ಜೇವರ್ಗಿ: ಕಳೆದ ಎರಡು ಮೂರು ತಿಂಗಳಿಂದ ಕಾರ್ಯಾಚರಣೆ ನಡೆಸಿದ ಪೊಲೀಸರು 41 ದ್ವಿಚಕ್ರ ವಾಹನ ವಶಪಡಿಸಿಕೊಂಡು ಕಳ್ಳತನದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ತಿಳಿಸಿದರು.
ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವಾರು ತಿಂಗಳುಗಳಿಂದ ವಿವಿಧ ಕಡೆ ಬೈಕ್‌ಗಳ ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ನಗರದ ಎಂಎಸ್‌ಕೆಮಿಲ್ ಶಾಹಾ ಜಿಲಾನಿ ಕಾಲೋನಿ ನಿವಾಸಿ ಮಹ್ಮದ್ ರಫೀಕ್ ಅಬ್ದುಲ್ ಗನಿ ಇನಾಮದಾರ, ಪರ್ವೇಜ್ ಕಾಲೋನಿ ನಿವಾಸಿ ಇಮ್ರಾನ್ ಕಾಸಿಂ ಪಟೇಲ್, ಯಡ್ರಾಮಿ ತಾಲೂಕಿನ ಬೀಳವಾರ ಗ್ರಾಮದ ಆರೀಫ್ ಮೆಹಿಬೂಬ ಪಟೇಲ ಮಿಣಜಗಿ, ಇಬ್ರಾಹಿಂ ಖಾ ದೀರಪಟೇಲ್ ಮಿಣಜಗಿ, ಮಹ್ಮದ್ ಫಾರೂಖ್ ಅಬ್ದುಲ್ ರಹೆಮಾನ್, ಆಸೀಪ್ ಫಕೀರ ಪಟೇಲ್ ಸೇರಿದಂತೆ ಒಟ್ಟು ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.
ಜನನಿಬೀಡ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಹೋಂಡಾ ಶೈನ್, ಹೀರೋ ಸ್ಪ್ಲೆಂಡರ್ ಕಂಪನಿ ಬೈಕ್‌ಗಳನ್ನು ಮಾತ್ರ ಕಳ್ಳತನ ಮಾಡುತ್ತಿದ್ದ ಈ ಆರೋಪಿಗಳು, ನಕಲಿ ಕೀ ಬಳಸುತ್ತಿದ್ದರು. 21 ಸ್ಪ್ಲೆಂಡರ್, 19 ಹೋಂಡಾ ಶೈನ್, ಒಂದು ಟಿವಿಎಸ್ ಜುಪೀಟರ್ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಒಂಭತ್ತು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಎಂಟು ಪ್ರಕರಣಗಳು ಪತ್ತೆಯಾಗಿವೆ.
ಕಲಬುರಗಿ ಚೌಕ್ ಪೊಲೀಸ್ ಪೊಲೀಸ್ ಠಾಣೆಯ ಒಂದು, ಬ್ರಹ್ಮಪುರ ಪೊಲೀಸ್ ಠಾಣೆಯ ಮೂರು, ರೋಜಾ ಪೊಲೀಸ್ ಠಾಣೆಯ ಒಂದು, ಅಶೋಕನಗರ ಪೊಲೀಸ್ ಠಾಣೆಯ ಒಂದು, ಸ್ಟೇಶನ್ ಬಜಾರ ಪೊಲೀಸ್ ಠಾಣೆಯ ಎರಡು, ಶಹಾಪುರ ನಗರದಲ್ಲಿ ಎರಡು, ಯಾದಗಿರಿ ನಗರದ ಎರಡು ದ್ವಿಚಕ್ರವಾಹನಗಳ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಿದರು.
ಜೇವರ್ಗಿ, ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ ನಡೆದ ಕಳ್ಳತನ ಪ್ರಕರಣಗಳನ್ನು ಜೇವರ್ಗಿ ಪೊಲೀಸ್ ಠಾಣೆ ಸಿಪಿಐ, ಶಿವಪ್ರಸಾದ ಮಠದ, ಪಿಎಸ್‌ಐ ಸಂಗಮೇಶ ಅಂಗಡಿ, ಅಪರಾಧ ವಿಭಾಗದ ಪಿಎಸ್‌ಐ ಸಿದ್ರಾಮಪ್ಪ ಹಾಗೂ ಸಿಬ್ಬಂದಿಗಳಾದ ಬಸನಗೌಡ, ಯಲ್ಲಾಲಿಂಗ, ಶ್ರೀಮಂತ, ಅಂಬರೇಷ, ಆನಂದ ನಾಯ್ಕ, ಶಿವಲಿಂಗಪ್ಪ ಪ್ರಕರಣಗಳನ್ನು ಪತ್ತೆ ಮಾಡಿ ಕಳ್ಳರನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.
ಎಎಸ್‌ಐ ಗುರಯ್ಯ ಹಿರೇಮಠ, ಅಪರಾಧ ವಿಭಾಗದ ಪೊಲೀಸ್ ಸಿಬ್ಬಂದಿ ಗಳಾದ ಲಾಲಪ್ಪ, ಉಮೇಶ, ಸಿದ್ಧಲಿಂಗ ರೆಡ್ಡಿ, ಧರ್ಮರಾಜ, ಅನಿಲಕುಮಾರ, ಸಿದ್ಧಣ್ಣ, ವೀರಣ್ಣಗೌಡ, ಚಂದ್ರಾಮ ನಡಿಹಾಳ, ರಾಜಕುಮಾರ, ಅವ್ವಣ್ಣ, ಶಿವರಾಯ, ಸಕರಾಮ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.