Advertisement

ಮಂಗಳಯಾನಕ್ಕೆ ಆರರ ಸಂಭ್ರಮ

09:20 AM Sep 26, 2019 | mahesh |

ಮಂಗಳಯಾನದ ಕತೆಯೇ ರೋಚಕ. ಮಂಗಳಯಾನದ ಆರ್ಬಿಟರ್‌ನ ಆಯಸ್ಸು ಆರು ತಿಂಗಳು ಎಂದು ನಿಗದಿಯಾಗಿತ್ತು. ಆದರೆ ಅದು ಸೆ.24ಕ್ಕೆ ಐದು ವರ್ಷ ಪೂರ್ತಿಗೊಳಿಸಿ, ಆರನೇ ವರ್ಷಕ್ಕೆ ಕಾಲಿಸಿರಿದೆ. ಅಂದರೆ ನಿಗದಿತ ಅವಧಿಗಿಂತ ಹತ್ತು ಪಟ್ಟು ಅಧಿಕ ಆಯಸ್ಸನ್ನು ಅದು ಪಡೆದಂತಾಗಿದೆ. ದಕ್ಷಿಣ ಏಷ್ಯಾ ರಾಷ್ಟ್ರದಲ್ಲಿ ಆರು ವರ್ಷಗಳ ಹಿಂದೆ ಇಂಥದ್ದೊಂದು ಸಾಧನೆಯನ್ನು ಮಾಡಿದ ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ನಮ್ಮ ದೇಶ ಭಾರತ. ಇಲ್ಲಿದೆ ಆ ಸಾಧನೆಯ ಹಿನ್ನೋಟ.

Advertisement

1 ಸಾವಿರ ದಿನ ಪೂರೈಸಿತ್ತು
ಎರಡು ವರ್ಷಗಳ ಹಿಂದೆ ಅಂದರೆ 2017ರ ಜೂ.9ರಂದು ಆರ್ಬಿಟರ್‌ ಕಕ್ಷೆಯಲ್ಲಿ ಒಂದು ಸಾವಿರ ದಿನಗಳನ್ನು ಪೂರೈಸಿತ್ತು.(ಭೂಮಿಯ ಲೆಕ್ಕಾಚಾರದಲ್ಲಿ ಒಂದು ಸಾವಿರ ದಿನಗಳು)

ಮೊದಲ ಮಾಹಿತಿ ಬಿಡುಗಡೆ
ಮಂಗಳಯಾನದ ಆರ್ಬಿಟರ್‌ ಕಳುಹಿಸಿದ ಮಾಹಿತಿಯನ್ನು 2016ರ ಸೆ.24ರಂದು ಬಿಡುಗಡೆ ಮಾಡಲಾಗಿತ್ತು. ಐಎಸ್‌ಎಸ್‌ಡಿಸಿ ವೆಬ್‌ಸೈಟ್‌ (https://www.issdc.gov.in/)ಮೂಲಕ ಅದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ 1,381 ನೋಂದಾಯಿತ ಬಳಕೆದಾರರು 370 ಜಿಬಿ ಡೇಟಾವನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದರು.

ಮಂಗಳಯಾನ-2
ಮಂಗಳಯಾನ-2 ಇಸ್ರೋದ ಯೋಜನೆಯ ಬುಟ್ಟಿಯಲ್ಲಿ ಇದೆ. ಅದರ ವಿವರಗಳು ಇನ್ನೂ ಗೊತ್ತಾಗಬೇಕಷ್ಟೇ. 2024ರ ವೇಳೆಗೆ ಅದನ್ನು ಉಡಾಯಿಸುವ ಗುರಿಯನ್ನು ಇಸ್ರೋ ಹಾಕಿಕೊಂಡಿದೆ. 2016ರಲ್ಲಿ ಭಾರತ ಮತ್ತು ಫ್ರಾನ್ಸ್‌ ಮಂಗಳ ಗ್ರಹಕ್ಕಾಗಿ ಕೈಗೊಂಡಿದ್ದ ಯೋಜನೆಯನ್ನು ಕೈಗೆತ್ತಿಕೊಳ್ಳುವ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಿದ್ದವು. ಆದರೆ ಮೊದಲ ಹಂತದ ಯೋಜನೆಗೆ ಫ್ರಾನ್ಸ್‌ ಸಹಭಾಗಿತ್ವ ಇರಲಿಲ್ಲ. ಎರಡನೇ ಹಂತದ ಯೋಜನೆಗೆ ಇಸ್ರೋ ಇತರ ರಾಷ್ಟ್ರದ ಜತೆಗೆ ಸಹಭಾಗಿತ್ವ ಹೊಂದುವುದರ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಸ್ಪಷ್ಟವಾಗಿಲ್ಲ. ಈ ಯಾನದ ಉದ್ದೇಶವೇನೆಂದರೆ ಗ್ರಹದ ಆಕಾರ, ಅಲ್ಲಿ ಖನಿಜಗಳು ಇವೆಯೇ ಎನ್ನುವುದರ ಬಗ್ಗೆ ಅಧ್ಯಯನ ನಡೆಸುವುದು.

ಕಳುಹಿಸಿರುವ ಪ್ರಮುಖ ಮಾಹಿತಿ ಏನು?
ಅಂಗಾರಕನ ವರ್ಣದ ಚಿತ್ರಗಳು ಪ್ರಮುಖವಾದವುಗಳು. ಇದುವರೆಗೆ ಸುಮಾರು 980 ಫೋಟೋಗಳನ್ನು ಅದು ಕಳುಹಿಸಿದೆ. ಆರ್ಬಿಟರ್‌ನ ಐದು ಪೇ ಲೋಡ್‌ಗಳ ಮೂಲಕ
ಈ ಫೋಟೋಗಳು ಲಭ್ಯವಾಗಿವೆ.

Advertisement

ಮಂಗಳವೇ ಯಾಕಾಗಿತ್ತು?
ಬಾಹ್ಯಾಕಾಶದಲ್ಲಿ ಭೂಮಿಗೆ ಸಮೀಪದ ಎರಡು ಗ್ರಹಗಳೆಂದರೆ ಮಂಗಳ, ಶುಕ್ರ. ಈ ಪೈಕಿ ಮಂಗಳ ವೈಜ್ಞಾನಿಕವಾಗಿ ಅತ್ಯಂತ ಹೆಚ್ಚು ಆಸಕ್ತಿದಾಯಕ. ಏಕೆಂದರೆ ಅಲ್ಲಿ ನೀರು ಇದೆ ಎಂಬುದು ಸಂಶೋಧಕರ ತರ್ಕ. ಹೀಗಾಗಿ, ಅಲ್ಲಿ ಸಂಶೋಧನೆ ನಡೆಸುವ ನಿಟ್ಟಿನಲ್ಲಿ ಆಯ್ಕೆ ಮಾಡಲಾ ಯಿತು.

ಯಾನ ಬಗ್ಗೆ ಬಾಲಿವುಡ್‌ ಸಿನಿಮಾ
ಮಂಗಳಯಾನದ ಬಗ್ಗೆ ಸದ್ಯ ಬಾಲಿವುಡ್ಡಿಗರಿಂದ ಸಿನಿಮಾ ನಿರ್ಮಾಣವಾಗಿದೆ. ಆ.15ರಂದು ಅದು ತೆರೆ ಕಂಡಿತ್ತು. ಅಕ್ಷಯ ಕುಮಾರ್‌, ವಿದ್ಯಾ ಬಾಲನ್‌, ವಿಕ್ರಂ ಗೋಖಲೆ, ತಾಪಸಿ ಪನ್ನು ಮುಂತಾದವರು ನಟಿಸಿದ್ದಾರೆ. 32 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಸಿನಿಮಾ 288 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿದೆ. ಕನ್ನಡದ ಹಿರಿಯ ನಟ ದತ್ತಣ್ಣ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ.

ತಂಡದಲ್ಲಿ ಇದ್ದವರು
1.ಕೆ.ರಾಧಾಕೃಷ್ಣನ್‌- ಸದ್ಯ ನಿವೃತ್ತಿಯಾಗಿದ್ದಾರೆ. ಮಂಗಳಯಾನದ ಅವಧಿಯಲ್ಲಿ ಅವರು ಇಸ್ರೋ ಮುಖ್ಯಸ್ಥರಾಗಿದ್ದರು.
2. ಎಂ.ಅಣ್ಣಾದೊರೆ- ಯೋಜನಾ ನಿರ್ದೇಶಕರಾಗಿದ್ದವರು. ಚಂದ್ರಯಾನ-1 ಮತ್ತು ಚಂದ್ರಯಾನ-2ರಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದವರು.
3. ಎಸ್‌.ರಾಮಕೃಷ್ಣನ್‌ - ವಿಕ್ರಂ ಸಾರಾಭಾಯ್‌ೆ- ಬಾಹ್ಯಾಕಾಶ ಕೇಂದ್ರದ ನಿರ್ದೇಶಕ. ನಾಲ್ಕು ದಶಕಗಳ ಕಾಲ ಇಸ್ರೋದಲ್ಲಿ ವಿಜ್ಞಾನಿಯಾಗಿದ್ದವರು.
4. ಎಸ್‌.ಕೆ.ಶಿವಕುಮಾರ್‌- ಇಸ್ರೋ ಸ್ಯಾಟಲೈಟ್‌ ಕೇಂದ್ರದ ನಿರ್ದೇಶಕ. ಚಂದ್ರಯಾನ 1ರ ಟೆಲಿಮೆಟ್ರಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದರು.
5. ವಿ.ಅಧಿಮೂರ್ತಿ- ಮಂಗಳಯಾನ ಅನ್ನುವ ಯೋಜನೆಯ ವಿನ್ಯಾಸ ಮಾಡಿದ್ದವರು.
6. ಪಿ.ಕುಂಞಕೃಷ್ಣನ್‌- ಅವರು ಯೋಜನಾ ನಿರ್ದೇಶಕರು. ಪಿಎಸ್‌ಎಲ್‌ವಿ ಮೂಲಕ ನಡೆಸಲಾಗಿರುವ ಹಲವು ಉಡಾವಣೆಗಳ ಹಿಂದೆ ಕೆಲಸ ಮಾಡಿದ್ದವರು.

– 450 ಕೋಟಿ ರೂ.- ಮಂಗಳಯಾನದ ಮೊದಲ ಹಂತದ ವೆಚ್ಚ
-980ಕ್ಕೂ ಹೆಚ್ಚು- ಆರ್ಬಿಟರ್‌ ಕಳುಹಿಸಿರುವ ಫೋಟೋಗಳ ಸಂಖ್ಯೆ
– 2014ರ ಸೆ.24ರಂದು ಆರ್ಬಿಟರ್‌ ಮಂಗಳನ ಕಕ್ಷೆ ಪ್ರವೇಶಿಸಿದ ಮಹತ್ತರ ಸಾಧನೆಗೆ ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ಸಾಕ್ಷಿಯಾಗಿದ್ದರು.
ಇದೇ ವರ್ಷ ಚೀನಾ ಮಂಗಳನಲ್ಲಿ ಯಾತ್ರೆ ಕೈಗೊಳ್ಳಲು ಪ್ರಯತ್ನ ಮಾಡಿದರೂ, ಅದು ಕೈಗೂಡಿರಲಿಲ್ಲ.
– 2014ರವರೆಗೆ ಅಮೆರಿಕದಂಥ ರಾಷ್ಟ್ರಗಳಿಗೆ ಮಾತ್ರ ಮಂಗಳಯಾನ ಕೈಗೊಳ್ಳುವುದಕ್ಕೆ ಸಾಧ್ಯವಾಗಿತ್ತು. ಆ ವರ್ಷ ಇಸ್ರೋ ಆ ಸಾಧನೆ ಮಾಡಿ ದಾಖಲೆ ಸ್ಥಾಪಿಸಿತ್ತು.
– ಚಂದ್ರಯಾನ-1 ರ ಬಳಿಕ ನಮ್ಮ ದೇಶ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧಿಸಿದ ಅತ್ಯಪೂರ್ವ-ಅತಿ ದೊಡ್ಡ ಸಾಧನೆಯಾಗಿದೆ ಮಂಗಳಯಾನ-1

Advertisement

Udayavani is now on Telegram. Click here to join our channel and stay updated with the latest news.

Next