Advertisement

ಅಮ್ಮನಾದ ಬಳಿಕ ಸೆರೆನಾಗೆ ಮೊದಲ ಪ್ರಶಸ್ತಿ

10:01 AM Jan 14, 2020 | sudhir |

ಆಕ್ಲೆಂಡ್‌: ಸೆರೆನಾ ವಿಲಿಯಮ್ಸ್‌ 3 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿಕೊಂಡಿದ್ದಾರೆ. ಅವರೀಗ ಡಬ್ಲ್ಯುಟಿಎ ಆಕ್ಲೆಂಡ್‌ ಕ್ಲಾಸಿಕ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ. ರವಿವಾರ ನಡೆದ ಪ್ರಶಸ್ತಿ ಕಾಳಗದಲ್ಲಿ ಸೆರೆನಾ ಅಮೆರಿಕದವರೇ ಆದ ಜೆಸ್ಸಿಕಾ ಪೆಗ್ಯುಲಾ ವಿರುದ್ಧ 6-3, 6-4 ಅಂತರದ ಗೆಲುವು ಸಾಧಿಸಿದರು.

Advertisement

38ರ ಹರೆಯದ ಸೆರೆನಾ ವಿಲಿಯಮ್ಸ್‌ ತಾಯಿಯಾದ ಬಳಿಕ ಗೆದ್ದ ಮೊದಲ ಟೆನಿಸ್‌ ಪ್ರಶಸ್ತಿ ಇದಾಗಿದೆ. 2017ರಲ್ಲಿ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಬಳಿಕ ಸೆರೆನಾ ಯಾವುದೇ ಟ್ರೋಫಿಯನ್ನೆತ್ತಿ ಸಂಭ್ರಮಿಸಿರಲಿಲ್ಲ. ಇದರೊಂದಿಗೆ ವರ್ಷಾರಂಭದ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ನಲ್ಲಿ ಸೆಣಸಲು ಸೆರೆನಾಗೆ ಹೊಸ ಸ್ಫೂರ್ತಿ ಸಿಕ್ಕಿದಂತಾಗಿದೆ. ಇಲ್ಲಿ ಅವರು ದಾಖಲೆಯ 24ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

ಸೆರೆನಾರ ಗೆಳತಿಯೂ ಆದ 25ರ ಹರೆಯದ ಜೆಸ್ಸಿಕಾ ಪೆಗ್ಯುಲಾ ಸೆಮಿಫೈನಲ್‌ನಲ್ಲಿ ಮಾಜಿ ನಂ.1 ಆಟಗಾರ್ತಿ ಕ್ಯಾರೋಲಿನ್‌ ವೋಜ್ನಿಯಾಕಿ ಅವರನ್ನು ಮಣಿಸಿದ ಸ್ಫೂರ್ತಿಯಲ್ಲಿದ್ದರು. ಅದೇ ನಿರ್ಭೀತ ಆಟವನ್ನು ಇಲ್ಲಿಯೂ ಮುಂದುವರಿಸಿದರು. ಆದರೆ ಸೆರೆನಾ ಅವರ ಅನುಭವಕ್ಕೆ ಸಾಟಿಯಾಗಲು ಸಾಧ್ಯವಾಗಲಿಲ್ಲ.

ಇದು ಸೆರೆನಾ ವಿಲಿಯಮ್ಸ್‌ ಜಯಿಸಿದ 73ನೇ ಡಬ್ಲ್ಯುಟಿಎ ಪ್ರಶಸ್ತಿ. 1999ರಲ್ಲಿ ಅವರ ಪ್ರಶಸ್ತಿ ಬೇಟೆ ಆರಂಭವಾಗಿತ್ತು.

ಡಬಲ್ಸ್‌ನಲ್ಲಿ ಸೋಲು
ಇದೇ ಕೂಟದ ವನಿತಾ ಡಬಲ್ಸ್‌ ಫೈನಲ್‌ನಲ್ಲಿ ಕ್ಯಾರೋಲಿನ್‌ ವೋಜ್ನಿಯಾಕಿ ಜತೆಗೂಡಿ ಆಡಲಿಳಿದ ಸೆರೆನಾ ವಿಲಿಯಮ್ಸ್‌ ಸೋಲನುಭವಿಸಿದ್ದಾರೆ. ಅಮೆರಿಕದ ಅಸಿಯಾ ಮುಹಮ್ಮದ್‌-ಟೇಲರ್‌ ಟೌನ್‌ಸೆಂಡ್‌ 6-4, 6-4 ಅಂತರದ ಜಯ ಸಾಧಿಸಿ ಏರುಪೇರಿನ ಫ‌ಲಿತಾಂಶಕ್ಕೆ ಸಾಕ್ಷಿಯಾದರು. ಈ ಎರಡೂ ಜೋಡಿ ಯಾವುದೇ ಶ್ರೇಯಾಂಕ ಹೊಂದಿರಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.