Advertisement
ಕಂದಾಯ ಇಲಾಖೆಯ ದುರಂತ ನಿವಾರಣೆ ನಿಧಿಯನ್ನು ಬಳಸಿಕೊಂಡು ವಲಿಯಪರಂಬ ಪಂಚಾಯತ್‌ನ ತೃಕ್ಕರಿಪುರ ಕಡಪ್ಪುರ-ಮಾಡಕ್ಕಾಲ್ ಪ್ರದೇಶವನ್ನು ಸಂಪರ್ಕಿಸುವ, 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ 310 ಮೀಟರ್ ನೀಳದ ತೂಗು ಸೇತುವೆಯ ಆಯುಸ್ಸು ಕೇವಲ 58 ದಿನಗಳಿಗೆ ಸೀಮಿತವಾಗಿತ್ತು. 2013 ಎಪ್ರಿಲ್ 29 ರಂದು ಅಂದಿನ ಕಂದಾಯ ಸಚಿವ ಅಡೂರು ಪ್ರಕಾಶ್ ತೂಗು ಸೇತುವೆಯನ್ನು ಉದ್ಘಾಟಿಸಿದ್ದರು. ಅದೇ ವರ್ಷ ಜೂನ್ 27 ರಂದು ಈ ಸೇತುವೆ ಕುಸಿದು ಬಿದ್ದಿತ್ತು. ಇದರೊಂದಿಗೆ ಸ್ಥಳೀಯ ಜನರ ಹಲವು ವರ್ಷಗಳ ಕನಸು ಕೂಡಾ ಗಾಳಿಗೋಪುರದಂತಾಯಿತು. ತೂಗು ಸೇತುವೆ ಮುರಿದು ಬೀಳುವುದರ ಮೂಲಕ ಮತ್ತೆ ಸ್ಥಳೀಯ ಜನರಿಗೆ ಆಶ್ರಯವಾದದ್ದು ದೋಣಿ.
Related Articles
Advertisement
ಸಂಪರ್ಕ ಸೇತುವೆಯಾಗಿದ್ದ ತೂಗು ಸೇತುವೆ ಮುರಿದು ಬಿದ್ದು ವರ್ಷ ಆರು ಸಂದರೂ ಇನ್ನೂ ದುರಸ್ತಿಯಾಗದೇ ಪ್ರದರ್ಶನ ವಸ್ತುವಾಗಿದೆ ಮಾಡಕ್ಕಾಲ್ ತೂಗು ಸೇತುವೆ. ಕವ್ವಾಯಿ ಹಿನ್ನೀರಿನ ಮಾಡಕ್ಕಾಲ್ನಲ್ಲಿ ನಿರ್ಮಿಸಿದ ತೂಗು ಸೇತುವೆ ಮುರಿದು ಬಿದ್ದು ಆರು ವರ್ಷವಾದರೂ ಇನ್ನೂ ದುರಸ್ತಿಯಾಗದೆ ವ್ಯವಸ್ಥೆಗೆ ಕೈಕನ್ನಡಿಯಾಗಿ ನಿಂತಿದೆ.ಮುರಿದು ಬಿದ್ದ ತೂಗು ಸೇತುವೆಯ ಅವಿಶಿಷ್ಟಗಳನ್ನು ತೆರವುಗೊಳಿಸಲು ಕೇರಳ ಇಲಕ್ಟ್ರಿಕಲ್ಸ್ ಆ್ಯಂಡ್ ಅಲೈಡ್ ಎಂಜಿನಿಯರಿಂಗ್ ಕಂಪೆನಿ(ಕೆಲ್) ಯಾವುದೇ ಕ್ರಮ ತೆಗೆದುಕೊಂಡಿಲ್ಲ.ತೂಗು ಸೇತುವೆ ಮುರಿದು ಬಿದ್ದು ಹಿನ್ನೀರಿನಲ್ಲಿ ಮುಳುಗಿರುವ ಅವಿಶಿಷ್ಟಗಳನ್ನು ತೆರವುಗೊಳಿಸಬೇಕೆಂದು ಸಾರ್ವತ್ರಿಕ ಬೇಡಿಕೆ ಕೇಳಿ ಬಂದಿತ್ತು. ಮೀನುಗಾರಿಕೆ ಮತ್ತು ಜಲ ಸಾರಿಗೆಗೆ ಸೇತುವೆಯ ಅವಿಶಿಷ್ಟಗಳು ಅಡ್ಡಿಯಾಗು ತ್ತಿರುವುದರಿಂದ ಸ್ಥಳೀಯರು ಈ ಬೇಡಿಕೆಯನ್ನು ಮುಂದಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸೇತುವೆಯ ಮುರಿದು ಬಿದ್ದ ಉಕ್ಕಿನ ತುಂಡುಗಳನ್ನು ಪಕ್ಕಕ್ಕೆ ಸರಿಸಿ ಜನರನ್ನು ಸಾಗಿಸುವ ದೋಣಿ ಸಾಗಲು ಅನುವು ಮಾಡಿಕೊಡಲಾಗಿತ್ತು. ಅದೇ ವೇಳೆ ಅನುಮತಿ ಲಭಿಸಿದರೆ ಸೇತುವೆ ಅವಿಶಿಷ್ಟಗಳನ್ನು ಪೂರ್ಣವಾಗಿ ತೆರವುಗೊಳಿಸಲು ಸಿದ್ಧ ಎಂದು ಕೆಲ್ನ ಹಿರಿಯ ಅಧಿಕಾರಿಗಳು ಈ ಹಿಂದೆ ಭರವಸೆ ವ್ಯಕ್ತಪಡಿಸಿದ್ದರು.
ಅಂತಿಮ ವರದಿ ನೀಡಿಲ್ಲ
ಉದ್ಘಾಟನೆಯ ಬಳಿಕ ಕೇವಲ 58 ದಿನಗಳಲ್ಲಿ ಕುಸಿದು ಬಿದ್ದು ತೂಗು ಸೇತುವೆಯ ತಾಂತ್ರಿಕತೆಯ ಬಗ್ಗೆ ಚರ್ಚೆಗೆ ಗ್ರಾಸವಾಗಿತ್ತು. ತೂಗು ಸೇತುವೆ ಕುಸಿಯಲು ಕಾರಣದ ಬಗ್ಗೆ ಇನ್ನೂ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಹಲವು ತನಿಖೆ ಏಜೆನ್ಸಿಗಳು ಈಬಗ್ಗೆ ತನಿಖೆ ನಡೆಸಿತ್ತು. ಆದರೆ ಇನ್ನೂ ಅಂತಿಮ ವರದಿಯನ್ನು ನೀಡಿಲ್ಲ.
ನಿಬಂಧನೆ ಉಲ್ಲಂಘನೆ
ಏಕ ಕಾಲದಲ್ಲಿ 100 ಮಂದಿಗೆ ಮಾತ್ರವೇ ಸಾಗಲು ಸಾಧ್ಯವಾಗುವಂತೆ ಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ ಈ ನಿಬಂಧನೆಗಳನ್ನು ಉಲ್ಲಂಘಿಸಿ ಒಂದೇ ಅವಧಿಯಲ್ಲಿ ಸಾವಿರಕ್ಕೂ ಅಧಿಕ ಮಂದಿ ಸಾಗುತ್ತಿದ್ದರು. ಸೇತುವೆಯಲ್ಲಿ ನಿಗದಿತ ಮಂದಿಗಿಂತ ಅಧಿಕ ಜನರು ನಿಯಂತ್ರಣ ಮೀರಿ ಸಾಗುವುದರಿಂದ ಉಂಟಾ ಗುವ ದುರಂತಗಳಿಗೆ ಕಂಪೆನಿ ಹೊಣೆ ಯಾಗದು ಎಂದು ದಾಖಲೆ ಸಹಿತ ಕೆಲ್ ಕಂಪೆನಿ ಸೂಚನೆ ನೀಡಿತ್ತು. ವಿಜಿಲೆನ್ಸ್ ತನಿಖೆ ಪೂರ್ತಿಯಾಗುವ ಮುನ್ನವೇ ತೂಗು ಸೇತುವೆ ನಿರ್ಮಾಣದಲ್ಲಿನ ಕುಂದುಗಳು ಕಾರಣ ವೆನ್ನುತ್ತಿರುವುದು ಆಧಾರ ರಹಿತ ಎಂದು ಕೆಲ್ ಹೇಳಿದೆ. ಅನು ಮತಿ ಲಭಿಸಿದರೆ 6 ತಿಂಗಳಲ್ಲಿ ಸೇತುವೆ ನಿರ್ಮಿಸ ಲಾಗುವುದೆಂದು ಕೆಲ್ ಭರವಸೆ ನೀಡಿತ್ತು.
– ಪ್ರದೀಪ್ ಬೇಕಲ್