Advertisement
ನಾಳೆ ಬೆಳಗ್ಗೆ ಶಾರ್ಪ್ ಆರೂವರೆಗೆ ಬಾಬಯ್ಯ ಕ್ರಾಸ್ ಬಳಿ ಇರ್ರಿ. ಅರಣ್ಯ ಇಲಾಖೆ “ಸಂಡೂರು ಅನ್ವೇಷಣೆ’ ಅಡಿಯಲ್ಲಿ ನಾರಿಹಳ್ಳ ವ್ಯೂವ್ ಪಾಯಿಂಟ್‌ಗೆ ಟ್ರೆಕ್ಕಿಂಗ್ ಆಯೋಜಿಸಿದೆ…’ ಹೀಗೆ ಸಂಡೂರು ಸಮಿಟರ್ಸ್‌ನ ನಾಗೇಂದ್ರ ಕಾವೂರು ಕಾಲ್ ಮಾಡಿ ತಿಳಿಸಿದರು. ಕೂಡ್ಲಿಗಿ-ಸಂಡೂರು ಮಧ್ಯೆ ಹೆಚ್ಚು ಕಮ್ಮಿ 30 ಕಿ.ಮೀ ಅಂತರ. ಹಾಗಾಗಿ ನಾನು ಐದೂವರೆಗೆಲ್ಲ ಕೂಡ್ಲಿಗಿಯಿಂದ ಹೊರಟೆ. ಆಗಿನ್ನೂ ಕತ್ತಲು ಕತ್ತಲು.
ವರ್ಣಿಸಲಾಗದ ಹಿತಾನುಭವ..!
Related Articles
Advertisement
ಏರಿದಂತೆಲ್ಲ “ಬೆಟ್ಟ’ ದಷ್ಟು ಖುಷಿ..ಬೆಟ್ಟ ಏರಿದಂತೆಲ್ಲ ಸ್ಕಂದಸಿರಿ (ಸಂಡೂರಿಗೆ ಇರುವ ಮತ್ತೂಂದು ಹೆಸರು)ಯ ನಿಸರ್ಗ ಸಿರಿಯ ಸಾಕ್ಷಾತ್ಕಾರ ಆಗುತ್ತಾ ಹೋಯಿತು. ದಾರಿಯಲ್ಲಿ ಸಿಗುವ ಹಚ್ಚಹಸಿರಿನ ದಟ್ಟ ಹುಲ್ಲೂ ಆಹ್ಲಾದ ನೀಡಿತು! ಕರಿ ಮೋಡಗಳ ಕಣ್ಣಾಮುಚ್ಚಾಲೆ ಆಟದ ಮಧ್ಯೆ ಇಣುಕುವ ರವಿಯ ಹೊಂಗಿರಣ ಇಳೆಗೆ ಜೀವ ಕಳೆ ತುಂಬಿ, ಇಡೀ ಪರಿಸರವನ್ನು ರಮ್ಯಗೊಳಿಸುತ್ತಿತ್ತು. ಬೀಳು-ಬೆಟ್ಟ, ಕಾಡು-ನಾಡಿನಲ್ಲಿಯ ಸಮೃದ್ಧ ಮರಗಿಡಗಳು, ಬಗೆ ಬಗೆಯ ಬೆಳೆಗಳು ಮಂತ್ರ ಮುಗ್ಧಗೊಳಿಸಿದವು. ಕಾನನ ಕುಸುಮಗಳ ಸೌಂದರ್ಯ ಮತ್ತು ಅವು ಸೂಸುತ್ತಿದ್ದ ಸುವಾಸನೆ ನಡಿಗೆಗೆ ಬ್ರೇಕ್ ಹಾಕುತ್ತಿತ್ತು. ಇಲ್ಲಿಂದ ಇಡೀ ಸಂಡೂರು ಅಷ್ಟೇ ಏಕೆ? ಸ್ವಾಮಿ ಮಲೈ, ರಾಮಘಡ.. ಬೆಟ್ಟ ಸಾಲುಗಳು ಒಂದೇ ನೋಟಕ್ಕೆ ದಕ್ಕಿದವು. ಸಂಡೂರಿನ ಅಷ್ಟೂ ದಾರಿಗಳು, ಹರಿಯುವ ಬಹುತೇಕ ಹಳ್ಳ-ಕೊಳ್ಳಗಳು, ನಾರಿಹಳ್ಳ ಒಡಲು, ತೊನೆದಾಡುವ ತೋಟ-ಗ¨ªೆಗಳು ಕಾಣಿಸಿದವು. ಮೋಹಕ, ಬೆರಗಿನ ಬೆಳಗಿನಲ್ಲಿ ಸ್ಕಂದ ಸಿರಿಯ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋತೆ. ಬೆಟ್ಟದ ನೆತ್ತಿ ಮುಟ್ಟಿದಾಗ ದಣಿವು ಮಾಯವಾಗಿ ಬೆಟ್ಟದಷ್ಟು ಖುಷಿ ಕೊಟ್ಟಿತು. ಮನಸ್ಸಿನಲ್ಲಿ ಉಳಿದ ವಿಷಾದ..!
ಬಿಸಿಲು ಏರುವ ಮುನ್ನ ಚಾರಣಕ್ಕೆ ಬೆನ್ನು ಮಾಡಿದ್ದಾಯಿತು. ಬೆಳಕು ಹರಿದಂತೆ, ಕರಿ ಮೋಡಗಳು ತೇಲಿ ಮುಂದಕ್ಕೆ ಇಲ್ಲವೆ ಕರಗಿದಂತೆ, ಪರಿಸರ ನಿಚ್ಚಳವಾದಂತೆ ಗಣಿಗಾರಿಕೆಯ ಕರಾಳತೆ ಕಾಣತೊಡಗಿತು. ಗಣಿಗಾರಿಕೆಯ ಅದ್ವಾನಗಳು, ಮುಕ್ಕಾದ ಬೆಟ್ಟಗುಡ್ಡಗಳು ಬಯಲಿಗೆ ಬಿದ್ದವು! ಇದರೊಟ್ಟಿಗೆ ಇಲ್ಲಿಗೆ ಬಂದು ಹೋಗುವ ಪ್ರವಾಸಿಗರು ದಾರಿ ಉದ್ದಕ್ಕೂ ಪ್ಲಾಸ್ಟಿಕ್ ಕವರ್, ಡ್ರಿಂಕ್ಸ್, ನೀರಿನ ಬಾಟಲ… ಇತ್ಯಾದಿಗಳನ್ನು ಎಸೆದು ಪರಿಸರ ಮಾಲಿನ್ಯ ಮಾಡಿದ್ದು ಖೇದವೆನಿಸಿತು. ವಾಪಸ್ ಮರಳುವಾಗ್ಗೆ ರೋಡ್‌ನಲ್ಲಿ ಮೈನ್ಸ್ ಲಾರಿಗಳ ಆರ್ಭಟ ಜೋರಾಗಿತ್ತು. ಇವುಗಳ ಭರಾಟೆಗೆ ಕೆಂಧೂಳು, ಕೆಂಪು ಕೆಸರನ್ನು ಮೆತ್ತಿಕೊಂಡ ಮರ, ಹೂವು ಬಳ್ಳಿ, ಗಿಡಗಂಟೆಗಳ ದುಸ್ಥಿತಿ ನೋಡಿ ಮನಸ್ಸು ಮಮ್ಮುಲ ಮರುಗಿತು. ಚಾರಣದ ಸಾರ್ಥಕತೆಯ ಖುಷಿ ಮೂಡ್ ಹೆಚ್ಚು ಹೊತ್ತು ಇರಲಿಲ್ಲ. ಮನಸ್ಸಿನ ಮೂಲೆಯಲ್ಲಿ ವಿಷಾದ ಉಳಿಯಿತು. ಇದೇ ಮಾನಸ ಸರೋವರ!
ಬೆಟ್ಟದ ತುತ್ತ ತುದಿಯ ಮೂರ್ನಾಲ್ಕು ಕಡೆಯ ಆಯಕಟ್ಟಿನ ಸ್ಥಳದಿಂದ ಇಡೀ ನಾರಿಹಳ್ಳವನ್ನು ನೋಡಿ ಮಂತ್ರಮುಗ್ಧನಾದೆ. 1982ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ತೆರೆ ಕಂಡ “ಮಾನಸ ಸರೋವರ’ ಚಲನಚಿತ್ರದಲ್ಲಿ ಕಾಣುವ “ಮಾನಸ ಸರೋವರ…’ ಇದೇ ಆಗಿದೆ! ಕಾರ್ಮೋಡ, ಮಂಜು ಕವಿದಾಗ, ನೀಲಾಗಸ ಇದ್ದಾಗ, ಬೆಳ್ಳಿ ಮೋಡಗಳು ಹಳ್ಳದ ಮೇಲೆ ಹರಡಿದಾಗ ಆ ನೆರಳು ಬೆಳಕಿನ ಆಟದಲ್ಲಿ ನಾರಿಹಳ್ಳದ ಪ್ರತಿ ನೋಟ ನಯನ ಮನೋಹರ, ನವನವೀನ, ಅನನ್ಯ ಅನಿಸುತ್ತದೆ. ಇಲ್ಲಿ ಆರಾಮಾಗಿ ಕುಳಿತು ನಾರಿಹಳ್ಳ ನೋಡಲು ದೊಡ್ಡ ದೊಡ್ಡ ಕಲ್ಲು ಹಾಸು, ಬಂಡೆಗಳಿವೆ. ನಾರಿಹಳ್ಳದ ಮಧ್ಯೆ ಇರುವ ಎರಡು ಗಂಡಿ ಬೆಟ್ಟಗಳು ನೀರಿನಲ್ಲಿ ತೇಲುತ್ತಿರುವಂತೆ ಕಾಣುತ್ತದೆ. ಅದೇ ಈ ಹಳ್ಳದ ಆಕರ್ಷಣೀಯ ಕೇಂದ್ರಬಿಂದು ಆಗಿದೆ. – ಸ್ವರೂಪಾನಂದ ಕೊಟ್ಟೂರು