ಹುಬ್ಬಳ್ಳಿ: ಭವಿಷ್ಯದ ಉದ್ಯಮಗಳಿಗಾಗಿ ಕೌಶಲಗಳಲ್ಲಿ ಮಾರ್ಪಾಡು ಮಾಡಿಕೊಳ್ಳದಿದ್ದರೆ ಸ್ಪರ್ಧೆಯಲ್ಲಿ ಉಳಿಯುವುದು ಕಷ್ಟವಾಗುತ್ತದೆ ಎಂದು ನ್ಯಾಟ್ಗ್ರಿಡ್ ಸಂಸ್ಥೆಯ ಸಿಇಒ ಹಾಗೂ ಲೇಖಕ ಕ್ಯಾಪ್ಟನ್ ರಘು ರಾಮನ್ ಹೇಳಿದರು.
ಡೆನಿಸನ್ಸ್ ಹೋಟೆಲ್ನಲ್ಲಿ ಟೈ ಹುಬ್ಬಳ್ಳಿ ಶನಿವಾರ ಆಯೋಜಿಸಿದ್ದ ಟೈ ಕನೆಕ್ಟ್ -2019 ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ತಲೆಮಾರಿನಿಂದ ತಲೆಮಾರಿಗೆ ಉದ್ಯಮದ ಕಾರ್ಯವ್ಯಾಪ್ತಿ ಬದಲಾಗುತ್ತಿದೆ. ಕಾರ್ಯಶೈಲಿ ಬದಲಾಗುತ್ತಿದೆ. ಅದಕ್ಕನುಗುಣವಾಗಿ ನಾವು ನಮ್ಮ ಉದ್ಯಮದಲ್ಲಿ ಮಾರ್ಪಾಡು ಮಾಡಿ ಕೊಳ್ಳುವುದು ಅವಶ್ಯಕವಾಗಿದೆ ಎಂದರು.
ಉದ್ಯಮ ಘಟಕದ ಸವಾಲುಗಳಲ್ಲಿಯೂ ಬದಲಾವಣೆಯಾಗುತ್ತಿದೆ. ಇದನ್ನು ನಾವು ಗಮನಿಸಬೇಕು. ಕಾರ್ಮಿಕರ ಮಧ್ಯೆ ಅನ್ಯೋನ್ಯತೆಯಿರುವಂತೆ ವಾತಾವರಣ ನಿರ್ಮಿಸುವುದು ಅಗತ್ಯವಾಗಿದೆ. ಕುಟುಂಬದ ವಾತಾವರಣವಿದ್ದರೆ ಕಾರ್ಯಕ್ಷಮತೆ ಹೆಚ್ಚಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಮಿಕರೊಂದಿಗೆ ಮಾಲೀಕರ ವರ್ತನೆ ಬದಲಾಗಬೇಕು. ಕೌಶಲಯುತ ಕಾರ್ಮಿಕರಿಗೆ ಸಾಕಷ್ಟು ಅವಕಾಶಗಳಿವೆ. ಅವರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸೌಹಾರ್ದಯುತ ಸಂಬಂಧ ಹೊಂದಿರಬೇಕು. ಪ್ರತಿಯೊಂದು ಹಂತದಲ್ಲಿಯೂ ಪ್ರತಿಷ್ಠೆಯನ್ನು ಪ್ರದರ್ಶಿಸಲಾಗುವುದಿಲ್ಲ ಎಂದರು.
ಹಳೆ ತಲೆಮಾರು ಹಾಗೂ ಹೊಸ ತಲೆಮಾರಿನ ನಾಯಕರ ವೈಚಾರಿಕತೆಯಲ್ಲಿ ಸಾಕಷ್ಟು ಅಂತರವಿದೆ. ಯುವ ಜನಾಂಗದವರ ಮೇಲೆ ಹಿರಿಯರು ಯಾವುದೇ ಕಾರ್ಯಪದ್ಧತಿ ಹೇರಿದರೆ ಅದರಿಂದ ನಷ್ಟವೇ ಹೊರತು ಲಾಭವಿಲ್ಲ. ಯುವ ಉದ್ಯಮಿಗಳು ತಮ್ಮದೇ ಆದ ಶೈಲಿಯಲ್ಲಿ ಉದ್ಯಮ ಬೆಳೆಸುತ್ತಾರೆ. ಯುವ ಉದ್ಯಮಿಗಳು ಹೊಸ ಹೊಸ ಪ್ರಯೋಗಗಳನ್ನು ಮಾಡಿದರೂ, ಮೌಲ್ಯಗಳನ್ನು ಮಾತ್ರ ಮರೆಯಬಾರದು. ಮೌಲ್ಯಗಳನ್ನು ಹೊಂದಿದ ಹಾಗೂ ಸನ್ಮಾರ್ಗದಲ್ಲಿ ನಡೆವ ಸಂಸ್ಥೆ ಮಾತ್ರ ದೀರ್ಘಾವಧಿವರೆಗೆ ಬಾಳುತ್ತದೆ ಎಂದರು. ಟೈ ಹುಬ್ಬಳ್ಳಿ ಅಧ್ಯಕ್ಷ ಶಶಿಧರ ಶೆಟ್ಟರ, ಆನಂದ ಸಂಕೇಶ್ವರ, ರೋಹನ್ ಕುಲಕರ್ಣಿ, ಮನೋಹರ ಜೋಶಿ, ಗೌರವ ಶಹಾ, ಡಾ| ಶಂಕರ ಬಿಜಾಪುರ, ತರುಣ್ ಮಹಾಜನ, ಸಂದೀಪ ಬಿಡಸಾರಿಯಾ, ಶ್ರಾವಣಿ ಪವಾರ ಇದ್ದರು.