ಯಲಹಂಕ: ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಉದ್ಯೋಗ ಕೌಶಲ್ಯ ಅಭಿವೃದ್ಧಿ ವಿಶ್ವವಿದ್ಯಾಲಯಗಳನ್ನು ತೆರೆಯಲು ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ಸಮೀಪದ ಬಿಎಂಎಸ್ ಸ್ಕೂಲ್ ಆಪ್ ಅರ್ಕಿಟೆಕ್ಚರ್‌ನ ವಿನ್ಯಾಸ ಸಂಶೋಧನೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ತಾಂತ್ರಿಕ ಶಿಕ್ಷಣ ಪಡೆದು ಹೊರಬಂದ ಸುಮಾರು 75 ಸಾವಿರ ಪದವೀಧರರಿಗೆ ಶೇ.4ರಿಂದ 5ರಷ್ಟು ಉದ್ಯೋಗ ದೊರೆಯುತ್ತಿದೆ.
ಹೆಚ್ಚಿನ ಸಂಖ್ಯೆಯ ಪದವೀಧರರು ನಿರುದ್ಯೋಗಿಗಳಾಗುತ್ತಿರುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಉದ್ಯೋಗ ಕೌಶಲ್ಯ ಅಭಿವೃದ್ಧಿ ವಿವಿ ಆರಂಭಿಸಲು ಕ್ರಮ ತೆಗೆದುಕೊಂಡಿದೆ ಎಂದರು. ಪ್ರತ್ಯೇಕ ಕೌಶಲ್ಯ ಅಭಿವೃದ್ಧಿ ವಿವಿಗಳನ್ನು ತೆರೆಯಲು ಈಗಾಗಲೇ ಮಾತುಕತೆ ನಡೆಸಿದ್ದು, ಆಯವ್ಯಯದಲ್ಲೂ ಘೋಷಣೆ ಮಾಡಿದ್ದೇವೆ.
ಇದರೊಂದಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕೂಡ ಕೌಶಲ್ಯ ಅಭಿವೃದ್ಧಿ ಕೇಂಧ್ರ ತೆರೆಯಲು ಆಸಕ್ತಿ ತೋರಿದ್ದು, ಡಾಂಡೇಲಿಯಲ್ಲಿ ಈಗಾಗಲೆ ಒಂದು ಕೇಂದ್ರ ಪ್ರಾರಂಭವಾಗಿದೆ. ಕೊಪ್ಪಳ, ಮೈಸೂರಿನಲ್ಲೂ ಶೀಘ್ರವೇ ಕಾರ್ಯಾರಂಭ ಮಾಡಲಿವೆ. ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಕೌಶಲ್ಯ ಅಭಿವೃದ್ಧಿ ವಿವಿ ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ಸಿಒಎ ಅಧ್ಯಕ್ಷರಾದ ಬಿಸ್ವರಂಜನ್ ನಾಯಕ್, ವಿಟಿಯು ಉಪಕುಲಪತಿ ಕರಿಸಿದ್ದಪ್ಪ, ಬಿಎಂಎಸ್ ಸದಸ್ಯ ಕಾರ್ಯದರ್ಶಿ ಡಾ.ಬಿ.ಎಸ್.ರಾಗಿಣಿ ನಾರಾಯಣ್, ನಿವೃತ್ತ ನ್ಯಾಯಮೂರ್ತಿ ಎಸ್.ಆರ್.ಬನ್ನೂರ್‌ಮs…, ವಾಣಿಜ್ಯೋದ್ಯಮಿ ದಯಾನಂದ ಪೈ, ಬಿಎಂಎಸ್ ಸಂಸ್ಥೆಯ ಅಧ್ಯಕ್ಷ ಜಯರಾಜ್ ಮತ್ತಿತರರು ಹಾಜರಿದ್ದರು.
ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಿಗೆ ಉಪಕುಲಪತಿಗಳ ನೇಮಕ ಮಾಡಲು ಶನಿವಾರ ಸಭೆ ನಡೆದಿದೆ. ಸಭೆಯ ಶಿಫಾರಸು ಆಧರಿಸಿ ನೇಮಕ ಮಾಡುವ ಸಂಬಂಧ ರಾಜ್ಯಪಾಲರಿಗೆ ವರದಿ ಕಳಿಸಲಾಗುವುದು. ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಕನ್ನಡವನ್ನು ಕಡ್ಡಾಯ ವಿಷಯವಾಗಿಸುವ ಬಗ್ಗೆಯೂ ವಿಶ್ವವಿದ್ಯಾಲಯಗಳೇ ನಿರ್ಧರಿಸಲಿವೆ.
-ಬಸವರಾಜ ರಾಯರಡ್ಡಿ, ಉನ್ನತ ಶಿಕ್ಷಣ ಸಚಿವ