Advertisement

ಸಿಕ್ಸ್‌ಪ್ಯಾಕ್‌ ತೋರಿಸೋಕೆ ನಾನು ಚಿತ್ರರಂಗಕ್ಕೆ ಬಂದಿಲ್ಲ

11:37 AM Sep 24, 2018 | |

ಸೂರ್ಯ ಅಭಿನಯದ “ಸಿಂಗಂ 3′ ಮತ್ತು ಅಲ್ಲು ಅರ್ಜುನ್‌ ಅಭಿನಯದ “ನಾ ಪೇರು ಸೂರ್ಯ’ ಚಿತ್ರಗಳಲ್ಲಿ ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅನೂಪ್‌ ಸಿಂಗ್‌ ಠಾಕೂರ್‌ ಈಗ ಕನ್ನಡಕ್ಕೆ ಬಂದಿದ್ದಾರೆ. ಹಾಗೆ ನೋಡಿದರೆ ಇದು ಅವರ ಮೊದಲ ಕನ್ನಡ ಚಿತ್ರವೇನಲ್ಲ. ಇದಕ್ಕೂ ಮುನ್ನ “ರೋಗ್‌’ ಚಿತ್ರದಲ್ಲಿ ಅವರು ನಟಿಸಿದ್ದರು. ಈಗ “ಉದ್ಘರ್ಷ’ದಲ್ಲಿ ಹೀರೋ ಆಗಿ ಮತ್ತು “ಯಜಮಾನ’ದಲ್ಲಿ ವಿಲನ್‌ ಆಗಿ ನಟಿಸುತ್ತಿದ್ದಾರೆ. ಈ ಎರಡು ಚಿತ್ರಗಳ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಅವರು ಇಟ್ಟಿದ್ದು, ಎರಡೂ ಚಿತ್ರಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

Advertisement

ಇತ್ತೀಚೆಗೆ “ಉದ್ಘರ್ಷ’ ಚಿತ್ರದ ಮೊದಲ ಪತ್ರಿಕಾಗೋಷ್ಠಿಗೆ ಬಂದ ಸಂದರ್ಭದಲ್ಲಿ ತಮ್ಮ ಚಿತ್ರಜೀವನದ ಕುರಿತು ಅವರು ಮನಬಿಚ್ಚಿ ಮಾತನಾಡಿದ್ದಾರೆ. ನಟನಾಗಬೇಕೆಂದು ಈ ಕ್ಷೇತ್ರಕ್ಕೆ ಬಂದ ಠಾಕೂರ್‌ ಅನೂಪ್‌ ಸಿಂಗ್‌ ಅದೆಷ್ಟು ಬಾರಿ ತಿರಸ್ಕಾರಗೊಂಡಿದ್ದರು ಗೊತ್ತಾ? ಅವರ ಮಾತಲ್ಲೇ ಹೇಳುವುದಾದರೆ 129 ಬಾರಿ ರಿಜೆಕ್ಟ್ ಆಗಿದ್ದರಂತೆ ಅವರು. ಕಿರಿಯ ಪೈಲೆಟ್‌ ಎಂದೆನಿಸಿಕೊಂಡಿದ್ದ ಅವರು, ನಟನಾಗಬೇಕೆಂದು ಆಸೆ ಇಟ್ಟುಕೊಂಡು ಬಂದಾಗ 129 ಬಾರಿ ರಿಜೆಕ್ಟ್ ಆಗಿ ಹೊರಹೋಗಿದ್ದರಂತೆ.

130ನೇ ಬಾರಿಗೆ ಅವರಿಗೆ ಸಿಕ್ಕಿದ್ದು ಧೃತರಾಷ್ಟ್ರನ ಪಾತ್ರ. “ಮಹಾಭಾರತ’ ಧಾರಾವಾಹಿಯಲ್ಲಿ ಧೃತರಾಷ್ಟ್ರನ ಪಾತ್ರ ಮಾಡಿದ್ದ ಅವರು, ಕ್ರಮೇಣ ಒಂದೊಂದೇ ಪಾತ್ರ ಮಾಡಿ ಗುರುತಿಸಿಕೊಂಡಿದ್ದಾರೆ. ಈಗ ಕನ್ನಡ, ತೆಲುಗು ಭಾಷೆಗಳಲ್ಲಿ ಬೇಡಿಕೆಯ ನಟರಾಗಿದ್ದಾರೆ. ಹಿಂದೊಮ್ಮೆ 129 ಬಾರಿ ರಿಜೆಕ್ಟ್ ಆಗಿದ್ದರಿಂದ ಸಾಕಷ್ಟು ಪಾಠ ಕಲಿತಿರುವ ಅನೂಪ್‌, ಸಾಕಷ್ಟು ಜನರಿಗೆ ಸಹಾಯ ಮಾಡುತ್ತಾ ಬಂದಿದ್ದಾರಂತೆ. ಜೀವನದಲ್ಲಿ ಸೋತಾಗ, ಲವ್‌ ಫೇಲ್ಯೂರ್‌ ಆದಾಗ ಆತ್ಮಹತ್ಯೆಯ ಬಗ್ಗೆ ಹಲವರು ಯೋಚಿಸುವುದು ಸಹಜ.

ಅವರೊಂದಿಗೆ ಪ್ರೇರಣೆಯ ಮಾತನಾಡಿ, ಅವರಲ್ಲಿ ಧೈರ್ಯ ತುಂಬುವ ಕೆಲಸಗಳನ್ನು ಮಾಡುತ್ತಾ ಬಂದಿರುವ ಅನೂಪ್‌ ಸಿಂಗ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ಸುಮಾರು 1.2 ಮಿಲಿಯನ್‌ ಅಭಿಮಾನಿಗಳು ಇದ್ದಾರಂತೆ. ಅವರಿಗಾಗಿ ಅನೂಪ್‌ ಪ್ರೇರಕ ಮಾತುಗಳನ್ನಾಡಿ ಸ್ಫೂರ್ತಿ ತುಂಬುತ್ತಾ ಇರುತ್ತಾರಂತೆ. ಅನೂಪ್‌ ಹಿಂದೊಮ್ಮೆ ಪೈಲಟ್‌ ಆಗಿದ್ದವರು. ಆ ನಂತರ ಬಾಡಿ ಬಿಲ್ಡರ್‌ ಆಗಿ ಬ್ಯಾಂಕಾಕ್‌ನಲ್ಲಿ ನಡೆದ ಬಾಡಿಬಿಲ್ಡಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದವರು. ನಟನೆ ಜೊತೆಗೆ ಗಾಯನದಲ್ಲೂ ಆಸಕ್ತಿ ಹೊಂದಿರುವವರು.

ದಿನಕ್ಕೆ ಜಿಮ್‌ನಲ್ಲಿ ಐದಾರು ಗಂಟೆ ಬಾಡಿ ಬಿಲ್ಡಿಂಗ್‌ ಮಾಡಿದರೆ, ಸುಮಾರು ಎರಡು ಗಂಟೆಗಳ ಕಾಲ ಗಾಯನ ತಾಲೀಮು ನಡೆಸುತ್ತಾರಂತೆ. “ಕಿಶೋರ್‌ ಕುಮಾರ್‌, ಮೊಹಮ್ಮದ್‌ ರಫಿ, ಜಗಜಿತ್‌ ಸಿಂಗ್‌ ಹಾಡುಗಳು ಅಂದರೆ ನನಗೆ ಬಹಳ ಇಷ್ಟ. ಜಗಜಿತ್‌ ಸಿಂಗ್‌ ಹಾಡುಗಳನ್ನು ನಾನು ಹಾಡುವುದನ್ನು ನೀವು ಕಣ್ಣುಮುಚ್ಚಿ ಕೇಳಿದರೆ, ನಿಮಗೆ ಜಗಜೀತ್‌ ಸಿಂಗ್‌ ಅವರೇ ಹಾಡಿದಂತೆ ಅನುಭವವಾಗುತ್ತದೆ’ ಎಂದು ವಿಶ್ವಾಸದಿಂದ ನುಡಿಯುತ್ತಾರೆ ಅನೂಪ್‌.

Advertisement

ಯಾವುದೇ ಬಾಷೆ ಇರಲಿ, ನಿರ್ಮಾಪಕರು ಮತ್ತು ನಿರ್ದೇಶಕರು ಅನೂಪ್‌ ಅವರನ್ನು ಹುಡುಕಿಕೊಂಡು ಬಂದು ಪಾತ್ರ ಕೊಡುವುದು ಅವರ ಬಾಡಿಗಾಗಿ. ಅಷ್ಟೇ ಅಲ್ಲ, ಪ್ರತಿ ಚಿತ್ರದಲ್ಲೂ ಅನೂಪ್‌ ತಮ್ಮ ದೇಹ ತೋರಿಸಲಿ, ಸಿಕ್ಸ್‌ ಪ್ಯಾಕ್‌ ತೋರಿಸಲಿ ಎಂದು ಬಯಸುತ್ತಾರಂತೆ. ಅದು ಅನೂಪ್‌ಗೆ ಸಹಜವಾಗಿಯೇ ಕಿರಿಕಿರಿ. “ನನಗೆ ಒಬ್ಬ ಒಳ್ಳೆಯ ನಟನಾಗಿ ಗುರುತಿಸಿಕೊಳ್ಳುವುದಕ್ಕೆ ಇಷ್ಟ. ಪ್ರತಿ ಚಿತ್ರದಲ್ಲೂ ದೇಹ ತೋರಿಸುವುದು ಕಷ್ಟ.

ಏಕೆಂದರೆ, ಪ್ರತಿ ದಿನ ದೇಹವನ್ನು ಒಂದೇ ತರಹ ಇಟ್ಟುಕೊಳ್ಳುವುದು ಕಷ್ಟ. ಫಿಟ್‌ ಆಗಿರುವುದು ಬೇರೆ, ಸಿಕ್ಸ್‌ಪ್ಯಾಕ್‌ ಬೇರೆ. ಸಿಕ್ಸ್‌ಪ್ಯಾಕ್‌ಗೆ ಸಾಕಷ್ಟು ತಯಾರಿಗಳು ಬೇಕಾಗುತ್ತದೆ. ದಿನಕ್ಕೆ 40 ಮೊಟ್ಟೆ ಬೇಕು. ಸಾಕಷ್ಟು ಕಸರತ್ತು ಬೇಕು. ಇದ್ದಕ್ಕಿದ್ದಂತೆ ಬಂದು ಸಿಕ್ಸ್‌ ಪ್ಯಾಕ್‌ ತೋರಿಸಿ ಅನ್ನುವವರೇ ಜಾಸ್ತಿ. ಕೆಲವರು ನನ್ನ ಸಿಕ್ಸ್‌ ಪ್ಯಾಕ್‌ ತೋರಿಸುವುದಕ್ಕೆಂದೇ ಬರುತ್ತಾರೆ. ಅದು ನನಗೆ ಇಷ್ಟವಾಗುವುದಿಲ್ಲ’ ಎನ್ನುತ್ತಾರೆ ಅನೂಪ್‌.

ಇನ್ನು “ಉದ್ಘರ್ಷ’ ಬಗ್ಗೆ ಮಾತನಾಡುವ ಅರು, “ಇದುವರೆಗೂ ವಿಲನ್‌ ಆಗಿ ಹೀರೋಗಳಿಂದ ಹೊಡೆಸಿಕೊಳ್ಳುವ ಪಾತ್ರಗಳನ್ನು ಮಾಡುತ್ತಿದ್ದೆ. ಈಗ ಮೊದಲ ಬಾರಿಗೆ ಹೀರೋ ಆಗಿ ವಿಲನ್‌ಗಳಿಗೆ ಹೊಡೆಯುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎನ್ನುವುದು ವಿಶೇಷ. ಇನ್ನು ಸುನೀಲ್‌ ಕುಮಾರ್‌ ದೇಸಾಯಿ ಅವರ ಪ್ಯಾಶನ್‌ ಬಹಳ ಇಷ್ಟವಾಯಿತು. ಅವರು ಪ್ರತಿಯೊಂದನ್ನೂ ಮಾಡಿ ತೋರಿಸೋರು. ಫೈಟ್‌ ಮಾಸ್ಟರ್‌, ಡ್ಯಾನ್ಸ್‌ ಮಾಸ್ಟರ್‌ಗಳೆಲ್ಲರೂ ಇದ್ದರೂ, ಇವರು ಮೂವ್‌ಮೆಂಟ್‌ ತೋರಿಸೋರು.

ಇನ್ನು ಒಂದು ದೃಶ್ಯದಲ್ಲಿ ರೊಮ್ಯಾನ್ಸ್‌ ಮಾಡುವುದನ್ನೂ ತೋರಿಸಿದರು. ಈ ಚಿತ್ರಕ್ಕಾಗಿ ಕಳೆದ ಒಂದೂವರೆ ವರ್ಷಗಳಿಂದ ಒಂದೇ ಹೇರ್‌ಸ್ಟೈಲ್‌ನಲ್ಲಿದ್ದೀನಿ. ಎಷ್ಟೋ ನಿರ್ದೇಶಕರು ತಮ್ಮ ಚಿತ್ರಕ್ಕೆ ನನ್ನ ಹೇರ್‌ಸ್ಟೈಲ್‌ ಬದಲಾಗಬೇಕೆಂದರು. ಆದರೆ, ಬದಲಾಯಿಸಿದರೆ, ಈ ಚಿತ್ರದಲ್ಲಿ ಕಂಟಿನ್ಯುಟಿ ಮಿಸ್‌ ಆಗಿಬಿಡುತ್ತದೆ. ಅದೇ ಕಾರಣಕ್ಕೆ ಈ ಚಿತ್ರದ ಚಿತ್ರೀಕರಣ ಸಂಪೂರ್ಣವಾದ ನಂತರ ಹೇರ್‌ಸ್ಟೈಲ್‌, ಲುಕ್‌ ಬದಲಾಯಿಸುತ್ತೇನೆ’ ಎನ್ನುತ್ತಾರೆ ಅನೂಪ್‌ ಠಾಕೂರ್‌.

Advertisement

Udayavani is now on Telegram. Click here to join our channel and stay updated with the latest news.

Next