Advertisement

ರಾಜ್ಯ ಸರ್ಕಾರದಿಂದ ಕೌಶಲಾಭಿವೃದ್ಧಿ ವಿಶ್ವವಿದ್ಯಾಲಯ

06:50 AM Sep 11, 2017 | Team Udayavani |

ಬೆಂಗಳೂರು: ಮಾನವ ಸಂಪನ್ಮೂಲಾಭಿವೃದ್ಧಿಗಾಗಿ ನಾಮುಂದೆ ತಾಮುಂದೆ ಎಂದು ತುದಿಗಾಲಿನಲ್ಲಿ ನಿಂತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರವು ಪ್ರತ್ಯೇಕವಾಗಿ ಕೌಶಲಾಭಿವೃದ್ಧಿ ವಿಶ್ವವಿದ್ಯಾಲಯ ನಿರ್ಮಿಸಲು ಕಾರ್ಯತಂತ್ರ ರೂಪಿಸುತ್ತಿವೆ.

Advertisement

ಕೇಂದ್ರ ಮತ್ತು ರಾಜ್ಯದ ಈ ಫೈಪೋಟಿಯಿಂದ ರಾಜ್ಯದ ಯುವ ಜನತೆಗೆ ಅನುಕೂಲತೆ ಹೆಚ್ಚಿದೆ. ಎರಡು ಕೌಶಲಾಭಿವೃದ್ಧಿ ವಿಶ್ವವಿದ್ಯಾಲಯ ಕರ್ನಾಟಕದಲ್ಲೇ ನಿರ್ಮಾಣವಾದರೆ, ಇಲ್ಲಿನ ಯುವ ಜನತೆಗೆ, ಸಂಶೋಧಕರಿಗೆ, ಅಧ್ಯಯನಶೀಲರಿಗೆ ಇನ್ನೂ ಹೆಚ್ಚಿನ ಅನುಕೂಲ ಆಗಲಿದೆ. ಆದರೆ, ಕೇಂದ್ರ ಕೌಶಲತೆ ತರಬೇತುದಾರರ ತರಬೇತಿ ಕೇಂದ್ರವಂತೂ ಬೆಂಗಳೂರಿನಲ್ಲೇ ನಿರ್ಮಾಣವಾಗಲಿದೆ.

ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯ ಮೂಲಕ ಕೌಶಲಾಭಿವೃದ್ಧಿ ವಿಶ್ವವಿದ್ಯಾಲಯ ನಿರ್ಮಿಸುವ ಸಂಬಂಧ 2017-18ರ ರಾಜ್ಯ ಬಜೆಟ್‌ನಲ್ಲೇ ಘೋಷಣೆ ಮಾಡಲಾಗಿದೆ. ವಿಶ್ವವಿದ್ಯಾಲಯ ನಿರ್ಮಿಸುವ ಸಂಬಂಧ ಸ್ಥಳ ಗುರುತಿಸುವುದು, ಅನುದಾನ ಹಂಚಿಕೆ, ವಿಶ್ವವಿದ್ಯಾಲಯದ ಮಾದರಿ ಇತ್ಯಾದಿ ಯಾವ ಕಾರ್ಯವೂ ಇನ್ನು ಆರಂಭವಾಗಿಲ್ಲ.

ಕೌಶಲಾಭಿವೃದ್ಧಿಗಾಗಿಯೇ ಕೇಂದ್ರ ಸರ್ಕಾರದಿಂದಲೂ ವಿಶ್ವವಿದ್ಯಾಲಯ ತೆರೆಯಲಾಗುತ್ತಿದೆ. ಆದರೆ, ಈ ಎರಡೂ ವಿಶ್ವವಿದ್ಯಾಲಕ್ಕೂ ಯಾವುದೇ ಸಂಬಂಧ ಇಲ್ಲ. ಈ ಸಂಬಂಧ ರಾಜ್ಯ ಸರ್ಕಾರ ಯಾವ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿಲ್ಲ. ಪಠ್ಯಕ್ರಮವೂ ವಿಭಿನ್ನವಾಗಿರಲಿದೆ. ಕೇಂದ್ರ ಸರ್ಕಾರವು ವೃತ್ತಿಪರತೆಯ ಆಧಾರದಲ್ಲಿ ಕೌಶಲತೆ ಅಭಿವೃದ್ಧಿ ಪಡಿಸುವ ಯೋಜನೆ ಹೊಂದಿದ್ದರೆ, ರಾಜ್ಯ ಸರ್ಕಾರ ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ವಿವಿಧ ಕೋರ್ಸ್‌ ಪೂರೈಸಿದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ವಿಶ್ವವಿದ್ಯಾಲಯ ತೆರೆಯಲಿದೆ ಎಂದು ತಿಳಿದುಬಂದಿದೆ.

ರಾಷ್ಟ್ರಮಟ್ಟದಲ್ಲಿ ಉದ್ಯೋಗ ಸೃಷ್ಟಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೊಸ ಯೋಜನೆಗಳನ್ನು ಪರಿಚಯಿಸುತ್ತಿದ್ದಾರೆ. ಮೂರೂವರೆ ವರ್ಷದ ಹಿಂದೆ ಕೌಶಲಾಭಿವೃದ್ಧಿಗಾಗಿ ಪ್ರತ್ಯೇಕ ಮಂತ್ರಾಲಯವನ್ನೇ ಆರಂಭಿಸಿದ್ದಾರೆ. ಈಗ ಕೌಶಲಾಭಿವೃದ್ಧಿ ಮಂತ್ರಾಲಯದ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆಯವರ ಹೆಗಲ ಮೇಲಿದೆ.

Advertisement

ದೇಶದ ಯುವಜನತೆಯ ಕೌಶಲಾಭಿವೃದ್ಧಿಗೆ ಹೊಸ ಹೊಸ ಕಲ್ಪನೆ ಹೊಂದಿರುವ ಇವರು, ಕೇಂದ್ರ ಸರ್ಕಾರದಿಂದ ಕೌಶಲಾಭಿವೃದ್ಧಿ ವಿಶ್ವವಿದ್ಯಾಲಯವನ್ನು ರಚಿಸುವ ಆಶಯವನ್ನು ಈಗಾಗಲೇ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ವಿದೇಶಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲೇ ಕೌಶಲ್ಯ ತರಬೇತುದಾರರ ತರಬೇತಿ ಕೇಂದ್ರವನ್ನು ಸ್ಥಾಪಿಸುವುದಾಗಿಯೂ ಸ್ಪಷ್ಟಪಡಿಸಿದ್ದಾರೆ. ಆದರೆ, ಕೌಶಲಾಭಿವೃದ್ಧಿ ವಿಶ್ವವಿದ್ಯಾಲಯವನ್ನು ಕರ್ನಾಟಕದಲ್ಲೇ ನಿರ್ಮಿಸುವ ಬಗ್ಗೆ ಇನ್ನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಖಾಸಗಿ ಸಹಭಾಗಿತ್ವದಲ್ಲಿ ಕೌಶಲ್ಯ ವಿವಿ:
ರಾಜ್ಯ ಸರ್ಕಾರವು ಕಾರ್ಮಿಕ ಇಲಾಖೆಯ ಮೂಲಕ ಖಾಸಗಿ, ಸಾರ್ವಜನಿಕ ಸಹಭಾಗಿತ್ವದಲ್ಲಿ ಕೌಶಲಾಭಿವೃದ್ಧಿ ವಿಶ್ವವಿದ್ಯಾಲಯವನ್ನು ಶೀಘ್ರದಲ್ಲೇ ನಿರ್ಮಿಸಲಿದೆ. ಈ ವಿಶ್ವವಿದ್ಯಾಲಯದ ಮೂಲಕ ವಿವಿಧ ಡಿಪ್ಲೊಮಾ ಕೋರ್ಸ್‌ ಜತೆಗೆ ಪ್ರಮಾಣ ಪತ್ರ ನೀಡುವ ಕೆಲವೊಂದು ತರಬೇತಿ, ಯುವಕರಿಗೆ ಹಾಗೂ ಯಾವುದೋ ಒಂದು ವೃತ್ತಿಯಲ್ಲಿ ಇರುವ ವ್ಯಕ್ತಿಗೆ ವೃತ್ತಿಪರ ತರಬೇತಿ, ತರಬೇತುದಾರಿಗೆ ಸೂಕ್ತ ತರಬೇತಿ ನೀಡಲಾಗುತ್ತದೆ. ಕೌಶಲಾಭಿವೃದ್ಧಿಗೆ ಬೇಕಾದ ಪಠ್ಯಕ್ರಮವನ್ನು ಈ ವಿಶ್ವವಿದ್ಯಾಲಯದಿಂದಲೇ ರಚನೆ ಮಾಡಲಾಗುತ್ತದೆ. ಕೌಶಲತೆಗೆ ಪೂರಕವಾದ ಸಂಶೋಧನೆಗೂ ಹೆಚ್ಚಿನ ಉತ್ತೇಜ ನೀಡಲಾಗುತ್ತದೆ.

ನಮ್ಮದೇ ಪ್ರತ್ಯೇಕ ವಿವಿ:
ಕೇಂದ್ರ ಸರ್ಕಾರ ನಿರ್ಮಿಸುವ ಕೌಶಲಾಭಿವೃದ್ಧಿ ವಿಶ್ವವಿದ್ಯಾಲಯಕ್ಕೂ, ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿರುವ ಕೌಶಲಾಭಿವೃದ್ಧಿ ವಿವಿಗೂ ಯಾವುದೇ ಸಂಬಂಧ ಇಲ್ಲ. ನಮ್ಮದು ಕೌಶಲಾಭಿವೃದ್ಧಿ ವಿವಿಯನ್ನು ಕಾರ್ಮಿಕ ಇಲಾಖೆಯ ಮೂಲಕ ಖಾಸಗಿ ಸಹಭಾಗಿತ್ವದಲ್ಲಿ ರಚನೆ ಮಾಡಲಾಗುತ್ತದೆ. ಕೇಂದ್ರದಿಂದ ಕರ್ನಾಟಕದಲ್ಲೇ ಸ್ಕಿಲ್‌ ವಿವಿ ನಿರ್ಮಿಸಿದರೆ ಇನ್ನಷ್ಟು ಅನುಕೂಲ ಆಗಲಿದೆ.
-ಬಸವರಾಜ ರಾಯರೆಡ್ಡಿ, ಉನ್ನತ ಶಿಕ್ಷಣ ಸಚಿವ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next