ಧಾರವಾಡ: ನಮ್ಮ ಶಿಕ್ಷಣ ಪದ್ಧತಿ ಬದಲಾಗಲೇಬೇಕಿದ್ದು, ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಕಲಿಸಬೇಕು. ಈ ಮೂಲಕ ಅವರ ಮುಂದಿನ ಭವಿಷ್ಯಕ್ಕೆ ದಾರಿ ಮಾಡಿಕೊಡುವ ಕುರಿತು ಚಿಂತನೆ ನಡೆಯಬೇಕು ಎಂದು ಮೈಂಡ್ ಟ್ರೀ ಸಂಸ್ಥೆ ಸಂಸ್ಥಾಪಕ ಸುಬ್ರೊತೊ ಬಾಗ್ಚಿ ಹೇಳಿದರು.
ಸತ್ತೂರಿನ ಡಾ| ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಜರುಗಿದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ(ಐಐಐಟಿ)ಯ ಮೊದಲ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಶಿಕ್ಷಣಕ್ಕಿಂತ ಕೌಶಲ್ಯವೇ ನಮ್ಮ ಬದುಕಿಗೆ ಆಧಾರವಾಗಲಿದೆ. ಆದ್ದರಿಂದ ಪ್ರತಿಯೊಬ್ಬರಲ್ಲೂ ಕೌಶಲ್ಯ ಅಗತ್ಯವಾಗಿ ಬೇಕು ಎಂದರು.
ಮಾಹಿತಿ ತಂತ್ರಜ್ಞಾನ ಹೊರತುಪಡಿಸಿ ಇಂದಿನ ಯುಗವನ್ನು ಊಹಿಸಲು ಸಾಧ್ಯವಿಲ್ಲ. ಇಡೀ ಜಗತ್ತಿನಲ್ಲಿ ಎಲ್ಲ ದೇಶಗಳು ವಿನೂತನ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಮನುಷ್ಯನ ಜೀವನದಲ್ಲಿ ಐಟಿ-ಬಿಟಿ ಹಾಸುಹೊಕ್ಕಾಗಿದೆ.ಪ್ರಸ್ತುತ ಎಲ್ಲರೂ ವೈಟ್ಕಾಲರ್ ನೌಕರಿಗಳೇ ಬೇಕೆಂದು ಹಠ ಹಿಡಿಯುತ್ತಿರುವುದು ಸಹ ನಿರುದ್ಯೋಗ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಭಾರತ ದೇಶದಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆ ಇಡೀ ಸಿಂಗಾಪುರದ ಜನಸಂಖ್ಯೆಯಷ್ಟು. ಶಾಲೆಯಿಂದ ಹೀಗೆ ಹೊರಗುಳಿಯುವ ಮಕ್ಕಳಲ್ಲಿ ಯಾವುದೇ ರೀತಿಯ ಕೌಶಲ್ಯ ಇರದ ಕಾರಣ ಯಾವ ನಿರ್ದಿಷ್ಟ ಉದ್ಯೋಗಕ್ಕೂ ಹೊಂದಿಕೊಳ್ಳದೇ ಕೊನೆಗೆ ನಿರುದ್ಯೋಗಿಗಳಾಗುತ್ತಿದ್ದಾರೆ. ಈ ಸಮಸ್ಯೆ ಭಾರತವನ್ನು ಪಿಡುಗಾಗಿ ಕಾಡುತ್ತಿದ್ದು, ಅಭಿವೃದ್ಧಿಗೆ ತೊಡಕಾಗಿದೆ ಎಂದು ವಿಶ್ಲೇಷಿಸಿದರು.
ಐಐಟಿ, ಐಐಐಟಿ ಅಂತಹ ಉನ್ನತ ಸಂಸ್ಥೆಗಳಿಂದ ಹೊರಹೊಮ್ಮಿದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅನುಭವದ ಆಧಾರದ ಮೇಲೆ ಸ್ವ ಉದ್ಯೋಗ ಸೃಷ್ಟಿಸಿಕೊಳ್ಳಬೇಕು. ಹತ್ತಾರು ಜನರಿಗೆ ಉದ್ಯೋಗ ಒದಗಿಸಬೇಕು. ಎಲ್ಲ ಪದವೀಧರರೂ ಉತ್ತಮ ಕಂಪನಿಗಳಲ್ಲಿ ನೌಕರಿ ಬೇಕೆಂದು ಕಾಯದೇ ಸ್ವಯಂ ಉದ್ಯೋಗ ಸೃಷ್ಟಿಸಿಕೊಂಡು ಉತ್ತಮ ಭವಿಷ್ಯ ಕಂಡುಕೊಳ್ಳಬೇಕು ಎಂದರು.
ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾ ಮೂರ್ತಿ ಮಾತನಾಡಿ, ಶೈಕ್ಷಣಿಕ ಬದುಕು ಮುಗಿಸಿ ಔದ್ಯೋಗಿಕ ಬದುಕಿಗೆ ಹೆಜ್ಜೆ ಇಡುತ್ತಿದ್ದು, ಇನ್ಮುಂದೆ ನಿಮ್ಮ ನಿಜವಾದ ಬದುಕು ಶುರುವಾಗಲಿದೆ. ಉನ್ನತ ಮೌಲ್ಯಗಳು, ಪ್ರಾಮಾಣಿಕತೆ ಹಾಗೂ ಪ್ರೀತಿಯಿಂದ ಕೆಲಸ ಮಾಡಿ. ತಂದೆ-ತಾಯಿ, ಶಿಕ್ಷಕರಿಗೆ ಎಂದೆಂದಿಗೂ ಗೌರವ ಕೊಡಿ ಎಂದು ಕಿವಿಮಾತು ಹೇಳಿದರು.
ಐಐಐಟಿ ನಿರ್ದೇಶಕ ಪ್ರೊ| ಕವಿ ಮಹೇಶ, ಮೌಲ್ಯಮಾಪನ ಕುಲಸಚಿವ ಡಾ| ಜಗದೀಶ ಡಿ.ಎನ್. ಇದ್ದರು. ಮಾಯಾ ರಾಮನ್ ನಿರೂಪಿಸಿದರು. ಪ್ರೊ| ಎಸ್. ಬಸವರಾಜಪ್ಪ ವಂದಿಸಿದರು.