Advertisement

ವಿಶೇಷ ಚೇತನರ ಕೌಶಲ್ಯಾಭಿವೃದ್ಧಿಗೆ ಕ್ರಮ

01:06 PM May 20, 2019 | Team Udayavani |

ಕೋಲಾರ: ವಿಶೇಷ ಚೇತನ ಮಕ್ಕಳಲ್ಲಿ ಕೌಶಲ್ಯಾಭಿವೃದ್ಧಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ತಿಂಗಳಿಗೆ ಒಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ವಿಶೇಷ ಚೇತನರ ಸಬಲೀಕರಣ ಇಲಾಖೆ ಉಪನಿರ್ದೇಶಕ ವೆಂಕಟರಾಮ್‌ ಹೇಳಿದರು.

Advertisement

ನಗರ ಹೊರವಲಯದ ಅಂತರಗಂಗಾ ಬುದ್ಧಿಮಾಂದ್ಯರ ವಸತಿ ಶಾಲೆಯಲ್ಲಿ ಇಂಚರ ಸಂಸ್ಥೆ ಹಾಗೂ ಬೆಸ್ಟ್‌ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ಹಮ್ಮಿಕೊಂಡಿದ್ದ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗಾಗಿ ಚಿಲಿಪಿಲಿ ಮೇಳ, ಬೇಸಿಗೆ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಾತಿಗಿಂತ ಕೆಲಸದ ಕಡೆಗೆ ಆಸಕ್ತಿವಹಿಸುವುದು ಹೆಚ್ಚು ಉತ್ತಮ. ಹೀಗಾಗಿ ಪ್ರತಿಯೊಬ್ಬರೂ ಸುಮ್ಮನೆ ಕೂರದೆ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಅಂಗವಿಕಲರು ಎಂದು ಕೊರಗಿಕೊಂಡಿರುವ ಅವಶ್ಯಕತೆಯಿಲ್ಲ. ನಿಮಗೆ ಸಹಕಾರಿಯಾಗಿ ಇಲಾಖೆಯು ಎಂದಿಗೂ ಜತೆಯಲ್ಲಿದ್ದು, ಕೌಶಲ್ಯಾಭಿವೃದ್ಧಿಗೆ ಬೇಕಾದ ಮಾರ್ಗದರ್ಶನ ನೀಡಲು ಸೂಕ್ತ ಕಾರ್ಯಕ್ರಮ ಪ್ರತಿ ತಿಂಗಳು ನಡೆಸಲಾಗುವುದು. ತರಬೇತಿ ಮೂಲಕ ಉತ್ತಮ ಸಂಪನ್ಮೂಲ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಇಂಚರ ಸಂಸ್ಥೆಯ ನಾರಾಯಣಸ್ವಾಮಿ, ಎಲ್ಲ ಸರ್ಕಾರಗಳು, ಜನಪ್ರತಿನಿಧಿಗಳು ಮಕ್ಕಳ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರಿಗಾಗಿ ಪ್ರತ್ಯೇಕ ಬಜೆಟ್ ಇದುವರೆಗೂ ನೀಡದಿರುವುದು ವಿಷಾಧನೀಯ. ಮಕ್ಕಳಿಗಾಗಿ ವಿಶೇಷ ಪ್ಯಾಕೇಜ್‌ ನೀಡಿ ಇಂತಹ ಪ್ರಾಯೋಗಿಕ ಕಾರ್ಯಕ್ರಮ ಹೆಚ್ಚಾಗಿ ಹಮ್ಮಿಕೊಂಡಿದ್ದೇ ಆದಲ್ಲಿ ಪ್ರಯೋಜನಕಾರಿಯಾಗಿ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದು ವಿವರಿಸಿದರು.

ನೀವೂ ಸೇರಿಕೊಳ್ಳುತ್ತೀರಿ: ಅಧ್ಯಕ್ಷತೆವಹಿಸಿ ಮಾತನಾಡಿದ ಮನ್ವಂತರ ಪ್ರಕಾಶನದ ಅಧ್ಯಕ್ಷ ಅನಂತರಾಮ್‌, ದೈಹಿಕ-ಮಾನಸಿಕವಾಗಿ ಆರೋಗ್ಯದಿಂದ ಇರುವವರ ಸಾಧನೆಗಿಂತ ವಿಶೇಷ ಚೇತನರ ಸಾಧನೆಯು ಬೆಲೆಕಟ್ಟಲಾರದ್ದಾಗಿದೆ. ನಿಮ್ಮ ಮನಸ್ಸಿನಲ್ಲಿ ಅಡಗಿರುವ ಪ್ರತಿಭೆಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿದ್ದೇ ಆದಲ್ಲಿ ಭಾರತದ ಉತ್ತಮ ಪ್ರಜೆಗಳ ಸಾಲಿನಲ್ಲಿ ನೀವೂ ಸೇರಿಕೊಳ್ಳುತ್ತೀರಿ ಎಂದು ಹೇಳಿದರು.

Advertisement

ಅಳಿಲು ಸೇವೆ: ಮನುಷ್ಯರನ್ನು ಹೀಗೆ ಇರಬೇಕು ಎಂದು ದೇವರು ಸೃಷ್ಟಿಸಿಲ್ಲ. ಕಾರಣಾಂತರಗಳಿಂದಾಗಿ ವಿಶೇಷ ಚೇತನರಾಗಿದ್ದೀರಿ, ಅದಕ್ಕೆ ಸವಾಲಾಗಿ ನೀವು ಬೆಳೆಯಬೇಕೇ ಹೊರತು, ಕೊರಗಿ ಕೂರಬಾರದು ಎಂದ ಅವರು, ನಿಮಗೆ ಬೇಕಾದ ಅಗತ್ಯ ನೆರವನ್ನು ನಮ್ಮ ಸಂಸ್ಥೆಯಿಂದ ಅಳಿಲುಸೇವೆಯಂತೆ ನೀಡುವುದಾಗಿ ಭರವಸೆ ನೀಡಿದರು. ಬೆಸ್ಟ್‌ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆಯ ಅಧ್ಯಕ್ಷೆ ಅನುರಾಧಾ ಮಾತನಾಡಿ, ಪ್ರತಿ ತಿಂಗಳೂ ಒಂದು ಕಾರ್ಯಕ್ರಮವನ್ನು ನಡೆಸಲು ಸಂಸ್ಥೆಯು ಸಿದ್ಧವಿದ್ದು, ಇಲಾಖೆಯಿಂದ ಸಹಕರಿಸಬೇಕು ಎಂದು ಉಪನಿರ್ದೇಶಕರಿಗೆ ಮನವಿ ಮಾಡಿದರು. ಅಂತರಗಂಗಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶಂಕರ್‌, ಬೆಸ್ಟ್‌ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆಯ ಶಮ್ಗರ್‌, ಸಿ.ವಿ.ನಾಗರಾಜ್‌, ಮಹಿಮಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next