ಹೊಸದಿಲ್ಲಿ: ಕೋವಿಡ್ ಸೋಂಕು, ಲಾಕ್‌ಡೌನ್, ಆರ್ಥಿಕತೆ ಕುಸಿತ ಮತ್ತಿತರ ಬೆಳವಣಿಗೆಗಳಿಗೆ ಸಾಕ್ಷಿಯಾದ ದೇಶದ ಗಮನ ಈಗ ಕೇಂದ್ರ ಬಜೆಟ್‌ನತ್ತ ನೆಟ್ಟಿದೆ. ಸರಕಾರವು ಆದಾಯ ಕುಸಿತ ಎದುರಿಸುತ್ತಿದ್ದರೂ, ಹೆಚ್ಚಿನ ವೆಚ್ಚ ಮಾಡುವುದು ಅನಿವಾರ್ಯ ವಾಗಿದೆ. ಅಲ್ಲದೆ, ದೇಶವಾಸಿಗಳಿಗೆ ಕೊರೊನಾ ಲಸಿಕೆ ವಿತರಣೆಯ ಜವಾಬ್ದಾರಿಯೂ ಸರಕಾರದ ಮೇಲಿರುವ ಕಾರಣ, ಈ ವರ್ಷ ಸರಕಾರಕ್ಕೆ ವೆಚ್ಚದ ಹೊರೆ ಮತ್ತಷ್ಟು ಹೆಚ್ಚಾಗಲಿದೆ. ಇದಕ್ಕೆಲ್ಲ ಪರಿಹಾರವೆಂಬಂತೆ ಸರಕಾರ, ಬಜೆಟ್‌ನಲ್ಲಿ “ಕೋವಿಡ್-19 ಸೆಸ್’ ವಿಧಿಸಲು ಚಿಂತನೆ ನಡೆಸಿದೆ.
ಲಸಿಕೆ ವೆಚ್ಚ ಭರಿಸುವ ನಿಟ್ಟಿನಲ್ಲಿ “ಕೋವಿಡ್ ಸೆಸ್’ ಅಥವಾ ಸರ್‌ಜಾರ್ಜ್ ವಿಧಿಸಲು ಯೋಜಿಸಲಾಗಿದೆ. ಈ ಕುರಿತು ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಆದರೆ ಹೆಚ್ಚುವರಿ ಪರೋಕ್ಷ ತೆರಿಗೆಯ ಜತೆಗೆ ಹೆಚ್ಚು ಆದಾಯ ಗಳಿಸುವ ವರ್ಗದ ಮೇಲೆ ಈ ಸೆಸ್ ವಿಧಿಸುವ ಪ್ರಸ್ತಾವವಂತೂ ಇದೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್ ಸೆಸ್ ಅನ್ನು ಪರಿಚಯಿಸುವುದರ ಜತೆಗೆ, ಪೆಟ್ರೋಲಿ ಯಂ ಮತ್ತು ಡೀಸೆಲ್ ಮೇಲೆ ಈಗಿರುವ ಕಸ್ಟಮ್ಸ್ ಶುಲ್ಕವಲ್ಲದೇ, ಹೆಚ್ಚುವರಿಯಾಗಿ ಎಕ್ಸೆ„ಸ್ ಸೆಸ್ ವಿಧಿಸಲೂ ಸರಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಹಲ್ವಾ ಸಿದ್ಧತೆ ಇಲ್ಲ?: ಇದೇ ವೇಳೆ, ಬಜೆಟ್‌ಗೂ ಮುನ್ನ ಪ್ರತಿ ವರ್ಷದ ನಡೆಯುವ “ಸಾಂಪ್ರದಾಯಿಕ ಹಲ್ವಾ’ ಕಾರ್ಯಕ್ರಮ ಕೂಡ ಈ ಬಾರಿ ರದ್ದಾಗಲಿದೆ ಎಂದು ಮೂಲಗಳು ಹೇಳಿವೆ. ಈವರೆಗೆ ವಿತ್ತ ಸಚಿವರು, ವಿತ್ತ ಖಾತೆ ಸಹಾಯಕ ಸಚಿವರು ಮತ್ತು ಇತರ ಅಗತ್ಯ ಸಿಬಂದಿ, ಅಧಿಕಾರಿಗಳು ಹಲ್ವಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು.
ಸೋಂಕಿತರ ಸಂಖ್ಯೆ 9 ಕೋಟಿ: ಜಗತ್ತಿನಾದ್ಯಂತ ಕೋವಿಡ್ ಸೋಂಕು ದೃಢಪಟ್ಟವರ ಸಂಖ್ಯೆ ಸೋಮವಾರ 9 ಕೋಟಿ ದಾಟಿದೆ. ಈ ವರೆಗೆ ಸೋಂಕಿಗೆ 20 ಲಕ್ಷ ಮಂದಿ ಬಲಿಯಾಗಿದ್ದಾರೆ. ಭಾರತದಲ್ಲಿ ರವಿವಾರದಿಂದ ಸೋಮವಾರಕ್ಕೆ 24 ಗಂಟೆಗಳಲ್ಲಿ 16,311 ಮಂದಿಗೆ ಕೋವಿಡ್ ದೃಢಪಟ್ಟಿದ್ದು, 161 ಮಂದಿ ಸಾವಿಗೀಡಾಗಿ ದ್ದಾರೆ. ಭಾರತದಲ್ಲಿ ಯುಕೆಯ ಹೊಸ ಸ್ವರೂಪದ ಸೋಂಕು ತಗುಲಿರುವವರ ಸಂಖ್ಯೆ 96ಕ್ಕೇರಿದೆ ಎಂದು ಸರಕಾರ ತಿಳಿಸಿದೆ.
ಕೊವ್ಯಾಕ್ಸಿನ್ ಬಳಸಲ್ಲ ಎಂದು ಛತ್ತೀಸ್‌ಗಢ :
ಛತ್ತೀಸ್‌ಗಢದ ಕಾಂಗ್ರೆಸ್ ಸರಕಾರವು, ಎಲ್ಲಿಯವರೆಗೂ ಭಾರತ್ ಬಯೋಟೆಕ್‌ನ “ಕೊವ್ಯಾಕ್ಸಿನ್’ ಲಸಿಕೆಯ ಪ್ರಯೋಗ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲವೋ, ಅಲ್ಲಿಯವರೆಗೂ ನಮ್ಮ ರಾಜ್ಯದಲ್ಲಿ ಆ ಲಸಿಕೆಯನ್ನು ಬಳಸುವುದಿಲ್ಲ ಎಂದು ಘೋಷಿಸಿದೆ. ತನ್ಮೂಲಕ ಕೊವ್ಯಾಕ್ಸಿನ್ ಅನ್ನು ಬಳಸಲು ತಾನು ಸಿದ್ಧವಿಲ್ಲ ಎಂದು ಘೋಷಿಸಿದ ದೇಶದ ಮೊದಲ ರಾಜ್ಯವಾಗಿದೆ ಛತ್ತೀಸ್‌ಗಢ. “ಈ ಲಸಿಕೆಯ ತುರ್ತು ಬಳಕೆಗೆ ಮಾತ್ರ ಅನುಮತಿ ನೀಡಲಾಗಿದೆ. ಆದರೆ 3ನೇ ಹಂತದ ಪ್ರಯೋಗದ ಪೂರ್ಣ ವರದಿ ಬರುವವರೆಗೂ ಆ ಲಸಿಕೆಯಿಂದ ದೂರವಿರುತ್ತೇವೆ. ಇದನ್ನು ತೆಗೆದುಕೊಳ್ಳಿ ಎಂದು ಜನರಿಗೆ ಹೇಳುವುದಕ್ಕೆ ನನಗೆ ಭರವಸೆ ಇಲ್ಲ’ ಎಂದು ಆರೋಗ್ಯ ಸಚಿವ ಟಿಎಸ್ ಸಿಂಗ್ ಹೇಳಿದ್ದಾರೆ.