Advertisement

ಅಸ್ಥಿಪಂಜರ ಪತ್ತೆ: ಎಎಸ್‌ಪಿ ಭೇಟಿ

03:44 PM Apr 01, 2022 | Team Udayavani |

ಕಂಪ್ಲಿ: ತಾಲೂಕಿನ ರಾಮಸಾಗರ ಗ್ರಾಮದ ಹೊರವಲಯದ ಕೆರೆಗದ್ದೆ ಪ್ರದೇಶದ ಗುಡ್ಡದಲ್ಲಿ ಇತ್ತೀಚೆಗೆ ಕೊಳೆತ ಪುರುಷನ ಶವದ ಅಸ್ಥಿಪಂಜರ ದೊರಕಿದ ಸ್ಥಳಕ್ಕೆ ಬಳ್ಳಾರಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಗುರು ಬಿ ಮತ್ತೂರ್‌ ಭೇಟಿ ನೀಡಿ ಪರಿಶೀಲಿಸಿದರು.

Advertisement

ಕಳೆದ ನಾಲ್ಕು ದಿನಗಳ ಹಿಂದೆ ರಾಮಸಾಗರದ ಕರೆಗದ್ದೆ ಗುಡ್ಡದಲ್ಲಿ ಬಹುತೇಕ ಕೊಳೆತು ಹೋಗಿರುವ ಸ್ಥಿತಿಯಲ್ಲಿ ಪುರುಷನ ಅಸ್ಥಿಪಂಜರ ದೊರಕಿತ್ತು. ಅಂದು ಸ್ಥಳದಲ್ಲಿ ದೊರಕಿದ್ದ ತಲೆ ಬುರಡೆ, ದೇಹದ ವಿವಿಧ ಅಂಗಗಳ ಎಲುಬಗಳನ್ನು ಸಂಗ್ರಹಿಸಿ ತಂದು ಕಂಪ್ಲಿ ಠಾಣೆಯಲ್ಲಿ ಅನಾಮದೇಯ ಪುರಷನ ಅನುಮಾನಾಸ್ಪದ ಸಾವು ಪ್ರಕರಣ ಎಂದು ದಾಖಲಿಸಲಾಗಿತ್ತು. ಕಳೆದ ಸಂಜೆ ಹೆಚ್ಚುವರಿ ಎಸ್ಪಿ ಗುರು ಬಿ ಮತ್ತೂರು, ಕಂಪ್ಲಿ ಪಿಐ ಸುರೇಶ್‌ ಎಚ್‌. ತಳವಾರ್‌, ಪಿಎಸ್‌ಐ ವಿರೂಪಾಕ್ಷ ಹಾಗೂ ಗ್ರಾಮದ ಮುಖಂಡರೊಂದಿಗೆ ಅಸ್ತಿಪಂಜರ ದೊರೆತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಂತರ ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿ, ಇದೊಂದು ಅನುಮಾನಾಸ್ಪದ ಸಾವಾಗಿದ್ದು, ಯಾರದ್ದೆಂದು ತಿಳಿದು ಬಂದಿಲ್ಲ, ಈ ಬಗ್ಗೆ ಪತ್ತೆ ಹಚ್ಚಲು ಸೂಕ್ತಕ್ರಮ ಕೈಗೊಳ್ಳಲಾಗಿದೆ. ಎಲ್ಲ ಠಾಣೆಗಳಿಗೂ ಮಾಹಿತಿ ನೀಡಲಾಗಿದೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಿಗೆ ಅವಕಾಶವಿಲ್ಲ, ಅಂತಹ ಪ್ರಕರಣಗಳು ಕಂಡು ಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಕಂಪ್ಲಿ ಠಾಣೆ ಅತ್ಯಂತ ಹಳೆಯದಾಗಿದ್ದು, ಶಿಥಿಲಗೊಂಡಿದ್ದು, ಶೀಘ್ರದಲ್ಲಿಯೇ ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಪಿಐ ಸುರೇಶ ಎಚ್‌ ತಳವಾರ್‌, ಪಿಎಸ್‌ಐ ವಿರೂಪಾಕ್ಷ,ಗ್ರಾಮದ ಮುಖಂಡರಾದ ಎಚ್‌ ಜಗದೀಶಗೌಡ, ಬಿ.ನಾರಾಯಣಪ್ಪ ಹಾಗೂ ಇತರರು ಇದ್ದರು. ಹೆಚ್ಚುವರಿ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡು ನಂತರ ಪ್ರಥಮ ಬಾರಿಗೆ ಕಂಪ್ಲಿ ಠಾಣೆಗೆ ಭೇಟಿ ನೀಡಿದ ಎಎಸ್‌ಪಿ ಗುರು ಬಿ.ಮತ್ತೂರು ಅವರಿಗೆ ಕಂಪ್ಲಿ ಠಾಣೆಯಲ್ಲಿ ಪಿಐ ಸುರೇಶ್‌ ಎಚ್‌ ತಳವಾರ ನೇತೃತ್ವದಲ್ಲಿ ಪಿಎಸ್‌ಐ ವಿರೂಪಾಕ್ಷ ಮತ್ತು ಸಿಬ್ಬಂದಿ ಗೌರವ ವಂದನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next