇಕಿತ್ತು.  ಆದರೆ, ಈಗ “ಬೇಲಿ ಹಾಳು ಮಾಡುತ್ತೀರಿ?’ ಎಂದೆಲ್ಲ ಆಕ್ಷೇಪಿಸುತ್ತಾರೆ. ಈಗ ನಮ್ಮ ಹುಟ್ಟುವಳಿಗಳ ಅಗತ್ಯವೂ ಇಲ್ಲವಾಗಿದೆ. ಮುಂದುವರಿದ ವೈಜಾnನಿಕ ಯುಗದಲ್ಲಿ ಬೇರೆ ಮೂಲಗಳಿಂದ ಅವು ಲಭ್ಯವಿದೆ, ಸಮಾಜಕ್ಕೆ ನಮ್ಮ ಹಂಗೂ ಇಲ್ಲ ಎನ್ನುತ್ತಾರೆ ಕೊಪ್ಪದ ಹಿರಿಯರು. 

ನಂಬಿಕೆ-ಆಚರಣೆ
ಸರಳ-ಮುಗ್ಧ-ವಿಮರ್ಶೆಗಳಿಲ್ಲದೆ ಜೀವನವಿಧಾನ, ಆಚಾರ-ವಿಚಾರಗಳುಳ್ಳ ಕೊರಗ ಸಮುದಾಯವು ಬಹುತೇಕ ಕರೆನಾಡಿನ ಉಳಿದ ಸಮುದಾಯಗಳಂತೆ ಕೂಡುಕಟ್ಟಿನ ಕ್ರಮ ಅನುಸರಿಸುವವರು. ಕೂಡಿಬಾಳುವ ಸ್ವಭಾವವುಳ್ಳ ಇವರು ಕೊಪ್ಪಕ್ಕೊಬ್ಬ ಗುರಿಕಾರನನ್ನು ಹೊಂದಿರುತ್ತಾರೆ. ಈ ಗುರಿಕಾರ ಪ್ರತಿ ಕುಟುಂಬ, ಕೊಪ್ಪದ ಮಂದಿಯ ನಂಬಿಕೆ-ನಡವಳಿಕೆಗಳನ್ನು ನಿರ್ವಹಿಸುವವರಾಗಿ, ಹುಟ್ಟು, ಹೆಣ್ಣು ಪುಷ್ಪವತಿಯಾಗುವುದು, ಮದುವೆ, ಸೀಮಂತ ಹಾಗೂ ಸಾವಿನ ಆಚರಣೆಗಳಲ್ಲಿ ಪ್ರಧಾನ ಪಾತ್ರವಹಿಸುತ್ತಾರೆ. ಗುರಿಕಾರರಿಗೆ ಕೊಪ್ಪದಲ್ಲಿ ಅಥವಾ ಕೂಡುಕಟ್ಟಿನ ವ್ಯಾಪ್ತಿಯಲ್ಲಿ ಗೌರವವೂ ಇರುತ್ತದೆ. ಮಾತೃಮೂಲ ಅಥವಾ ಅಳಿಯ ಕಟ್ಟಿನ ಕುಟುಂಬ ವ್ಯವಸ್ಥೆ ಇವರಲ್ಲಿ ಪರಂಪರೆಯಾಗಿ ರೂಢಿಯಲ್ಲಿದೆ.

ದಾಖಲೀಕರಣ 
    ವಾಸು ಅವರ ಹಿರಿತನದಲ್ಲಿ ಗಣೇಶ, ಮಂಜು, ಗುಲಾಬಿ, ಗೌರಿ ಅವರು ತಯಾರಿಯ ಕ್ರಮಗಳನ್ನು, ಬಳಸುವ ಬೀಳಲುಗಳನ್ನು ಪರಿಚಯಿಸುತ್ತ ಗೆರಸೆ, ಹೆಡಿಗೆ ಇತ್ಯಾದಿಗಳನ್ನು ಸಿದ್ಧಗೊಳಿಸಿದರು, ಜೀವನ ಕ್ರಮವನ್ನು ವಿವರಿಸಿದರು. ಪವಿತ್ರಾ ಹಾಗೂ ಸಂಪ ಮಾಹಿತಿಗಳನ್ನು ನೀಡಿ ಸಹಕರಿಸಿದರು. 

ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಪ್ರೊ. ವರದೇಶ ಹಿರೇಗಂಗೆ ಅವರ ಮಾರ್ಗದರ್ಶನದಲ್ಲಿ ನಡೆದ ದಾಖಲೀಕರಣದಲ್ಲಿ  ಕೆ. ಎಲ್‌. ಕುಂಡಂತಾಯ ಸಂದರ್ಶನಗಳನ್ನು ನಿರ್ವಹಿಸಿದ್ದಾರೆ. ಲಚ್ಚೇಂದ್ರ ದಾಖಲೀಕರಣದ ವಿಡೀಯೋ ಚಿತ್ರೀಕರಣ ಮಾಡಿದ್ದಾರೆ.  ಭಾರತಿಯವರು ಫೋಟೋಗ್ರಫಿಯಲ್ಲಿ ಸಹಕರಿಸಿದ್ದರು. 
(ಮೂಲಲೇಖನದ ಸ್ಥೂಲರೂಪ)

ಕೆ.ಎಲ್‌. ಕುಂಡಂತಾಯ

Advertisement

Udayavani is now on Telegram. Click here to join our channel and stay updated with the latest news.

Next