Advertisement

Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ

08:17 PM Nov 26, 2024 | Team Udayavani |

ಮಂಗಳೂರು: ಒಂದೊಮ್ಮೆ ಪರದೇಶದ ದಾಸ್ಯದಿಂದ ತನ್ನ ಘನತೆ ಕಳೆದುಕೊಂಡಿದ್ದ ನಮ್ಮ ರಾಷ್ಟ್ರವೀಗ ಆರ್ಥಿಕ ಶಕ್ತಿಯಲ್ಲಿ ಜಗತ್ತಿನಲ್ಲಿ 5ನೇ ಸ್ಥಾನಕ್ಕೇರಿರುವುದು ನಮ್ಮೆಲ್ಲರಿಗೆ ಹೆಮ್ಮೆ, ಆದರೆ ಭಾರತೀಯರ ತಲಾ ಆದಾಯವೂ ಕೂಡ ಏರಿಕೆಯಾಗುವ ಮೂಲಕ ನಾವು ಇನ್ನಷ್ಟು ಶಕ್ತಿಯುತವಾಗಬೇಕು, ಅದಕ್ಕಾಗಿ ಸಮಗ್ರ ಹಾಗೂ ಕೌಶಲಯುತ ಯುವಜನರನ್ನು ಸಿದ್ಧಪಡಿಸುವಂತಹ ಶಿಕ್ಷಣ ನಮ್ಮೆಲ್ಲರ ಅಗತ್ಯ ಎಂದು ಆದಿಚುಂಚನಗಿರಿ ಸಂಸ್ಥಾನದ ಶ್ರೀ ಡಾ|ನಿರ್ಮಲಾನಂದನಾಥ ಸ್ವಾಮೀಜಿ ಅವರು ಹೇಳಿದ್ದಾರೆ.

Advertisement

ಕಾವೂರಿನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಂಗಳೂರು ಶಾಖಾ ಮಠದ ರಜತ ಮಹೋತ್ಸವದ ಪ್ರಯುಕ್ತ ಮಂಗಳವಾರ ಹಮ್ಮಿಕೊಳ್ಳಲಾದ “ಬಿಜಿಎಸ್‌ ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಕೌಶಲವಿಲ್ಲದ ಶಿಕ್ಷಣದಿಂದ ಯಾವುದೇ ಸಾಧನೆ ಸಾಧ್ಯವಿಲ್ಲ, ಹಾಗಾಗಿ ಸಮಗ್ರ ಶಿಕ್ಷಣವನ್ನು ನೀಡುವ ಕೆಲಸವನ್ನು ಮಾಡಬೇಕಾಗಿದೆ. ಸದ್ಯ ಐದನೇ ಅತಿದೊಡ್ಡ ಆರ್ಥಿಕತೆ ಭಾರತವಾಗಿದ್ದರೂ ತಲಾ ಆದಾಯದಲ್ಲಿ ನಾವು 133ನೇ ಸ್ಥಾನದಲ್ಲಿದ್ದೇವೆ, ಇದು ಸುಧಾರಣೆಯಾಗಬೇಕಾಗಿದೆ ಎಂದರು.

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಸಂಸ್ಕಾರಯುತ ಶಿಕ್ಷಣವನ್ನು ನೀಡಿದಾಗ ಸಂಪನ್ಮೂಲಭರಿತ ಯುವಜನತೆ ರೂಪುಗೊಳ್ಳುತ್ತದೆ, ಬಿಜಿಎಸ್‌ ಶಿಕ್ಷಣ ಸಂಸ್ಥೆಗಳು ಅಂತಹ ವಿದ್ಯಾರ್ಥಿಗಳನ್ನು ತಯಾರುಮಾಡುತ್ತಿರುವುದು ಸ್ತುತ್ಯರ್ಹ ಎಂದರು.

ಕಾವೂರಿನ ಬಿಜಿಎಸ್‌ ಶಾಖಾ ಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ ಮಾತನಾಡಿ, 25 ವರ್ಷಗಳ ಹಿಂದೆ ಭಾಷೆ, ಸಂಸ್ಕೃತಿ ಗೊತ್ತಿಲ್ಲದ ವೇಳೆ ಇಲ್ಲಿಗೆ ಆಗಮಿಸಿದೆ, ಆಗ ಇಂತಹ ದೊಡ್ಡ ಸಂಸ್ಥೆಯಾಗಿ ಇದು ಬೆಳಗಬಹುದು ಎನ್ನುವ ನಿರೀಕ್ಷೆ ಇರಲಿಲ್ಲ, ಎಲ್ಲರ ಸಹಕಾರದಿಂದ ಕಾವೂರಿನಲ್ಲಿ ಬಿಜಿಎಸ್‌ ಉತ್ತಮ ಕಾರ್ಯದೊಂದಿಗೆ ರಜತಮಹೋತ್ಸವ ಆಚರಿಸುವಂತಾಗಿದೆ ಎಂದರು.

Advertisement

ಶಾಸಕ ಡಾ| ವೈ. ಭರತ್‌ ಶೆಟ್ಟಿ ಮಾತನಾಡಿ, ಜ್ಞಾನ ಹಾಗೂ ಮಾನವೀಯತೆ ಸನಾತನ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಸಂತರೂ ಇದೇ ಆಧಾರದಲ್ಲಿ ಸನಾತನ ತತ್ವಗಳೊಂದಿಗೆ ಶಿಕ್ಷಣ ಪ್ರಸಾರದಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.

ಪ್ರಶಸ್ತಿ ಪ್ರದಾನ
ಬಿಜಿಎಸ್‌ ಕರಾವಳಿ ರತ್ನ ಪ್ರಶಸ್ತಿಯನ್ನು 24 ಮಂದಿಗೆ ನೀಡಿ ಗೌರವಿಸಲಾಯಿತು. ಡಾ| ಕೆ.ಚಿನ್ನಪ್ಪಗೌಡ, ಪ್ರೊ| ಕೆ.ವಿ.ರಾವ್‌, ಗುರುವಪ್ಪ ಎನ್‌.ಟಿ.ಬಾಳೇಪುಣಿ, ಡಾ| ರಮೇಶ್‌ ಡಿ.ಪಿ., ಡಾ| ಸತೀಶ್‌ ಕಲ್ಲಿಮಾರ್‌, ಪ್ರಕಾಶ್‌ ಅಂಚನ್‌ ಬಂಟ್ವಾಳ, ಮಾಧವ ಸುವರ್ಣ, ಭಕ್ತಿ ಭೂಷಣ್‌ ದಾಸ್‌, ಪುಷ್ಪಾವತಿ ಬುಡ್ಲೆಗುತ್ತು, ವೀಣಾ ಕುಲಾಲ್‌, ನರಸಿಂಹ ರಾವ್‌ ದೇವಸ್ಯ, ಡಾ| ಕೆ.ಎಸ್‌.ಗೋಪಾಲಕೃಷ್ಣ ಕಾಂಚೋಡು, ಸುರೇಶ್‌ ಬಲ್ನಾಡು, ಗೋಪಾಲಕೃಷ್ಣ ಭಟ್‌, ಜಗದೀಶ್‌ ಆಚಾರ್ಯ, ಮಂಜುಳ ಸುಬ್ರಹ್ಮಣ್ಯ, ಶಿವರಾಮ ಪಣಂಬೂರು, ಸುಜಾತ ಮಾರ್ಲ, ಸಚಿನ್‌ ಸುಂದರ ಗೌಡ, ರಾಧಾಕೃಷ್ಣ, ಕೇಶವ ಅಮೈ, ಕುಸುಮಾಧರ, ಅಭಿಷೇಕ ಶೆಟ್ಟಿ, ಮಾಧವ ಉಳ್ಳಾಲ್‌, ವಿಕ್ರಂ ಬಿ.ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.

ಬಿಜಿಎಸ್‌ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಕಾರ್ಪೊರೇಟರ್‌ ಸುಮಂಗಳಾ ಉಪಸ್ಥಿತರಿದ್ದರು. ಪಿ.ಎಸ್‌.ಪ್ರಕಾಶ್‌ ಪ್ರಸ್ತಾವಿಸಿ, ಮಾಜಿ ಶಾಸಕ ಸಂಜೀವ ಮಠಂದೂರು ಸ್ವಾಗತಿಸಿದರು. ಬಿಜಿಎಸ್‌ ಕಾವೂರು ಪ್ರಾಂಶುಪಾಲ ಡಾ| ಸುಬ್ರಹ್ಮಣ್ಯ ನಿರೂಪಿಸಿದರು. ರಣದೀಪ್‌ ಕಾಂಚನ್‌ ವಂದಿಸಿದರು.

ಸರಕಾರಿ ಶಾಲೆ ಬಲಗೊಳ್ಳಬೇಕಾದರೆ
ರಾಜಕಾರಣಿಗಳು, ಅಧಿಕಾರಿಗಳು ಎಲ್ಲರೂ ಕೂಡ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಬೇಕು, ಅಲ್ಲಿ ಶಿಕ್ಷಕರು ಸರಿಯಾಗಿ ಕೆಲಸ ಮಾಡದಿದ್ದರೆ ಪ್ರಬಲರು ಪ್ರಶ್ನಿಸುವಂತಾಗಬೇಕು, ಆಗ ಮಾತ್ರ ಸರಕಾರಿ ಶಾಲೆಗಳು ಸುಧಾರಣೆಯಾಗಬಹುದು ಎಂದು ಡಾ| ನಿರ್ಮಲಾನಂದ ನಾಥ ಸ್ವಾಮೀಜಿ ನುಡಿದರು.

ಅತಿ ಬಡವರಿಗಾಗಿ ಸಂವಿತ್‌ ಶಾಲೆ
ಅತಿ ಬಡ ಮಕ್ಕಳನ್ನು ಗುರುತಿಸಿ, ಅವರನ್ನು ಕರೆತಂದು ಅವರ ಮೆಚ್ಚಿನ ಕ್ಷೇತ್ರಕ್ಕೆ ಸೇರುವಲ್ಲಿವರೆಗೂ ತರಬೇತಿ ನೀಡುವ ಸಂವಿತ್‌ ವಿಶೇಷ ಶಾಲೆಯನ್ನು ಆರಂಭಿಸಲಾಗಿದೆ. 6ನೇ ತರಗತಿಯಿಂದ ಇದು ನಡೆಯುತ್ತಿದೆ. ಇದೇ ಯೋಜನೆ ಶೀಘ್ರವೇ ಮಂಗಳೂರಿನಲ್ಲೂ ಆರಂಭಗೊಳ್ಳಲಿದೆ ಎಂದು ಸ್ವಾಮೀಜಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next